ಒಡಿಶಾ: ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ (odisha students suicide case) ಸಂಬಂಧಿಸಿ ಒಡಿಶಾ ಸಾರಿಗೆ ಸಚಿವ (Odisha Transport Minister) ಬಿಭೂತಿ ಭೂಷಣ್ ಜೇನಾ (Bibhuti Bhusan Jena) ಅವರ ಸೋದರಳಿಯನನ್ನು ಬಂಧಿಸಲಾಗಿದೆ. ಗಂಜಾಂ ಜಿಲ್ಲೆಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಬಿಸ್ವಜಿತ್ ಜೇನಾ ಪ್ರಚೋದಿಸಿದ್ದಾನೆ ಎಂದು ಆರೋಪಿಸಲಾಗಿದೆ. 20 ವರ್ಷದ ವಿದ್ಯಾರ್ಥಿನಿ ಸಾವಿಗೆ ಸಂಬಂಧಿಸಿ ಬಿಸ್ವಜಿತ್ ಜೇನಾ (24) ಎಂಬಾತನನ್ನು ಬಂಧಿಸಲಾಗಿದೆ. ಬಿಸ್ವಜಿತ್ ಜೇನಾ ಒಡಿಶಾ ಸಾರಿಗೆ ಸಚಿವ ಬಿಭೂತಿ ಭೂಷಣ್ ಜೇನಾ ಅವರ ಸೋದರಳಿಯ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಜಾಂ ಜಿಲ್ಲೆಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಪಡೆಯುತ್ತಿದ್ದ ವಿದ್ಯಾರ್ಥಿನಿಯ ಗೆಳೆಯನಾಗಿದ್ದ ಬಿಸ್ವಜಿತ್ ಜೇನಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸಹೋದರಿ ಮತ್ತು ಇತರ ಮೂವರು ರೂಮ್‌ಮೇಟ್‌ಗಳೊಂದಿಗೆ ಹಾಸ್ಟೆಲ್ ನಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿಯು ಶನಿವಾರ ಹಾಸ್ಟೆಲ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿದ್ಯಾರ್ಥಿನಿಯ ಮಾವ ಸಲ್ಲಿಸಿದ ದೂರಿನ ಆಧಾರದ ಮೇಲೆ ಗೋಲಂಥರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಬೆರ್ಹಾಂಪುರ್ ಪೊಲೀಸ್ ವರಿಷ್ಠಾಧಿಕಾರಿ ಸರವಣ ವಿವೇಕ್, ಮಾಹಿತಿ ತಿಳಿದ ತಕ್ಷಣವೇ ಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ವೈಜ್ಞಾನಿಕ ತಂಡ ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕೂಡ ಸ್ಥಳಕ್ಕೆ ಹೋಗಿದ್ದಾರೆ. ವಿದ್ಯಾರ್ಥಿನಿಯ ಮಾವ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಬಿಸ್ವಜಿತ್ ಜೇನಾ ಕೂಡ ಅದೇ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ವಿದ್ಯಾರ್ಥಿನಿ ಸಾವಿಗೆ ನಿಖರ ಕಾರಣವೇನೆಂದು ತಿಳಿದು ಬರಲಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಕುರಿತು ಸಾರಿಗೆ ಸಚಿವ ಬಿಭೂತಿ ಭೂಷಣ್ ಜೇನಾ ಸೇರಿದಂತೆ ಅವರ ಕುಟುಂಬ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಜೆಡಿಯ ಗಂಜಾಂ ಜಿಲ್ಲಾಧ್ಯಕ್ಷ ಮಾಜಿ ಶಾಸಕ ರಮೇಶ್ ಚಂದ್ರ ಅಯೌ ಪಟ್ನಾಯಕ್ ಅವರು ಪ್ರಕರಣದ ಆರೋಪಿ ಯಾರೇ ಆಗಿರಲಿ. ಸಚಿವರ ಸಂಬಂಧಿ ಆಗಿದ್ದರೂ ಕೂಡ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿಯ ಗಂಜಾಂ ಜಿಲ್ಲಾಧ್ಯಕ್ಷ ಸರೋಜ್ ಸಬತ್ ಅವರು ಪ್ರತಿಕ್ರಿಯಿಸಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸತ್ಯ ಏನೆಂದು ಶೀಘ್ರದಲ್ಲೇ ಎಲ್ಲರಿಗೂ ಗೊತ್ತಾಗಲಿದೆ ಎಂದು ಹೇಳಿದ್ದಾರೆ.