ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಪ್ರೇಯಸಿಯನ್ನು ಮದುವೆಯಾಗಲು ಹೆಂಡ್ತಿಗೇ ಬೆಂಕಿ ಹಚ್ಚಿದ ಕಿಡಿಗೇಡಿ

Man killed his wife: ತನ್ನ ಪ್ರಿಯತಮೆಯನ್ನು ಮದುವೆಯಾಗಲು ಅಡ್ಡಿಯಾಗಿದ್ದ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತಿಯೊಬ್ಬ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ. ಈತನಿಗೆ ಅದಾಗಲೇ ಒಂದು ಮದುವೆಯಾಗಿದ್ದು, ವಿಷಯ ಮುಚ್ಚಿಟ್ಟು ಎರಡನೇ ಮದುವೆ ಮಾಡಲಾಗಿತ್ತು. ಇದೀಗ ಪಾಪಿ ಈ ದುಷ್ಕೃತ್ಯ ಮೆರೆದಿದ್ದಾನೆ.

ಪಟನಾ: ತನ್ನ ಗೆಳತಿಯನ್ನು ಮದುವೆಯಾಗಲು ಆಕ್ಷೇಪ ವ್ಯಕ್ತಪಡಿಸಿದ ಕಾರಣ ವ್ಯಕ್ತಿಯೊಬ್ಬ ತನ್ನ ಎರಡನೇ ಪತ್ನಿಗೆ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಬಿಹಾರದ (Bihar) ನಳಂದ ಜಿಲ್ಲೆಯಲ್ಲಿ ನಡೆದಿದೆ. ವಿಕಾಸ್ ಕುಮಾರ್ ಎಂದು ಗುರುತಿಸಲ್ಪಟ್ಟ ಆರೋಪಿಯು ತನ್ನ ಪತ್ನಿಗೆ ಬೆಂಕಿ ಹಚ್ಚಿದಾತ. ಈತ ಐದು ವರ್ಷಗಳ ಹಿಂದೆ ಸುನೀತಾ ದೇವಿ (25) ಅವರನ್ನು ವಿವಾಹವಾಗಿದ್ದ. ಕೋಪದ ಭರದಲ್ಲಿ ಅವನು ಸುನೀತಾಳಿಗೆ ಪೆಟ್ರೋಲ್ ಸುರಿದು, ಸಿಲಿಂಡರ್‌ನಿಂದ ಎಲ್‌ಪಿಜಿಯನ್ನು ಬಿಡುಗಡೆ ಮಾಡಿ, ಬೆಂಕಿ ಹಚ್ಚಿದ್ದಾನೆ (Crime News) ಎಂದು ಪೊಲೀಸರು ತಿಳಿಸಿದ್ದಾರೆ.

ಸುನೀತಾಳನ್ನು ವಿಕಾಸ್ ಕುಮಾರ್‌ಗೆ ಮದುವೆ ಮಾಡಿದ ನಂತರವೇ ಆತನಿಗೆ ಈ ಮೊದಲು ಮದುವೆಯಾಗಿದ್ದ ವಿಚಾರ ತಮಗೆ ತಿಳಿಯಿತು ಎಂದು ಕೊಲೆಯಾದ ಮಹಿಳೆಯ ತಂದೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಆತ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಮದುವೆಯಾಗಿದ್ದಾನೆ ಎಂಬುದು ಆಮೇಲೆ ತಿಳಿಯಿತು ಎಂದು ಹೇಳಿದ್ದಾರೆ. ವಿಚಾರ ಗೊತ್ತಾದ ಬಳಿಕ ಆರೋಪಿ ವಿಕಾಸ್ ಕುಮಾರ್ ಅವರ ಕುಟುಂಬವು ಸುನೀತಾಳನ್ನು ತಮ್ಮೊಂದಿಗೆ ಇರಲು ಮನವೊಲಿಸಿತ್ತು ಎಂದು ಹೇಳಿದರು.

