ಬ್ಯಾಂಕಾಕ್: ಈಶಾನ್ಯ ಥೈಲೆಂಡ್ (Thailand)ನ ಮುಕ್ಡಹಾನ್ (Mukdahan) ಪ್ರಾಂತ್ಯದಲ್ಲಿ ಗುರುವಾರ ನಡೆದ ಭೀಕರ ರಸ್ತೆ ಅಪಘಾತ (Road Accident)ದಲ್ಲಿ ಪಾದಯಾತ್ರೆಯಲ್ಲಿದ್ದ ಬೌದ್ಧ ಭಿಕ್ಷುಕರು (Buddhist Monks) ಗುಂಪಿನ ಮೇಲೆ ಪಿಕಪ್ ಟ್ರಕ್ (Pickup Truck) ಹರಿದ ಪರಿಣಾಮ 9 ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಭಿಕ್ಷುಕರು ಮುಕ್ಡಹಾನ್ ಪ್ರಾಂತ್ಯದವರಾಗಿದ್ದು, ಸುಮಾರು 35 ಮಂದಿ ಸೇರಿ ಉಬೋನ್ ರಾಚಥಾನಿ ಪ್ರಾಂತ್ಯದತ್ತ 260 ಕಿಲೋಮೀಟರ್‌ಗಳ ಧಾರ್ಮಿಕ ಪಾದಯಾತ್ರೆ ಕೈಗೊಂಡಿದ್ದರು. ಯಾತ್ರೆ ಆರಂಭಿಸಿ ಕೇವಲ 30 ನಿಮಿಷಗಳಲ್ಲೇ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳದಲ್ಲೇ ಐವರು ಮೃತಪಟ್ಟರೆ, ಆಸ್ಪತ್ರೆಗೆ ದಾಖಲಿಸಿದ ಬಳಿಕ ಇನ್ನೂ ನಾಲ್ವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, 11 ವರ್ಷದ ಬಾಲಕ ತನ್ನ ಪೋಷಕರ ಪಿಕಪ್ ಟ್ರಕ್ ಅನ್ನು ಅನುಮತಿಯಿಲ್ಲದೆ ಚಲಾಯಿಸಿದ್ದಾನೆ. ವಾಹನವು ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಒಂದೇ ಸಾಲಿನಲ್ಲಿ ನಡೆದು ಹೋಗುತ್ತಿದ್ದ ಭಿಕ್ಷುಕರ ಗುಂಪಿನ ಮೇಲೆ ಹರಿದಿದೆ. ಘಟನೆಯ ಸಿಸಿಟಿವಿ ದೃಶ್ಯಗಳಲ್ಲಿ ವಾಹನ ಅಡ್ಡಾದಿಡ್ಡಿಯಾಗಿ ಚಲಿಸಿ ಭಿಕ್ಷುಕರಿಗೆ ಡಿಕ್ಕಿ ಹೊಡೆಯುವ ದೃಶ್ಯ ದಾಖಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಜಾಹೀರಾತು; ಮೆಟಾಗೆ ಕೇಂದ್ರದಿಂದ ಸಮನ್ಸ್ ಜಾರಿ
ಅಪಘಾತದಿಂದ ಪಾರಾದ ಭಿಕ್ಷುಕರಲ್ಲಿ ಒಬ್ಬರಾದ ಫ್ರಾ ಸೋಂಪೊಂಗ್, "ನಾವು ಜಪ ಮಾಡುತ್ತಾ ನಡೆದು ಬರುತ್ತಿದ್ದಾಗ ವಾಹನ ವೇಗವಾಗಿ ಬರುತ್ತಿರುವುದನ್ನು ಗಮನಿಸಿದೆವು. ಕ್ಷಣಾರ್ಧದಲ್ಲಿ ಟ್ರಕ್ ನಮ್ಮ ಮೇಲೆ ಹರಿಯಿತು. ನಾನು ಮತ್ತು ಮತ್ತೊಬ್ಬ ಭಿಕ್ಷು ಮಾತ್ರ ಸಮಯಕ್ಕೆ ತಪ್ಪಿಸಿಕೊಂಡೆವು. ಉಳಿದವರು ವಾಹನದ ಡಿಕ್ಕಿಗೆ ಗಾಳಿಯಲ್ಲಿ ಎಸೆಯಲ್ಪಟ್ಟರು" ಎಂದು ಹೇಳಿದ್ದಾರೆ.
ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಕ್ಕಳ ರಕ್ಷಣಾ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ ವಾಹನವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಮುಕ್ಡಹಾನ್ ಪ್ರಾಂತ್ಯದ ಪೊಲೀಸ್ ಅಧಿಕಾರಿಗಳ ಪ್ರಕಾರ, ಬಾಲಕನ ಪೋಷಕರನ್ನು ವಿಚಾರಣೆಗೆ ಕರೆಯಲಾಗಿದ್ದು, ಬಾಲಕನ ಮೇಲಿನ ಜವಾಬ್ದಾರಿ ಹಾಗೂ ಕಾನೂನು ಕ್ರಮದ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮುಕ್ಡಹಾನ್ ಗವರ್ನರ್ ವರ್ರಯಾನ್ ಬೂನ್ನರಾತ್, "ಈ ದುರಂತವು ರಸ್ತೆ ಸುರಕ್ಷತೆಯ ಬಗ್ಗೆ ಎಲ್ಲರಿಗೂ ಎಚ್ಚರಿಕೆಯ ಸಂದೇಶವಾಗಿದೆ. ಮಕ್ಕಳು ವಾಹನ ಚಲಾಯಿಸದಂತೆ ಪೋಷಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು" ಎಂದು ಹೇಳಿದ್ದಾರೆ.
ಬೌದ್ಧ ಧರ್ಮದ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಥೈಲೆಂಡ್‌ನಲ್ಲಿ ಭಿಕ್ಷುಕರಿಗೆ ಅಪಾರ ಗೌರವವಿದೆ. ಇಂತಹ ಧಾರ್ಮಿಕ ಪಾದಯಾತ್ರೆಗಳ ವೇಳೆ ಸಂಭವಿಸಿದ ಈ ದುರಂತ ದೇಶದಾದ್ಯಂತ ಆಘಾತಕ್ಕೆ ಕಾರಣವಾಗಿದೆ. ರಸ್ತೆ ಸುರಕ್ಷತೆಯ ಕೊರತೆ, ಅತಿವೇಗ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಯಿಂದಾಗಿ ಥೈಲೆಂಡ್‌ನಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ವರದಿಗಳು ತಿಳಿಸಿವೆ.