ಲಖನೌ: ವ್ಯಕ್ತಿಯ ಕೊಲೆಯಾಗಿ ಬರೋಬ್ಬರಿ ಹತ್ತು ತಿಂಗಳ ಬಳಿಕ (Murder Case) ಪೊಲೀಸರು ಆರೋಪಿಗಳನ್ನು ಬಂಧಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ವ್ಯಕ್ತಿಯನ್ನು ಗುದ್ದಲಿಯಿಂದ ಕೊಲೆ ಮಾಡಿ ಆತನ ಮನೆಯ ಹಿತ್ತಲಿನಲ್ಲಿ ಹೂಳಲಾಗಿತ್ತು. ಪೊಲೀಸರು ಭಾನುವಾರ ಆತನ ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆದು, ಆತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಸುಮಾರು 10 ತಿಂಗಳ ಹಿಂದೆ, ಆರೋಪಿ ಲಕ್ಷ್ಮಿ ತನ್ನ ಪತಿ ಶಿವಬೀರ್ ಸಿಂಗ್ (50) ಕೆಲಸದ ನಿಮಿತ್ತ ಗುಜರಾತ್‌ಗೆ ಹೋಗಿದ್ದಾರೆ ಎಂದು ಕಥೆ ಕಟ್ಟಿದ್ದಳು. ಶಿವಬೀರ್ ಸಿಂಗ್ ತಾಯಿ ಸಾವಿತ್ರಿ ಮಗನನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನ ಪಟ್ಟಿದ್ದರು. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು.
ಸಾವಿತ್ರಿ ದೇವಿಯ ಅನುಮಾನ ಹೆಚ್ಚಾದ ಹಿನ್ನೆಲೆಯಲ್ಲಿ, ಅವರು ಆಗಸ್ಟ್ 19 ರಂದು ವ್ಯಕ್ತಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಲಕ್ಷ್ಮಿಗೆ ಅಕ್ರಮ ಸಂಬಂಧವಿರುವುದು ಖಚಿತವಾಗಿದೆ. ಆಕೆಯ ಸೋದರಳಿಯ ಅಮಿತ್ ಸಿಂಗ್ ಜೊತೆ ಸಂಬಂಧ ಹೊಂದಿದ್ದು, ವಿಚಾರಣೆಗಾಗಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಗ ಈ ಜೋಡಿಯ ಮಾಸ್ಟರ್ ಪ್ಲಾನ್ ಹೊರಬಿದ್ದಿದೆ. ತಾವೇ ಕೊಲೆ ಮಾಡಿದ್ದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ.
ಲಕ್ಷ್ಮಿ ತನ್ನ ಪತಿ ಶಿವಬೀರ್ ಸಿಂಗ್ ಗುಜರಾತ್‌ಗೆ ತೆರಳಿದ್ದಾನೆ ಎಂದು ಕಥೆ ಕಟ್ಟಿ, ಮನೆಯವರಿಗೆ ನಂಬಿಸಿದ್ದಳು. ವಾಸ್ಥವವಾಗಿ ಆತನನ್ನು ಈಕೆ ಹಾಗೂ ಪ್ರಿಯಕರ ಕೊಲೆ ಮಾಡಿ ಮನೆಯ ಹಿಂಬದಿ ಹೂತಿಟ್ಟಿದ್ದರು. ತನಿಖೆಯನ್ನು ದಾರಿ ತಪ್ಪಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು, ಆದರೆ ನಂತರ, ತೀವ್ರ ವಿಚಾರಣೆಯ ಸಮಯದಲ್ಲಿ, ಅವರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಹಾಯಕ ಪೊಲೀಸ್ ಆಯುಕ್ತ ಪಂಕಿ ಶಿಖರ್ ಹೇಳಿದ್ದಾರೆ. ಮೊದಲು ಲಕ್ಷ್ಮಿ ಶಿವಬೀರ್‌ಗೆ ಮಾದಕ ದ್ರವ್ಯ ಬೆರೆಸಿದ ಚಹಾ ಕುಡಿಸಿದ್ದಾಳೆ. ನಂತರ ಆತನಿಗೆ ಪ್ರಜ್ಞೆ ತಪ್ಪಿದಾಗ ಆಕೆಯ ಪ್ರಿಯಕರ ಅಮಿತ್ ಗುದ್ದಲಿಯಿಂದ ಹೊಡೆದು ಕೊಂದಿದ್ದಾನೆ. ಇಬ್ಬರೂ ಸೇರಿ ಶವವನ್ನು ಮನೆಯ ಹಿಂಬದಿ ಯಾರಿಗೂ ಅನುಮಾನ ಬರದಂತೆ ಹೂತು ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Triple Murder Case: ಕೊಲೆಯಾದ ರೌಡಿಶೀಟರ್ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ
ಇಬ್ಬರು ಆರೋಪಿಗಳ ತಪ್ಪೊಪ್ಪಿಗೆಯ ಮೇರೆಗೆ ಕಾರ್ಯನಿರ್ವಹಿಸಿದ ಪೊಲೀಸ್ ತಂಡವು ಹಿತ್ತಲನ್ನು ಅಗೆದು ಅಸ್ಥಿಪಂಜರದ ಅವಶೇಷಗಳು, ಒಂದು ವೆಸ್ಟ್ ಮತ್ತು ಲಾಕೆಟ್ ಅನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ವೆಸ್ಟ್ ಮತ್ತು ಲಾಕೆಟ್ ಶಿವಬೀರ್ ಅವರಿಗೆ ಸೇರಿದ್ದು ಎಂದು ಕುಟುಂಬ ದೃಢಪಡಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ನೆರೆಹೊರೆಯವರು ತಿಳಿಸಿದ ಪ್ರಕಾರ ಅಮಿತ್ ಜೊತೆಗಿನ ಪತ್ನಿಯ ಸಂಬಂಧ ಶಿವಬೀರ್ ಗೆ ತಿಳಿದ ನಂತರ ಆಕೆಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಹೀಗಾಗೆ ಆಕೆ ಕೊಲೆ ಮಾಡಿಸಿದ್ದಾಳೆ ಎಂದು ಹೇಳಿದ್ದಾರೆ. ಭಾನುವಾರ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.