ಭೋಪಾಲ್: ಪೊಲೀಸರನ್ನೇ ತಲೆಕೆಡಿಸಿಕೊಳ್ಳುವಂತೆ ಮಾಡಿರುವ ವಿಚಿತ್ರ ಪ್ರಕರಣವೊಂದರಲ್ಲಿ, ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಮಧ್ಯಪ್ರದೇಶ (Madhya Pradesh)ದ ಬುಡಕಟ್ಟು ಸಮುದಾಯ(tribal)ದ ಯುವತಿಯೊಬ್ಬಳು ಬರೋಬ್ಬರಿ 22 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾಳೆ. ಈಕೆಯ ಕೊಲೆ ಆರೋಪದ ಮೇಲೆ ಈಕೆಯ ತಂದೆ ಮತ್ತು ಸಹೋದರ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಮಹಾರಾಷ್ಟ್ರ (Maharashtra) ದಲ್ಲಿ ಪತ್ತೆಯಾಗಿದ್ದ ತಲೆಯಿಲ್ಲದ, ಸುಟ್ಟ ದೇಹವು ಈ ಯುವತಿಯದ್ದೇ ಎಂದು ಯಾವುದೇ ಖಚಿತ ಪುರಾವೆಗಳಿಲ್ಲದೆ ತನಿಖಾಧಿಕಾರಿಗಳು ಹೇಗೆ ತೀರ್ಮಾನಕ್ಕೆ ಬಂದರು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಶಿವಾನಿ ಎಂಬ ಯುವತಿ ಏಪ್ರಿಲ್‌ನಲ್ಲಿ ನಾಪತ್ತೆಯಾಗಿದ್ದಳು. ವಾರಗಳ ನಂತರ, ಮಹಾರಾಷ್ಟ್ರದ ಜಲಗಾಂವ್ ಜಾಮೋದ್‌ನಲ್ಲಿ ಪತ್ತೆಯಾದ ಸುಟ್ಟ ಶವ ಶಿವಾನಿಯದ್ದೇ ಎಂದು ಪೊಲೀಸರು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಆಕೆಯ ತಂದೆ ಬಾಪುರಾವ್ ಮತ್ತು ಸಹೋದರ ಅಜಯ್ ಜೈಲು ಪಾಲಾಗಿದ್ದರು. ಆದರೆ ಈಗ ಶಿವಾನಿ ಜೀವಂತವಾಗಿ ಮರಳಿ ಬಂದಿದ್ದಾಳೆ.
ನಾಪತ್ತೆಯಿಂದ ಹಿಡಿದು ‘ಕೊಲೆ’ಯವರೆಗಿನ ಕಥೆ
ಖಾಕ್ನಾರ್ ಪೊಲೀಸ್ ಠಾಣಾ ಅಧಿಕಾರಿ ಅಭಿಷೇಕ್ ಜಾಧವ್ ಅವರ ಪ್ರಕಾರ, ಶಿವಾನಿ ಏಪ್ರಿಲ್ 22 ರಂದು ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಹುಡುಕಾಟ ನಡೆಸಿ ಮೇ 1 ರಂದು ದೂರು ದಾಖಲಿಸಿದ್ದರು. ತನಿಖೆಯ ವೇಳೆ ಅರ್ಜುನ್ ಎಂಬ ಸ್ಥಳೀಯ ಯುವಕನೂ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತು. ಇವರಿಬ್ಬರೂ ಒಟ್ಟಿಗೆ ಹೋಗಿ ಬೇರೆಡೆ ವಾಸಿಸುತ್ತಿದ್ದರು.
