ರಾಂಚಿ, ಆ.5: ಬಾಲಕಿಯ ಅತ್ಯಾಚಾರ ಆರೋಪಿಯನ್ನು ಉದ್ರಿಕ್ತ ಗುಂಪು ಥಳಿಸಿ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ (Jharkhand) ನ ಛಾತ್ರಾ ಜಿಲ್ಲೆಯಲ್ಲಿ ನಡೆದಿದೆ. 32 ವರ್ಷದ ವ್ಯಕ್ತಿಯೊಬ್ಬ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಜನರ ಗುಂಪು ಆತನಿಗೆ ಹಿಗ್ಗಾಮುಗ್ಗಾ (Crime News) ಥಳಿಸಿದ್ದಾರೆ. ತೀವ್ರ ಹಲ್ಲೆಗೊಳಗಾಗಿದ್ದರಿಂದ ಆತ ಮೃತಪಟ್ಟಿದ್ದಾನೆ. ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಂಡಿ ಎಮ್ರೋಜ್ ಎಂಬ ವ್ಯಕ್ತಿ ಶಾಲಾ ಬಾಲಕಿಯನ್ನು ಅಪಹರಿಸಿ ಎರಡು ದಿನಗಳ ಕಾಲ ತನ್ನ ನಿವಾಸದೊಳಗೆ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎನ್ನಲಾಗಿದೆ. ಅಪ್ರಾಪ್ತೆ ಮನೆಗೆ ಮರಳಿ ಬಾರದ್ದರಿಂದ ಆತಂಕಗೊಂಡ ಕುಟುಂಬ ಸದಸ್ಯರು ಆಕೆಯನ್ನು ತೀವ್ರವಾಗಿ ಹುಡುಕಲು ಶುರುಮಾಡಿದ್ದಾರೆ. ಆದರೆ, ಆಕೆ ಇರುವ ಸ್ಥಳದ ಸುಳಿವು ಪತ್ತೆಯಾಗಲಿಲ್ಲ. ಮಂಗಳವಾರ (ಆ.4) ಮುಂಜಾನೆ ಅಪ್ರಾಪ್ತೆ ಮನೆಗೆ ಮರಳಿದಾಗ ಪರಿಸ್ಥಿತಿ ಉದ್ವಿಗ್ನ ಹಂತ ತಲುಪಿತು.
ಎಮ್ರೋಜ್ ತನ್ನನ್ನು ಅಪಹರಣ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರವನ್ನು ಯಾರ ಬಳಿಯಾದಾರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆಂದು, ತನ್ನ ಕುಟುಂಬಕ್ಕೆ ತನ್ನ ಸಂಕಷ್ಟವನ್ನು ವಿವರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರ ಗುಂಪು ಆರೋಪಿಯ ಮನೆಯನ್ನು ಸುತ್ತುವರೆದು, ನಂತರ ಅವನ ಮೇಲೆ ಹಲ್ಲೆ ನಡೆಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಭೀಕರ ಕೊಲೆ: ಅಪ್ರಾಪ್ತರು ಸೇರಿ 8 ಮಂದಿಯ ಬಂಧನ
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಂಭೀರವಾಗಿ ಗಾಯಗೊಂಡಿದ್ದ ಎಮ್ರೋಜ್‌ನನ್ನು ಜನಸಂದಣಿಯಿಂದ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ, ಆತನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಇನ್ನು ಗುಂಪು ದಾಳಿಯ ವೇಳೆಯಲ್ಲಿ ಎಮ್ರೋಜ್ ತಂದೆ ಸುಲ್ತಾನ್ ಮಿಯಾನ್ ಕೂಡ ಗಾಯಗೊಂಡಿದ್ದಾರೆ.
ಇನ್ನು ಬಾಲಕಿಯು ಅಧಿಕಾರಿಗಳು ರಕ್ಷಣೆಯಲ್ಲಿದ್ದಾಳೆ. ಆಕೆಗೆ ಕಡ್ಡಾಯ ವೈದ್ಯಕೀಯ ಪರೀಕ್ಷೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸರು ಆ ವ್ಯಕ್ತಿಯ ಕುಟುಂಬ ಸದಸ್ಯರಿಂದ ಔಪಚಾರಿಕ ಹೇಳಿಕೆಗಳನ್ನು ಸಹ ದಾಖಲಿಸಿದ್ದಾರೆ. ಇದು ಎಮ್ರೋಜ್‌ನ ಮೊದಲ ಅಪರಾಧವಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ. ಅವನ ವಿರುದ್ಧ ಈ ಹಿಂದೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. 2023 ರಲ್ಲಿ ಜೈಲು ಶಿಕ್ಷೆ ಕೂಡ ಅನುಭವಿಸಿದ್ದ ಎಂದು ಆರೋಪಿಸಿದ್ದಾರೆ.
ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಯಡಿಯಲ್ಲಿ ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಗುಂಪು ಹಿಂಸಾಚಾರದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪ್ರಸ್ತುತ ಹೆಚ್ಚಿನ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.