ಬಳಿಕ ಇಬ್ಬರು ಸಂಸಾರ ಮಾಡಿಕೊಂಡು ಹೋಗಿದ್ದಾರೆ. ಸುನೀತಾ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಆ ಮಕ್ಕಳು ಜನಿಸಿದ ಸ್ವಲ್ಪ ಸಮಯದ ನಂತರ ನಿಧನ ಹೊಂದಿದವು. ಇದರ ನಂತರ, ಕುಮಾರ್ ತನ್ನ ಗೆಳತಿಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾನೆ. ಇದು ದಂಪತಿ ನಡುವೆ ಆಗಾಗ ಜಗಳಗಳಿಗೆ ಕಾರಣವಾಯಿತು. ಕೊನೆಗೆ, ಸುನೀತಾ ತನ್ನ ಪತಿಯನ್ನು ತೊರೆದು ತನ್ನ ಹೆತ್ತವರ ಮನೆಗೆ ಮರಳಿದರು.

ಇದನ್ನೂ ಓದಿ: Viral News; ಪೊಲೀಸ್ ಠಾಣೆಯಲ್ಲೇ ರೀಲ್ಸ್ ಮಾಡಿದ ಭೂಪರು; ಎಫ್ಐಆರ್ ದಾಖಲು

ಆದರೆ, ಕಳೆದ ತಿಂಗಳು ದುರ್ಗಾ ಪೂಜೆ ಹಬ್ಬದ ಮುನ್ನ ಆರೋಪಿ ವಿಕಾಸ್ ಕುಮಾರ್ ಸುನೀತಾಳ ಮನೆಗೆ ಹೋಗಿ ತನ್ನೊಂದಿಗೆ ಹಿಂತಿರುಗಲು ಕೇಳಿಕೊಂಡನು. ಶನಿವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸುನೀತಾ ಅವರಿಂದ ಕರೆ ಬಂದಿದ್ದು, ಕುಮಾರ್ ತನ್ನ ಮೇಲೆ ಪೆಟ್ರೋಲ್ ಸುರಿದು ಅಂಗಳದಲ್ಲಿ ಬೀಗ ಹಾಕಿದ್ದಾನೆ ಎಂದು ಸುನೀತಾ ಹೇಳಿದ್ದಾಗಿ ಅವರ ಸಹೋದರ ಹೇಳಿದ್ದಾರೆ. ನಂತರ, ವಿಕೃತಿ ಮೆರೆದ ಆರೋಪಿಯು ಸಿಲಿಂಡರ್‌ನಿಂದ ಎಲ್‍ಪಿಜಿ ಬಿಡುಗಡೆ ಮಾಡಿ, ಬೆಂಕಿ ಹಚ್ಚಿದ್ದಾನೆ.

ತಾನು ಬದುಕುಳಿಯುವುದಿಲ್ಲ ಎಂದು ಸುನೀತಾ ತನ್ನ ಕುಟುಂಬಕ್ಕೆ ಕರೆ ಮಾಡಿ ತಿಳಿಸಿದ್ದರಂತೆ. ಆ ನಂತರ ಮತ್ತೆ ಆಕೆಯ ಮೊಬೈಲ್‍ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಸುನೀತಾಳ ಕುಟುಂಬ ಗ್ರಾಮವನ್ನು ತಲುಪುವ ಹೊತ್ತಿಗೆ, ಕುಮಾರ್ ಮತ್ತು ಅವನ ಕುಟುಂಬವು ಆಕೆಯ ಶವವನ್ನು ಅಂತ್ಯಕ್ರಿಯೆ ಮಾಡಲು ಯೋಜಿಸುತ್ತಿತ್ತು. ಸುನೀತಾಳ ಕುಟುಂಬವು ಬರುತ್ತಿರುವುದನ್ನು ನೋಡಿ ಅವರು ಓಡಿಹೋದರು ಎಂದು ಆರೋಪಿಸಲಾಗಿದೆ.

ಇನ್ನು ಈ ಸಂಬಂಧ ಕೊಲೆಯಾದ ಸುನೀತಾಳ ಕುಟುಂಬವು ಪೊಲೀಸರಿಗೆ ಕೂಡಲೇ ದೂರು ನೀಡಿದೆ. ಘಟನಾ ಸ್ಥಳಕ್ಕೆ ಒಂದು ತಂಡ ತಲುಪಿ ತನಿಖೆ ಆರಂಭಿಸಿದೆ. ವಿಧಿವಿಜ್ಞಾನ ತಂಡವು ಮಾದರಿಗಳನ್ನು ಸಂಗ್ರಹಿಸಿದೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಮಹಿಳೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಆಕೆಯ ಅತ್ತೆ-ಮಾವ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.