ಕೋಲ್ಕತಾ, ಜು. 6: ಪಶ್ಚಿಮ ಬಂಗಾಳದಲ್ಲಿ (West Bengal) 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಕೊಲೆಯ ಪ್ರಕರಣದ ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ವಿವರಗಳು ಬಹಿರಂಗಗೊಂಡಿವೆ. ಆಕೆಯ ತಲೆಯಲ್ಲಿ ಆಳವಾದ ಗಾಯ ಕಂಡು ಬಂದಿದೆ. ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಜೀವಂತವಾಗಿ ಕೊಳಕ್ಕೆ ಎಸೆದಿದ್ದಾರೆ ಎನ್ನಲಾಗಿದೆ. ನೀರಿನಲ್ಲಿ ಮುಳುಗಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಪೊಲೀಸರು ತಮ್ಮ ತನಿಖೆಯನ್ನು ತೀವ್ರಗೊಳಿಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಆ ಮೂಲಕ ಒಟ್ಟು ಮೂವರು ಆರೋಪಿಗಳು ಸೆರೆ ಸಿಕ್ಕಂತಾಗಿದೆ (Crime News).
ಪರೀಕ್ಷೆಯಲ್ಲಿ ಬಾಲಕಿಯ ಖಾಸಗಿ ಭಾಗಗಳಲ್ಲಿ ಗಾಯದ ಗುರುತು ಕಂಡು ಬಂದಿದ್ದು, ದೇಹದಾದ್ಯಂತ ಗೀರು ಮತ್ತು ಕಚ್ಚಿದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದಿರಬಹುದು ಅಥವಾ ಗಟ್ಟಿಯಾದ ಮೇಲ್ಮೈಗೆ ಬಡಿದಿರಬಹುದು ಎಂದು ವರದಿ ಸೂಚಿಸುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಬಾಲಕಿಯ ಶ್ವಾಸಕೋಶ ಮತ್ತು ಹೊಟ್ಟೆಯಲ್ಲಿ ನೀರು ಇರುವುದು ಕಂಡುಬಂದಿದ್ದು, ಆಕೆಯನ್ನು ಕೊಳಕ್ಕೆ ಎಸೆದಾಗ ಆಕೆ ಇನ್ನೂ ಜೀವಂತವಾಗಿದ್ದಾಳೆ ಎಂಬುದನ್ನು ಸೂಚಿಸಿದೆ. ತಲೆಗೆ ಪೆಟ್ಟಾಗಿ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರಿಂದ ಉಂಟಾದ ಅತಿಯಾದ ರಕ್ತಸ್ರಾವ ಆಕೆಯ ಸಾವಿಗೆ ಕಾರಣ ಎಂದು ಪೊಲೀಸ್ ಮೂಲಗಳು ಹೇಳಿವೆ. ʼʼತನಿಖೆ ನಿರ್ಣಾಯಕ ಹಂತದಲ್ಲಿದೆ. ನಾವು ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದೇವೆʼʼ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮಂಕಿ ಠಾಣೆ ಪಿಎಸ್‌ಐ ಬಂಧನ
ದಕ್ಷಿಣ 24 ಪರಗಣ ಜಿಲ್ಲೆಯ ತನ್ನ ಮನೆಯಿಂದ ಸ್ನೇಹಿತನಿಗೆ ಹುಟ್ಟುಹಬ್ಬದ ಉಡುಗೊರೆಯನ್ನು ಖರೀದಿಸಲು ಬಾಲಕಿ ಶನಿವಾರ (ಜು. 4) ಹೊರಟಿದ್ದಳು, ಆದರೆ ಹಿಂತಿರುಗಿರಲಿಲ್ಲ. ಬಳಿಕ ಆಕೆಯ ಕುಟುಂಬವು ನಾಪತ್ತೆ ದೂರು ದಾಖಲಿಸಿದ್ದು, ಭಾನುವಾರ (ಜು. 5) ಆಕೆಯ ಶವವು ಚೀಲದೊಳಗೆ ತುಂಬಿದ ಸ್ಥಿತಿಯಲ್ಲಿ ಕೊಳದಲ್ಲಿ ಪತ್ತೆಯಾಗಿದೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ. ಅದರಲ್ಲಿ ಬಾಲಕಿಯನ್ನು ನಾಲ್ವರು ಕರೆದುಕೊಂಡು ಹೋಗುತ್ತಿರುವ ದೃಶ್ಯಗಳಿವೆ. ʼʼನಾವು ಲಭ್ಯವಿರುವ ಎಲ್ಲ ಸುಳಿವುಗಳನ್ನು ಹುಡುಕುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳು, ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ. ಭಾಗಿಯಾಗಿರುವವರನ್ನು ಗುರುತಿಸಿ ಆದಷ್ಟು ಬೇಗ ಬಂಧಿಸಲಾಗುವುದುʼʼ ಎಂದು ಅಧಿಕಾರಿ ವಿವರಿಸಿದ್ದಾರೆ.
ಪೊಲೀಸರು ಪ್ರಮುಖ ಆರೋಪಿ ಆನಂದ ಸರ್ದಾರ್‌ನನ್ನು ಬಂಧಿಸಿದ್ದು, ಒಟ್ಟು ಬಂಧನಗಳ ಸಂಖ್ಯೆ ಮೂರಕ್ಕೆ ಏರಿದೆ. ಬಂಧಿತ ಇತರ ಇಬ್ಬರನ್ನು ದಿಬಾಕರ್ ಸರ್ದಾರ್ ಮತ್ತು ಪ್ರಭಾಸ್ ಮಂಡಲ್ ಎಂದು ಗುರುತಿಸಲಾಗಿದ್ದು, ಇನ್ನೂ ಮೂವರು ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ.
ಬಾಲಕಿಯ ಶವ ಪತ್ತೆ ಬಳಿಕ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಅಪರಾಧದಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಯನ್ನು ಗುಂಪೊಂದು ಹೊಡೆದು ಹತ್ಯೆ ಮಾಡಿದೆ. ಉದ್ರಿಕ್ತಗೊಂಡ ಪ್ರತಿಭಟನಾಕಾರರು ರಸ್ತೆ ಮತ್ತು ರೈಲು ಹಳಿಗಳನ್ನು ತಡೆದು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದರು.