ಅಪಘಾತವೆಸಗಿದ್ದ ತಂಬಾಕು ಉದ್ಯಮಿಯ ಪುತ್ರನ ವಿಡಿಯೊ ವೈರಲ್!
bouncers rush to rescue: ಕಾನ್ಪುರದಲ್ಲಿ ಲ್ಯಾಂಬೋರ್ಘಿನಿ ಕಾರು ಪಾದಚಾರಿಗಳು ಹಾಗೂ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸಿಸಿಟಿವಿ ದೃಶ್ಯಾವಳಿ ಹೊರಬಿದ್ದಿದೆ. ಅಪಘಾತದ ತಕ್ಷಣ ಕಪ್ಪು ಎಸ್‌ಯುವಿಯಿಂದ ಇಳಿದ ಅಂಗರಕ್ಷಕರು ಲ್ಯಾಂಬೋರ್ಘಿನಿ ಬಳಿ ಧಾವಿಸಿ ಚಾಲಕನನ್ನು ಎತ್ತಿಕೊಂಡು ಕರೆದೊಯ್ದಿರುವ ವಿಡಿಯೊ ವೈರಲ್ ಆಗಿದೆ.
ಅಪಘಾತವೆಸಗಿದ್ದ ಲ್ಯಾಂಬೋರ್ಘಿನಿ ಚಾಲಕನ ರಕ್ಷಣೆಗೆ ಧಾವಿಸಿದ್ದ ಅಂಗರಕ್ಷಕರು -
ಕಾನ್ಪುರ, ಫೆ10: ಉತ್ತರ ಪ್ರದೇಶದ ಕಾನ್ಪುರದಲ್ಲಿ ವೇಗವಾಗಿ ಬಂದ ಐಷಾರಾಮಿ ಲ್ಯಾಂಬೋರ್ಘಿನಿ ಕಾರೊಂದು (Lamborghini accident) ಪಾದಚಾರಿಗಳ ಮೇಲೆ ಹರಿದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದ ಸುಮಾರು ಎರಡು ದಿನಗಳ ನಂತರ, ಹೊಸ ಸಿಸಿಟಿವಿ ದೃಶ್ಯಾವಳಿಗಳು (CCTV Video) ಬೆಳಕಿಗೆ ಬಂದಿವೆ. ಈ ದೃಶ್ಯಗಳಲ್ಲಿ ಕಪ್ಪು ಎಸ್‌ಯುವಿ ಕಾರಿನಿಂದ ಇಳಿದ ಚಾಲಕನ ಅಂಗರಕ್ಷಕರು (ಬೌನ್ಸರ್‌ಗಳು) ಲ್ಯಾಂಬೋರ್ಘಿನಿ ಕಾರಿನತ್ತ ಓಡಿ ಹೋಗಿ ಆತನನ್ನು ಕಾರಿನಿಂದ ಹೊರತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.
ಘಟನಾ ಸ್ಥಳದ ವಿಡಿಯೊಗಳು ಹಾಗೂ ಕಣ್ಣಾರೆ ಕಂಡ ಸಾಕ್ಷಿಗಳ ಪ್ರಕಾರ, ಸುಮಾರು 10 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಘಿನಿ ರೆವೆಲ್ಟೊ ಕಾರನ್ನು ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರ ಚಾಲನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಆದರೆ, ಮಿಶ್ರ ಅವರ ವಕೀಲರು ಶಿವಂ ಕಾರು ಚಾಲನೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇಲ್ಲಿದೆ ವಿಡಿಯೊ:
Kanpur Lamborghini Crash: New CCTV video shows bouncers coming out of SUV after the accident pic.twitter.com/fcpfD9hFDo
— NDTV (@ndtv) February 10, 2026
ಶಿವಂ ವಾಹನ ಚಲಾಯಿಸುತ್ತಿರಲಿಲ್ಲ. ಅವನ ಚಾಲಕ ಮೋಹನ್ ಕಾರು ಚಲಾಯಿಸುತ್ತಿದ್ದ. ಇದು ಅಪಘಾತ ಪ್ರಕರಣ. ಶಿವಂ ಲ್ಯಾಂಬೋರ್ಘಿನಿ ಕಾರನ್ನು ಚಲಾಯಿಸುತ್ತಿರಲಿಲ್ಲ ಎಂದು ವಕೀಲ ಮೃತ್ಯುಂಜಯ್ ಕುಮಾರ್ ಹೇಳಿದರು.
ಲ್ಯಾಂಬೋರ್ಘಿನಿ ನಿಲ್ಲುವ ಮೊದಲೇ ರಕ್ಷಣೆಗೆ ಬೌನ್ಸರ್‌ಗಳ ಓಟ
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಪ್ಪು ಬಣ್ಣದ ಎಸ್‌ಯುವಿ ವಾಹನ ನಿಲ್ಲಿಸುವುದನ್ನು ಮತ್ತು ಬೌನ್ಸರ್‌ಗಳು ಅದರ ಬಾಗಿಲು ತೆರೆದು ವಾಹನ ನಿಲ್ಲುವ ಮೊದಲೇ ಹೊರಬರಲು ಪ್ರಯತ್ನಿಸುತ್ತಿರುವುದನ್ನು ತೋರಿಸಲಾಗಿದೆ. ವಿಡಿಯೊದಲ್ಲಿ ಕನಿಷ್ಠ ಐದು ಬೌನ್ಸರ್‌ಗಳು ಲ್ಯಾಂಬೋರ್ಘಿನಿಯ ಕಡೆಗೆ ಓಡುತ್ತಿರುವುದು ಕಂಡುಬರುತ್ತದೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ಈ ಘಟನೆ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ.
