ತಿರುವನಂತಪುರ: ಭಾರತೀಯ ಕ್ರೀಡಾ ಪ್ರಾಧಿಕಾರದ (Sports Authority hostel in India) ಹಾಸ್ಟೆಲ್‌ನಲ್ಲಿ ಗುರುವಾರ ಇಬ್ಬರು ಪ್ರಶಿಕ್ಷಣಾರ್ಥಿಗಳು ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಕೇರಳದ (Kerala) ಕೊಲ್ಲಂನಲ್ಲಿ ನಡೆದಿದೆ. ಮೃತರನ್ನು ಕೋಝಿಕ್ಕೋಡ್‌ನ 17 ವರ್ಷದ ಸಾಂಡ್ರಾ ಮತ್ತು ತಿರುವನಂತಪುರದ 15 ವರ್ಷದ ವೈಷ್ಣವಿ ಎಂದು ಗುರುತಿಸಲಾಗಿದೆ.
ತರಬೇತಿಗೆ ಹಾಜರಾಗದ ಬಾಲಕಿಯರ ಕೊಠಡಿಯನ್ನು ಬೆಳಿಗ್ಗೆ 5 ಗಂಟೆ ಸುಮಾರಿಗೆ ಹಾಸ್ಟೆಲ್ ಅಧಿಕಾರಿಗಳು ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಅವರನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದಾಗ ಉತ್ತರಿಸದೇ ಇದ್ದಾಗ, ಸಿಬ್ಬಂದಿ ಬಲವಂತವಾಗಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಇಬ್ಬರೂ ಸೀಲಿಂಗ್ ಫ್ಯಾನ್‌ಗಳಿಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಪೊಲೀಸರ ಪ್ರಕಾರ, ಸಹ ತರಬೇತಿದಾರರು ಹಿಂದಿನ ರಾತ್ರಿ ತಡವಾಗಿ ಇಬ್ಬರು ಹುಡುಗಿಯರನ್ನು ಒಟ್ಟಿಗೆ ನೋಡಿದ್ದರು. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯಾ ಪತ್ರ ಪತ್ತೆಯಾಗಿಲ್ಲ. ಈ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಸಾಂಡ್ರಾ 12ನೇ ತರಗತಿಯಲ್ಲಿ ಓದುತ್ತಿದ್ದು, ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿದ್ದಳು ಮತ್ತು ಕಬಡ್ಡಿ ಆಟಗಾರ್ತಿ ವೈಷ್ಣವಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಸಾಮಾನ್ಯವಾಗಿ ಬೇರೆ ಕೋಣೆಯಲ್ಲಿ ಇರುತ್ತಿದ್ದ ವೈಷ್ಣವಿ ಬುಧವಾರ ರಾತ್ರಿ ಸಾಂಡ್ರಾಳ ಕೋಣೆಯಲ್ಲಿ ಕಾಲ ಕಳೆಯಲು ಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳ ಮರಣೋತ್ತರ ಪರೀಕ್ಷೆಗಳು ನಡೆಯುತ್ತಿದ್ದು, ಪೂರ್ಣಗೊಂಡ ನಂತರ ಶವಗಳನ್ನು ಕುಟುಂಬಗಳಿಗೆ ಹಿಂತಿರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಗಗನಸಖಿ ಆತ್ಮಹತ್ಯೆ
ಪ್ರತ್ಯೇಕ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 21 ವರ್ಷದ ಗಗನಸಖಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಮಾಜಿ ಸಂಗಾತಿಯ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಸೆಂಬರ್ 28, 2025 ರಂದು ಕಲ್ಯಾಣ್ (ಪೂರ್ವ) ದಲ್ಲಿರುವ ತನ್ನ ಮನೆಯಲ್ಲಿ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮೊಟ್ಟೆ ಕರಿ ಮಾಡದ್ದಕ್ಕೆ ಪತ್ನಿಯೊಂದಿಗೆ ಜಗಳ; ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಪತಿ
ಆಕೆಯ ಮೊಬೈಲ್ ಫೋನ್ ಮತ್ತು ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದ ನಂತರ, ಕೊಲ್ಸೆವಾಡಿ ಪೊಲೀಸರು ಜನವರಿ 10 ರಂದು ಆಕೆಯ 23 ವರ್ಷದ ಮಾಜಿ ಸಂಗಾತಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತೆಯ ತಾಯಿ ಸಲ್ಲಿಸಿದ ದೂರಿನ ಪ್ರಕಾರ, ಡಿಸೆಂಬರ್ 28 ರ ರಾತ್ರಿ ಆಕೆಯ ಮಗಳು ತನ್ನ ಫೋನ್ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ, ನಂತರ ನೆರೆಹೊರೆಯವರು ಕಲ್ಯಾಣ್‌ನ ಅನುಸುಯಾ ನಿವಾಸ್‌ನಲ್ಲಿರುವ ಆಕೆಯ ಮನೆಗೆ ಹೋದಾಗ ಆಕೆ ಸೀಲಿಂಗ್ ಫ್ಯಾನ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಆಕೆಯನ್ನು ತಕ್ಷಣ ರುಕ್ಮಿಣಿಬಾಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆಂದು ಘೋಷಿಸಿದರು ಎಂದು ಅಧಿಕಾರಿ ಹೇಳಿದರು. ಮೃತಳು ಮತ್ತು ಆರೋಪಿಯ ನಡುವೆ 2020 ರಿಂದ ಸಂಬಂಧವಿತ್ತು ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ. ಆಕೆಯ ಕೆಲವು ಫೋಟೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ, ಆದರೆ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಇತ್ತೀಚೆಗೆ ಬೇರೆ ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದಾನೆ. ಇದರಿಂದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.