ಬೆಂಗಳೂರು: ಕೆ.ಆರ್. ಪುರಂನ ಶೀಗೆಹಳ್ಳಿಯ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಭೀಕರ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶ್ವೇತಾಳನ್ನು ತಮಿಳುನಾಡಿನ ಪುದುಚೆರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆಕೆಯ ವಿಚಾರಣೆ ನಡೆಸಲಾಗುತ್ತಿದ್ದು, ಆಕೆ ಕೊಲೆ ಬಗ್ಗೆ ಹಲವು ಹೇಳಿಕೆಯನ್ನು ನೀಡಿದ್ದಾಳೆ. ಕೊಲೆಯ ನಂತರ ಶ್ವೇತಾ ಮತ್ತು ಆಕೆಯ ಬಾಯ್‌ಫ್ರೆಂಡ್ ಕೆನತ್ ಪ್ರತ್ಯೇಕವಾಗಿ ಹೋಗಿದ್ದರು. ತಲೆಮರೆಸಿಕೊಂಡಿದ್ದ ಶ್ವೇತಾಳನ್ನು ಪಾಂಡಿಚೇರಿಯ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ತಂದೆ ತಾಯಿ ಹಾಗೂ ತಂಗಿ ಕೊಲೆ ಬಗ್ಗೆ ಹೇಳಿಕೆ ನೀಡಿದ ಶ್ವೇತಾ, ನನ್ನ ತಾಯಿ ನನ್ನ ಜೀವನವನ್ನೇ ಕಂಟ್ರೋಲ್ ಮಾಡುತ್ತಿದ್ದರು. ನಾನು ಏನು ಮಾಡಿದರೂ ಸಹ ನನ್ನನ್ನು ಸ್ವತಂತ್ರವಾಗಿ ಬಿಡುತ್ತಿರಲಿಲ್ಲ. ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ, ಹಾಗಾಗಿ ನಾನು ತಾಯಿಯನ್ನು ಕೊಲೆ ಮಾಡಿದೆ ಎಂದು ಹೇಳಿದ್ದಾಳೆ. ಆಕೆಯ ಬಾಯ್‌ಫ್ರೆಂಡ್ ಕೆನತ್ ಇನ್ನೂ ತಲೆ ಮರಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗಿದೆ.
ಏನಿದು ಘಟನೆ?
ಪ್ರಿಯಕರನೊಟ್ಟಿಗೆ ಲಿವ್ ಇನ್ ರಿಲೇಷನ್‌ನಲ್ಲಿರಲು ಒಪ್ಪದ ಕಾರಣ ಆರೋಪಿ ಶ್ವೇತಾ ತನ್ನ ತಂದೆ ತಾಯಿ ಹಾಗೂ ತಂಗಿಯನ್ನು ಪ್ರಿಯಕರ ಕೆನತ್ ಜೊತೆಗೂಡಿ ಕೊಲೆ ಮಾಡಿದ್ದಳು. ಆರೋಪಿ ಶ್ವೇತಾ, ಕೆನತ್ ಎಂಬಾತನ ಜೊತೆ ಮದುವೆಯಾಗದೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದಳು. ಮಗಳ ಈ ನಡವಳಿಕೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಗಳಿಗೆ ಬುದ್ಧಿವಾದ ಹೇಳಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಸೋಮಸುಂದರ್ ಅವರು ಪತ್ನಿ ಮತ್ತು ಕಿರಿಯ ಮಗಳೊಂದಿಗೆ ಸಿಗೇಹಳ್ಳಿಯ ಡಾಮ್ನಿಕದ ಲೇಔಟ್‌ನಲ್ಲಿರುವ ‘ಸಾಯಿ ಗ್ರೀನ್ ಅಪಾರ್ಟ್‌ಮೆಂಟ್’ಗೆ ಬಂದಿದ್ದರು. ಈ ವೇಳೆ ಕುಟುಂಬಸ್ಥರ ನಡುವೆ ಜಗಳವಾಗಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಶ್ವೇತ ತನ್ನ ತನ್ನ ತಂಗಿ ಹಾಗೂ ತಾಯಿಗೆ ಮೊದಲು ಚಾಕುವಿನಿಂದ ಇರಿದಿದ್ದಾಳೆ. ಅವರು ತೀವೃ ರಕ್ತಸ್ರಾವದಿಂದ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ತಂದೆ ಸೋಮಸುಂದರ್ ಓಡುತ್ತಾ ಮನೆಯಿಂದ ಹೊರ ಬಂದಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡ ನೆರೆ ಹೊರೆಯವರು ತಕ್ಷಣವೇ ‘112’ ತುರ್ತು ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.