ಇನ್ನೊಂದು ವಿಡಿಯೊದಲ್ಲಿ ಬೌನ್ಸರ್ ಒಬ್ಬರು ಲ್ಯಾಂಬೋರ್ಘಿನಿ ರೆವೆಲ್ಟೊ ಕಾರಿನಿಂದ ಮಿಶ್ರಾನನ್ನು ಎಳೆದು ಹೊರತೆಗೆದುಕೊಳ್ಳುತ್ತಿರುವುದನ್ನು ನೋಡಬಹುದು. ಬಳಿಕ ಬೌನ್ಸರ್ ಮಿಶ್ರಾನನ್ನು ಕೈಯಲ್ಲಿ ಎತ್ತಿಕೊಂಡು ಅಲ್ಲಿಂದ ದೂರ ಕರೆದೊಯ್ದಿದ್ದಾನೆ. ಈ ವೇಳೆ ಪ್ರತ್ಯಕ್ಷದರ್ಶಿಗಳು ವಿಡಿಯೊ ಮಾಡಿ ಎಂದು ಹೇಳುತ್ತಿರುವ ಧ್ವನಿಯೂ ಕೇಳಿಬರುತ್ತದೆ.
ಪಾದಾಚಾರಿಗಳ ಮೇಲೆ ಲ್ಯಾಂಬೋರ್ಘಿನಿ ಕಾರು ಹರಿಸಿದ ತಂಬಾಕು ಉದ್ಯಮಿ ಮಗ; ಹಲವರಿಗೆ ಗಂಭೀರ ಗಾಯ
ಅಪಘಾತ ನಡೆದ ದಿನ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿತ್ತು. ಮುಂದಿನ ದಿನ ಶಿವಂ ಮಿಶ್ರಾ ಹೆಸರನ್ನು ಎಫ್‌ಐಆರ್‌ಗೆ ಸೇರಿಸಲಾಯಿತು. ಅಪಘಾತದ ನಂತರ ಪಾಲಿಸಬೇಕಾದ ನಿಯಮಾನುಸಾರ ಪ್ರಕ್ರಿಯೆಗಳನ್ನು ಶಿವಂ ಮಿಶ್ರ ಪಾಲಿಸಿಲ್ಲ. ಈ ಲೋಪ ನಿರ್ಲಕ್ಷ್ಯಕ್ಕೆ ಸಮಾನವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಹೇಳಿದ್ದಾರೆ.
ಚಾಲಕ ಶಿವಂ ಮಿಶ್ರ ಮದ್ಯಪಾನ ಮಾಡಿದ್ದ ಸ್ಥಿತಿಯಲ್ಲಿ ಕಾನ್ಪುರದ ವಿಐಪಿ ರಸ್ತೆಯಲ್ಲಿ ಅತಿವೇಗವಾಗಿ ಐಷಾರಾಮಿ ಕಾರನ್ನು ಚಾಲನೆ ಮಾಡುತ್ತಿದ್ದನು ಎಂದು ಪ್ರತ್ಯಕ್ಷ ಸಾಕ್ಷಿಗಳು ಆರೋಪಿಸಿದ್ದಾರೆ.
ತೌಫಿಕ್ ಅಹ್ಮದ್ ಸಲ್ಲಿಸಿದ ಎಫ್‌ಐಆರ್ ಪ್ರಕಾರ, ತನ್ನ ಸ್ನೇಹಿತನಿಗಾಗಿ ಕಾಯುತ್ತಿದ್ದಾಗ ವೇಗವಾಗಿ ಬಂದ ಲ್ಯಾಂಬೋರ್ಘಿನಿ ಕಾರು ಹತ್ತಿರದಲ್ಲಿ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ತನಗೆ ಡಿಕ್ಕಿ ಹೊಡೆದಿದೆ ಎಂದು ದೂರಿದ್ದಾರೆ. ಪರಿಣಾಮ ಅಹ್ಮದ್ ಹಲವಾರು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ಕಾಲಿಗೆ ಗಂಭೀರ ಗಾಯಗಳಾಗಿವೆ. ಈ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.
ಅಪಘಾತದ ನಂತರ ಮಿಶ್ರಾ ತಕ್ಷಣವೇ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಮತ್ತೊಂದು ವಾಹನದಲ್ಲಿ ಬಂದ ಖಾಸಗಿ ಬೌನ್ಸರ್‌ಗಳು ಗುಂಪು ಸೇರಿದ್ದ ಜನಸಂದಣಿಯಿಂದ ರಕ್ಷಿಸಲು ಪ್ರಯತ್ನಿಸಿದರು ಹಾಗೂ ಆಕ್ರಮಣಕಾರಿಯಾಗಿ ವರ್ತಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.