ದುಬೈಯಲ್ಲಿರುವ ತಂದೆಯೊಂದಿಗೆ ವಿಡಿಯೊ ಕಾಲ್‌ನಲ್ಲಿ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣಾದ ಎಎಂಯು ವಿದ್ಯಾರ್ಥಿನಿ; ಕಾರಣ ನಿಗೂಢ
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಸೋಮವಾರ (ಜನವರಿ 12) ಸಂಜೆ ತಂದೆಯೊಂದಿಗೆ ವಿಡಿಯೊ ಕಾಲ್‌ನಲ್ಲಿ ಮಾತನಾಡುತ್ತಲೇ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿಯ ತಂದೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ಸಂತ್ರಸ್ತೆ ಮಹಿಳಾ ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿಯಾಗಿದ್ದಳು.
ಸಾಂದರ್ಭಿಕ ಚಿತ್ರ -
ಲಖನೌ, ಜ. 13: ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (AMU) (Aligarh Muslim University)ಯಲ್ಲಿ ವ್ಯಾಸಂಗ ಮಾಡುತ್ತಿದ್ದ 20 ವರ್ಷದ ವಿದ್ಯಾರ್ಥಿನಿಯೊಬ್ಬಳು, ತನ್ನ ತಂದೆಯೊಂದಿಗೆ ವಿಡಿಯೋ ಕಾಲ್‌ನಲ್ಲಿ (Video Call) ಮಾತನಾಡುತ್ತಿರುವ ಸಂದರ್ಭದಲ್ಲೇ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಸೋಮವಾರ (ಜನವರಿ 12) ಸಂಜೆ ನಡೆದಿದ್ದು, ವಿದ್ಯಾರ್ಥಿನಿಯ ತಂದೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಹಿಳಾ ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತೆ, ಘಟನೆ ಸಂಭವಿಸಿದ ವೇಳೆ ತನ್ನ ಕೊಠಡಿಯಲ್ಲಿ ಒಬ್ಬಳೇ ಇದ್ದಳು. ಚಳಿಗಾಲದ ರಜೆಯ ಸಮಯದಲ್ಲಿ ಮನೆಗೂ ಹೋಗದೆ, ಕ್ಯಾಂಪಸ್‌ನಲ್ಲೇ ಉಳಿದಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ವಿಶ್ವವಿದ್ಯಾಲಯ ಪುನರಾರಂಭವಾದರೂ ಆಕೆಯ ರೂಮ್‌ಮೇಟ್ ಇನ್ನೂ ಮರಳಿರಲಿಲ್ಲ.
ಎಎಮ್‌ಯುನ ಪ್ರೊ. ಮೊಹಮ್ಮದ್ ವಸೀಮ್ ಅಲಿ ಅವರ ಪ್ರಕಾರ, ವಿದ್ಯಾರ್ಥಿನಿ ರಾತ್ರಿ ಸುಮಾರು 8 ಗಂಟೆಗೆ ತಂದೆಯೊಂದಿಗೆ ವಿಡಿಯೊ ಕಾಲ್ ಆರಂಭಿಸುವ ಮೊದಲು ಅಜಂಗಢದಲ್ಲಿರುವ ತನ್ನ ಸಹೋದರನೊಂದಿಗೆ ಮಾತನಾಡಿದ್ದಳು. ಈ ಎರಡು ಕರೆಗಳಲ್ಲೂ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ವ್ಯಕ್ತಪಡಿಸಿದ್ದಾಳೆ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ತಂದೆ ಮತ್ತು ಸಹೋದರರು ತಕ್ಷಣವೇ ಅಲಿಗಢದಲ್ಲಿರುವ ತಮ್ಮ ಪರಿಚಿತರನ್ನು ಸಂಪರ್ಕಿಸಿ ಅಕೆಯನ್ನು ರಕ್ಷಿಸುವಂತೆ ತಿಳಿಸಿದ್ದಾರೆ.
AI ಹುಡುಗಿ ನಂಬಿ ಬೆತ್ತಲಾದ ಯುವಕ, 1.5 ಲಕ್ಷ ರೂ. ಮಂಗಮಾಯ
ಅಲ್ಲದೇ ಹಾಸ್ಟೆಲ್‌ನ ಪಕ್ಕದ ಕೊಠಡಿಗಳಲ್ಲಿದ್ದ ವಿದ್ಯಾರ್ಥಿನಿಯರಿಗೂ ಸಹ ಗೋಡೆಗಳಾಚೆಯಿಂದ ಜೋರಾಗಿ ಮಾತನಾಡುವ ಶಬ್ದ ಕೇಳಿಸಿದೆ. ಆದರೆ ಇದನ್ನು ಅವರು ವೈಯಕ್ತಿಕ ವಿಚಾರವಾಗಿರಬಹುದು ಎಂದು ಭಾವಿಸಿ, ಯಾರೂ ಬಾಗಿಲು ತಟ್ಟಿ ವಿಚಾರಿಸಲು ಮುಂದಾಗಿಲ್ಲ ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ವಿದ್ಯಾರ್ಥಿನಿಯ ಸಹೋದರ ಕ್ಯಾಂಪಸ್‌ನಿಂದ ಸುಮಾರು 1.5 ಕಿ.ಮೀ. ದೂರದಲ್ಲಿದ್ದ ತನ್ನ ಸ್ನೇಹಿತನನ್ನು ಸಂಪರ್ಕಿಸಿದ್ದ. ಆದರೆ ಭದ್ರತಾ ನಿಯಮಗಳ ಕಾರಣದಿಂದ ಆ ಸ್ನೇಹಿತನಿಗೆ ಮಹಿಳಾ ಹಾಸ್ಟೆಲ್‌ಗೆ ತಕ್ಷಣ ಪ್ರವೇಶಿಸಲು ನಿರಾಕರಿಸಲಾಗಿತ್ತು. ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮಾಹಿತಿ ತಲುಪಿ ಅವರು ಕೊಠಡಿಗೆ ಪ್ರವೇಶಿಸುವಷ್ಟರಲ್ಲಿ ವಿದ್ಯಾರ್ಥಿನಿ ಆಗಲೇ ಮೃತಪಟ್ಟಿದ್ದಳು.
“ಹಾಸ್ಟೆಲ್ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ” ಎಂದು ಪ್ರೊ. ಅಲಿ ಹೇಳಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯನ್ನು ಮಂಗಳವಾರ ನಡೆಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬುವುದು ಇನ್ನು ತಿಳಿದುಬಂದಿಲ್ಲ. ಎಎಮ್‌ಯು ಉಪಕುಲಪತಿ ಪ್ರೊ. ನೈಮಾ ಖಾತೂನ್ ಮಂಗಳವಾರ ಹಿರಿಯ ಅಧಿಕಾರಿಗಳೊಂದಿಗೆ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯೊಂದಿಗೆ ಘಟನೆಯ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯ ತಂದೆ ಶೀಘ್ರದಲ್ಲೇ ಸೌದಿ ಅರೇಬಿಯಾದಿಂದ ಆಗಮಿಸುವ ನಿರೀಕ್ಷೆಯಿದೆ.