ಲಖನೌ, ಫೆ. 5: ಮೂವರು ಮಕ್ಕಳ ತಾಯಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತನ್ನ ಮಾವನ ಕತ್ತನ್ನೇ ಸೀಳಿ ಕೊಲೆ (Murder) ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ (Uttar Pradesh) ಮೌ (Mau) ಜಿಲ್ಲೆಯಲ್ಲಿ ನಡೆದಿದೆ. ವೃದ್ಧನನ್ನು ಪುಸಲಾಯಿಸಿ ಕರೆದೊಯ್ದು, ಗಂಟಲು ಸೀಳಿ ಕೊಲೆ ಮಾಡಿದ್ದಲ್ಲದೆ, ಆ ಭೀಕರ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 1ರ ರಾತ್ರಿ ಸರಾಯ್ ಲಖಾನ್ಸಿ (Sarai Lakhansi ) ಪ್ರದೇಶದಲ್ಲಿ ಸುಬಚ್ಚನ್ ರಾಜ್‌ಭರ್ (Subachchan Rajbhar) ಎಂಬವರು ನಾಪತ್ತೆಯಾಗಿದ್ದ. ಮರುದಿನ ಬೆಳಗ್ಗೆ ಗ್ರಾಮದ ಮಾವಿನ ತೋಪಿನಲ್ಲಿ ಅವರ ಶವ ಪತ್ತೆಯಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಮೃತನ ಸೊಸೆ ಪಿಂಕಿ ರಾಜ್‌ಭರ್ (Pinki Rajbhar), ಆಕೆಯ ಪ್ರಿಯಕರ ರಾಮ್‌ಮಿಲನ್ ರಾಜ್‌ಭರ್ (Rammilan Rajbhar) ಮತ್ತು ಅವನ ಇಬ್ಬರು ಸಹಚರರಾದ ಸುಧೀರ್ (Sudhir) ಮತ್ತು ರೋಹಿತ್ (Rohit) ಎಂಬವವರನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಚಾಕುವನ್ನು ವಶ ಪಡಿಸಿಕೊಂಡಿದ್ದಾರೆ.
ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ!
ಪಿಂಕಿ ರಾಜ್‌ಭರ್ ಪತಿ ಚಂದನ್ ಕಳೆದ ಎರಡು ವರ್ಷಗಳಿಂದ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಬಂದಿರಲಿಲ್ಲ. ಇದೇ ವೇಳೆ ಪಿಂಕಿ ಮತ್ತು ರಾಮ್‌ಮಿಲನ್ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಈ ವಿಷಯ ತಿಳಿದ ಮಾವ ಸುಬಚ್ಚನ್, ಸೊಸೆಗೆ ಪದೇ ಪದೆ ಬೈದು ಬುದ್ಧಿವಾದ ಹೇಳುತ್ತಿದ್ದರು. ಇದರಿಂದ ಕುಟುಂಬದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
Bagalakote Crime News: ದಾರುಣ ಘಟನೆ, ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಇದರಿಂದ ಕೊಪಗೊಂಡ ಪಿಂಕಿ, ಮಾವ ತನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ತನ್ನ ಪ್ರಿಯಕರನಿಗೆ ಹೇಳಿದ್ದಾಳೆ. ಇದಾದ ಬಳಿಕ ಸಂಚು ರೂಪಿಸಿದ ರಾಮ್‌ಮಿಲನ್ ಮತ್ತು ಅವನ ಸಹಚರರು, ಎಣ್ಣೆ ಪಾರ್ಟಿ ಮಾಡುವ ನೆಪದಲ್ಲಿ ಸುಬಚ್ಚನ್ ಅವರನ್ನು ಗ್ರಾಮದ ಹೊರವಲಯದಲ್ಲಿ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಸುಬಚ್ಚನ್ ಅವರ ಬಾಯಿ ಮುಚ್ಚಿ ಚಾಕುವಿನಿಂದ ಕತ್ತು ಸೀಳಲಾಗಿದೆ. ಈ ಭೀಕರ ಕೃತ್ಯ ನಡೆಯುವಾಗ ಆರೋಪಿಗಳು ಅದನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಕುಮಾರ್ ತಿಳಿಸಿದ್ದಾರೆ.
ಆರೋಪಿಗಳು ಸಿಕ್ಕಿದ್ದು ಹೇಗೆ?
ಪೊಲೀಸರು ಕೊಲೆಗೆ ಬಳಸಿದ ಚಾಕು, ಸಂತ್ರಸ್ತನ ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಯ ವೇಳೆ ಪಿಂಕಿ, ತನ್ನ ಮಾವ ತನ್ನ ಮೇಲೆ ಮತ್ತು ಮಗುವಿನ ಮೇಲೆ ಹಲ್ಲೆ ನಡೆಸುತ್ತಿದ್ದರು ಹಾಗೂ ಕೆಟ್ಟ ಉದ್ದೇಶದಿಂದ ವರ್ತಿಸುತ್ತಿದ್ದರು ಎಂದು ಆರೋಪಿಸಿದ್ದಾಳೆ. ಸದ್ಯ ನಾಲ್ವರೂ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಹೆಚ್ಚಿನ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ. ಜೈಲಿನಿಂದ ಹೊರಬಂದ ನಂತರ ಮದುವೆಯಾಗುವ ಬಗ್ಗೆ ನಿರ್ಧರಿಸುವುದಾಗಿ ಪ್ರಿಯಕರ ರಾಮ್‌ಮಿಲನ್ ತಿಳಿಸಿದ್ದಾನೆ.