ಚಂಡೀಗಢ, ಏ. 14: ವಿವಾಹಿತ ಮಹಿಳೆಯೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪದ ಮೇಲೆ 25 ವರ್ಷದ ಯುವಕನೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಬರ್ಬರವಾಗಿ ಹೊಡೆದು ಕೊಂದಿರುವ ಘಟನೆ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ನಡೆದಿದೆ. ಈ ಘೋರ ಹಲ್ಲೆಯ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮೃತ ಯುವಕನನ್ನು ಖೋಖರ್ ರಸ್ತೆಯ ನಿವಾಸಿ ಜಶನ್‌ದೀಪ್ ಸಿಂಗ್ (Jashandeep Singh) ಎಂದು ಗುರುತಿಸಲಾಗಿದೆ. ಅದೇ ಪ್ರದೇಶದ ನಿವಾಸಿ, ಮೂವರು ಮಕ್ಕಳ ತಾಯಿಯೊಂದಿಗೆ ಜಶನ್‌ದೀಪ್ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ ಮಹಿಳೆಯ ಕುಟುಂಬಸ್ಥರು ಆತನನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ಜಶನ್‌ದೀಪ್ ತಂದೆ ಗುರುಸೇವಕ್ ಸಿಂಗ್ ಮಾತನಾಡಿ, "ಬೊಲೆರೋ ವಾಹನದಲ್ಲಿ ಬಂದ ಐದಾರು ಪುರುಷರು ಮತ್ತು ಇಬ್ಬರು ಮಹಿಳೆಯರ ತಂಡವು ನನ್ನ ಮಗನ ಮೇಲೆ ಬೀದಿಯಲ್ಲೇ ಮನಬಂದಂತೆ ಹಲ್ಲೆ ನಡೆಸಿತು" ಎಂದು ನೋವು ತೋಡಿಕೊಂಡಿದ್ದಾರೆ.
ಛತ್ತೀಸ್‌ಗಢ ಸಶಸ್ತ್ರ ಬಂಡುಕೋರ ಮುಕ್ತ ಎಂದು ಸರ್ಕಾರ ಘೋಷಿಸಿದ ಕೆಲವೇ ದಿನಗಳಲ್ಲಿ ಮಹಿಳಾ ಮಾವೋವಾದಿಯ ಹತ್ಯೆ
ಮೃತ ಯುವಕನ ತಾಯಿಯ ಪ್ರಕಾರ, ಆ ಮಹಿಳೆಯು ಪದೇ ಪದೆ ಜಶನ್‌ದೀಪ್‌ಗೆ ಕರೆ ಮಾಡುತ್ತಿದ್ದಳು. ಕರೆ ಮಾಡದಂತೆ ಹಲವು ಬಾರಿ ವಿನಂತಿಸಿದರೂ ಆಕೆ ಕೇಳುತ್ತಿರಲಿಲ್ಲ. ʼʼಸೋಮವಾರ ಮಹಿಳೆಯ ಕುಟುಂಬದವರು ಜಶನ್‌ದೀಪ್‌ನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ಈ ಭೀಕರ ಹಲ್ಲೆಯಿಂದಾಗಿ ಯುವಕನ ಕೈಕಾಲುಗಳು ಮುರಿದು ಹೋಗಿದ್ದು, ದೇಹದಾದ್ಯಂತ ಗಂಭೀರ ಗಾಯಗಳಾಗಿದ್ದವು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನ ಸಹೋದರಿ ಹರ್ಮನ್‌ದೀಪ್ ಸಿಂಗ್ ಮಾತನಾಡಿ, "ಅವರು ನನ್ನ ಸಹೋದರನನ್ನು ಅಸಹಾಯಕ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದರು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಹೇಳಿದ್ದಾರೆ. ಹೀಗಾಗಿ ಅವರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಘಟನೆ ನಡೆದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ವೈಯಕ್ತಿಕ ದ್ವೇಷಕ್ಕಾಗಿ ಕಾನೂನನ್ನು ಕೈಗೆತ್ತಿಕೊಂಡು ಹೀಗೆ ಅಮಾನುಷವಾಗಿ ಹತ್ಯೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಇಂತಹ 'ವಿಜಿಲಾಂಟೆ ಜಸ್ಟಿಸ್' ಅಥವಾ ತಾವೇ ನ್ಯಾಯ ತೀರಿಸುವ ಪ್ರವೃತ್ತಿ ಅತ್ಯಂತ ಅಪಾಯಕಾರಿ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.