ಅಸ್ಸಾಂ: ನಿಷೇಧಾಜ್ಞೆ (Prohibition order) ನಡುವೆಯೂ ಗಲಭೆ ಪೀಡಿತ ಅಸ್ಸಾಂನ (Assam) ಕರ್ಬಿ ಅಂಗ್ಲಾಂಗ್ (Karbi Anglong) ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿರುವ ಘಟನೆ ನಡೆದಿದೆ. ಪ್ರತಿಭಟನಾಕಾರರ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ( lathicharge ) ನಡೆಸಿದರು. ಅಶ್ರುವಾಯು ಶೆಲ್‌ಗಳನ್ನು (firing of tear-gas shells) ಬಳಸಿದರು. ಈ ಸಂದರ್ಭದಲ್ಲಿ ಸುಮಾರು ಎಂಟು ಮಂದಿ ಗಾಯಗೊಂಡಿದ್ದಾರೆ. ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಖೇರೋನಿ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ಬುಡಕಟ್ಟು ಪ್ರದೇಶದಲ್ಲಿ ಅತಿಕ್ರಮಣಕಾರರನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಹಿಳೆಯರು, ಮಕ್ಕಳು ಸೇರಿದಂತೆ ಹೆಚ್ಚಿನವರು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಈ ವೇಳೆ ಎರಡೂ ಗುಂಪುಗಳು ಉದ್ರಿಕ್ತಗೊಂಡು ಘರ್ಷಣೆಯಲ್ಲಿ ತೊಡಗಿತ್ತು.
ಈ ಸಂದರ್ಭದಲ್ಲಿ ಪ್ರದೇಶದಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದವು. ಆದರೆ ಎರಡೂ ಕಡೆಯಿಂದ ಕಲ್ಲು ತೂರಾಟ ಪ್ರಾರಂಭವಾಗಿದ್ದು, ಪೊಲೀಸ್ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
ಪರಿಸ್ಥಿತಿ ನಿಯಂತ್ರಣ ತಪ್ಪಿದ್ದರಿಂದ ಪೊಲೀಸರು ಲಾಠಿಚಾರ್ಜ್ ನಡೆಸಿದರು, ಎರಡೂ ಗುಂಪುಗಳ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಹೆಚ್ಚಿನ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ಕರೆಸಲಾಯಿತು.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕರ್ಬಿ ಆಂಗ್ಲಾಂಗ್‌ನಲ್ಲಿನ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿತ್ತು. ಹಿರಿಯ ಸಚಿವ ರನೋಜ್ ಪೆಗು ಜಿಲ್ಲೆಯಲ್ಲಿದ್ದಾರೆ. ಈ ವಿಷಯ ಶೀಘ್ರದಲ್ಲೇ ಬಗೆಹರಿಯುತ್ತದೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.
ಪೆಗು ಅವರೊಂದಿಗಿನ ಮಾತುಕತೆ ಬಳಿಕ ಮಂಗಳವಾರ ಬುಡಕಟ್ಟು ಪ್ರದೇಶಗಳಿಂದ ಅತಿಕ್ರಮಣದಾರರನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟರು. ಹಲವಾರು ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳಿಗೆ ಸೇರಿ ಕಳೆದ 12 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿತ್ತು.
ಸೋಮವಾರ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ನಾಲ್ವರು ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಕರ್ಬಿ ಆಂಗ್ಲಾಂಗ್ ಸ್ವಾಯತ್ತ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ತುಲಿರಾಮ್ ರೋಂಗ್‌ಹಾಂಗ್ ಅವರ ನಿವಾಸ ಮತ್ತು ಖೇರೋನಿ ಬಜಾರ್‌ನಲ್ಲಿ ಸುಮಾರು 15 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ.
ಖೇರೋನಿಯಲ್ಲಿನ ಪೊಲೀಸ್ ಠಾಣೆಯ ಮೇಲೆಯೂ ಪ್ರತಿಭಟನಾಕಾರರು ದಾಳಿ ಮಾಡಲು ಪ್ರಯತ್ನಿಸಿದ್ದು, ಭದ್ರತಾ ಪಡೆಗಳು ಅದನ್ನು ವಿಫಲಗೊಳಿಸಿದವು. ಇದಾದ ಬಳಿಕ ಕರ್ಬಿ ಆಂಗ್ಲಾಂಗ್ ಮತ್ತು ನೆರೆಯ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ವಿಧಿಸಲಾಯಿತು. ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.
ಪರಿಸ್ಥಿತಿ ಪರಿಶೀಲನೆಗೆ ಸೋಮವಾರ ರಾತ್ರಿ ಪೆಗು, ಡಿಜಿಪಿ ಹರ್ಮೀತ್ ಸಿಂಗ್ ಕೂಡ ಕರ್ಬಿ ಆಂಗ್ಲಾಂಗ್‌ಗೆ ಭೇಟಿ ನೀಡಿದರು.ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಪಿಜಿಆರ್ ಮತ್ತು ವಿಜಿಆರ್ ಭೂಮಿಯಲ್ಲಿ ಅತಿಕ್ರಮಣಕರಾರು ವಾಸವಾಗಿದ್ದು, ಇದರಿಂದ ಒಂದು ವರ್ಗದ ಜನರು ಸಿಟ್ಟುಗೊಂಡು ಅವರನ್ನು ಹೊರಹಾಕಲು ಪ್ರಯತ್ನಿಸಿದ್ದರು. ಈ ಕುರಿತು ಗುವಾಹಟಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದು ತೆರವು ಪ್ರಕ್ರಿಯೆಯನ್ನು ತಡೆಹಿಡಿದು ಮಧ್ಯಂತರ ಆದೇಶವನ್ನು ನೀಡಿತು.
ಈ ವಿಚಾರವನ್ನು ಮಾತುಕತೆಯ ಮೂಲಕ ಮಾತ್ರ ಪರಿಹರಿಸಬಹುದು. ನಾವು ಪ್ರತಿಭಟನಾಕಾರರು ಮತ್ತು ಅತಿಕ್ರಮಣದಾರರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಪ್ರತಿಭಟನೆಗೆ ಸಂಬಂಧಿಸಿ ಯಾರನ್ನೂ ಬಂಧಿಸಿಲ್ಲ. ಕೆಲವರ ಆರೋಗ್ಯ ಹದಗೆಟ್ಟ ಕಾರಣ ಚಿಕಿತ್ಸೆಗಾಗಿ ಗುವಾಹಟಿಗೆ ಕರೆದೊಯ್ಯಲಾಗಿದೆ ಎಂದು ಪೆಗು ಹೇಳಿದರು.
ಇದಾದ ಬಳಿಕ ಕರ್ಬಿ ಆಂಗ್ಲಾಂಗ್‌ನ ಖೇರೋನಿ ಪ್ರದೇಶದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಮಂಗಳವಾರ ಮತ್ತೆ ಘರ್ಷಣೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಗುಂಪೊಂದು ಡೊಂಕಮೋಕಮ್‌ನಲ್ಲಿರುವ ಕೆಎಎಸಿಯ ಸಿಇಎಂನ ಹಳೆಯ ನಿವಾಸಕ್ಕೆ ಬೆಂಕಿ ಹಚ್ಚಿದ್ದು, ಭದ್ರತಾ ಪಡೆಗಳು ಗುಂಡು ಹಾರಿಸಿದವು. ಇದರಲ್ಲಿ ಮೂವರು ಪ್ರತಿಭಟನಾಕಾರರು ಮತ್ತು ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.