ಛತ್ತೀಸ್‌ಗಢ ಸಶಸ್ತ್ರ ಬಂಡುಕೋರ ಮುಕ್ತ ಎಂದು ಸರ್ಕಾರ ಘೋಷಿಸಿದ ಕೆಲವೇ ದಿನಗಳಲ್ಲಿ ಮಹಿಳಾ ಮಾವೋವಾದಿಯ ಹತ್ಯೆ
ಮಾರ್ಚ್ 31ರಂದು ಎಡಪಂಥೀಯ ಉಗ್ರ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತಂದಿರುವುದಾಗಿ ಸರ್ಕಾರ ಘೋಷಿಸಿದ ಕೆಲವೇ ದಿನಗಳಲ್ಲಿ, ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳಾ ಮಾವೋವಾದಿ ರೂಪಿಯನ್ನು ಹತ್ಯೆ ಮಾಡಲಾಗಿದೆ. ಬಸ್ತಾರ್ ವಲಯದಲ್ಲಿ ಭದ್ರತಾ ಸವಾಲನ್ನು ಎತ್ತಿ ಹಿಡಿದಿದೆ.
ಸಾಂದರ್ಭಿಕ ಚಿತ್ರ -
ಛತ್ತೀಸ್‌ಗಢ, ಏ. 13: ಛತ್ತೀಸ್‌ಗಢವನ್ನು (Chhattisgarh) ಸಶಸ್ತ್ರ ಎಡಪಂಥೀಯ ಬಂಡುಕೋರರಿಂದ ಮುಕ್ತಗೊಳಿಸಲಾಗಿದೆ ಎಂದು ಮಾರ್ಚ್ 31ರಂದು ಸರ್ಕಾರ ಅಧಿಕೃತವಾಗಿ ಘೋಷಿಸಿದ ಕೇವಲ ಕೆಲವೇ ದಿನಗಳಲ್ಲಿ, ಕಾಂಕೇರ್ (Kanker) ಜಿಲ್ಲೆಯಲ್ಲಿ ಸೋಮವಾರ ನಡೆದ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಮಹಿಳಾ ಮಾವೋವಾದಿ (Maoist) ಹತಳಾಗಿದ್ದಾಳೆ.
ಜಂಟಿ ಭದ್ರತಾ ಪಡೆಯು ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಕಾಡಿನ ಪ್ರದೇಶಕ್ಕೆ ತೆರಳಿದಾಗ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ಈವರೆಗೆ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಮಹಿಳಾ ಮಾವೋವಾದಿಯ ಶವ ಮತ್ತು ಒಂದು ಶಸ್ತ್ರಾಸ್ತ್ರವನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತ ನಕ್ಸಲೀಯಳನ್ನು ಮಾವೋವಾದಿಗಳ ಪರ್ತಾಪುರ ಪ್ರದೇಶ ಸಮಿತಿಯ ಸದಸ್ಯೆ ರೂಪಿ ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಯುವಕನನ್ನು ಅಪಹರಿಸಿ ಯುವತಿ ವೇಷ ಹಾಕಿಸಿ ಲೈಂಗಿಕ ಸೇವೆಗೆ ಬಳಕೆ, ಲಿಂಗ ಬದಲಾವಣೆಗೆ ಒತ್ತಡ
ಕಳೆದ ತಿಂಗಳು ಸಂಸತ್ತಿನಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ʼʼದೇಶಾದ್ಯಂತ ಎಡಪಂಥೀಯ ಉಗ್ರಗಾಮಿ ಚಟುವಟಿಕೆಗಳನ್ನು ಕೊನೆಗೊಳಿಸಲು ನಿಗದಿಪಡಿಸಿದ್ದ ಮಾರ್ಚ್ 31ರ ಗಡುವು ಯಶಸ್ವಿಯಾಗಿ ಪೂರೈಸಲ್ಪಟ್ಟಿದೆʼʼ ಎಂದು ತಿಳಿಸಿದ್ದರು. ಕಳೆದ ಮೂರು ವರ್ಷಗಳ ತೀವ್ರ ಕಾರ್ಯಾಚರಣೆಯ ಅವಧಿಯಲ್ಲಿ ಸುಮಾರು 4,839 ಮಾವೋವಾದಿಗಳು ಶರಣಾಗಿದ್ದಾರೆ. 706 ಮಂದಿ ಹತರಾಗಿದ್ದಾರೆ ಮತ್ತು 2,218 ಜನರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ ಎಂದು ಶಾ ವಿವರಿಸಿದ್ದರು.
ಇದೇ ವೇಳೆ, ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಕಳೆದ ಮಂಗಳವಾರ (ಏಪ್ರಿಲ್ 7) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಮಾವೋವಾದಿಗಳ ಭದ್ರಕೋಟೆಯಾಗಿದ್ದ ಬಸ್ತಾರ್ ವಲಯದ ಅಭಿವೃದ್ಧಿಗಾಗಿ ವಿಶೇಷ ಮಾರ್ಗಸೂಚಿಯನ್ನು ಸಲ್ಲಿಸಿದರು. ಈ ಯೋಜನೆಯು ಶಿಕ್ಷಣ ಕೇಂದ್ರಗಳು, ವೈದ್ಯಕೀಯ ಕಾಲೇಜು, ನೀರಾವರಿ ಯೋಜನೆಗಳು ಮತ್ತು ಪರಿಸರ ಪ್ರವಾಸೋದ್ಯಮದ ಭಾಗವಾಗಿ ಕಾಡಿನೊಳಗೆ ಗಾಜಿನ ಸೇತುವೆ ಹಾಗೂ ಕ್ಯಾನೋಪಿ ವಾಕ್ ನಿರ್ಮಾಣದಂತಹ ಪ್ರಸ್ತಾವನೆಗಳನ್ನು ಒಳಗೊಂಡಿದೆ. ದಶಕಗಳ ಕಾಲ ಬಸ್ತಾರ್, ದಂತೇವಾಡ, ಸುಕ್ಮಾ ಮತ್ತು ಕಾಂಕೇರ್ ಜಿಲ್ಲೆಗಳು ನಕ್ಸಲ್ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದವು. ಈಗ ಅಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಯುಗವನ್ನು ಆರಂಭಿಸಲು ಸರ್ಕಾರ ಉದ್ದೇಶಿಸಿದೆ. ಮಾವೋವಾದಿಗಳ ಅಸ್ತಿತ್ವ ಸಂಪೂರ್ಣ ಅಳಿದಿದೆ ಎಂಬ ಭರವಸೆಯ ನಡುವೆ ಈ ಇತ್ತೀಚಿನ ಘಟನೆಯು ಭದ್ರತಾ ದೃಷ್ಟಿಯಿಂದ ಸವಾಲಾಗಿ ಪರಿಣಮಿಸಿದೆ.