ಮನೆಯಲ್ಲಿ ಎಸಿ ಸ್ಫೋಟ: ಮಾಜಿ ಐಎಎಸ್ ಅಧಿಕಾರಿ ಸಾವು, ಮಗನಿಗೆ ಗಂಭೀರ ಗಾಯ
ಆದರೆ ಈ ಸತ್ಯ ಹೊರಬರುವ ಮುನ್ನವೇ ಪ್ರಕರಣ ಬೇರೆ ತಿರುವು ಪಡೆದುಕೊಂಡಿತ್ತು. ಜಲಗಾಂವ್ ಜಾಮೋದ್‌ನಲ್ಲಿ ಯುವತಿಯೊಬ್ಬಳ ತಲೆಯಿಲ್ಲದ ಮತ್ತು ಭಾಗಶಃ ಸುಟ್ಟ ದೇಹ ಪತ್ತೆಯಾಗಿತ್ತು. ಶವ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರಿಂದ ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು. ಸಿಸಿಟಿಎನ್ಎಸ್ ಪೋರ್ಟಲ್‌ನಲ್ಲಿ ಶಿವಾನಿ ನಾಪತ್ತೆಯಾಗಿರುವ ಮಾಹಿತಿ ನೋಡಿ, ಮಹಾರಾಷ್ಟ್ರ ಪೊಲೀಸರು ಆ ಶವ ಶಿವಾನಿಯದ್ದೇ ಇರಬಹುದು ಎಂದು ತೀರ್ಮಾನಿಸಿ ಆಕೆಯ ತಂದೆ ಮತ್ತು ಸಹೋದರನನ್ನು ಬಂಧಿಸಿ ಬುಲ್ಧಾನಾ ಜೈಲಿಗೆ ಅಟ್ಟಿದ್ದರು.
ಜೀವಂತವಾಗಿ ಬಂದ ಯುವತಿ; ಹೆಬ್ಬೆರಳ ಗುರುತಿನ ಮೂಲಕ ದೃಢೀಕರಣ
ತನ್ನ "ಕೊಲೆ" ಪ್ರಕರಣದಲ್ಲಿ ತಂದೆ ಮತ್ತು ಸಹೋದರ ಜೈಲು ಸೇರಿರುವ ವಿಷಯ ತಿಳಿದ ಶಿವಾನಿ, ತಕ್ಷಣ ತನ್ನ ಸಂಬಂಧಿಕರನ್ನು ಸಂಪರ್ಕಿಸಿ ತಾನು ಜೀವಂತವಾಗಿರುವುದನ್ನು ತಿಳಿಸಿದ್ದಾಳೆ. ಪೊಲೀಸರು ಆಕೆಯನ್ನು ಪತ್ತೆಹಚ್ಚಿದಾಗ, "ನಾನು ಅರ್ಜುನ್ ಜೊತೆ ಹೋಗಿದ್ದೆ. ನಾವಿಬ್ಬರೂ ಬದುಕಿದ್ದೇವೆ, ನನ್ನ ತಂದೆ-ಸಹೋದರನನ್ನು ಬಿಡುಗಡೆ ಮಾಡಿ," ಎಂದು ಕೇಳಿಕೊಂಡಿದ್ದಾಳೆ. ಸಂಬಂಧಿಕರ ಸಮ್ಮುಖದಲ್ಲಿ ಹೆಬ್ಬೆರಳ ಗುರುತು ಮತ್ತು ಸರ್ಕಾರದ ಗುರುತಿನ ಚೀಟಿಗಳ ಮೂಲಕ ಆಕೆಯ ಗುರುತನ್ನು ಪೊಲೀಸರು ಪರಿಶೀಲಿಸಿ ಖಚಿತಪಡಿಸಿಕೊಂಡಿದ್ದಾರೆ.
ಹಾಗಾದರೆ ಆ ಶವ ಯಾರದ್ದು?
ಶಿವಾನಿ ಜೀವಂತವಾಗಿ ಬಂದಿರುವುದರಿಂದ ಪೊಲೀಸರ ತನಿಖೆ ಮತ್ತೆ ಮೊದಲ ಹಂತಕ್ಕೆ ಬಂದು ನಿಂತಿದೆ. ಆ ತಲೆಯಿಲ್ಲದ ಸುಟ್ಟ ಶವ ಯಾರದ್ದು ಎಂಬ ರಹಸ್ಯ ಇನ್ನೂ ಮುಚ್ಚಿಹೋಗಿದೆ. ಈ ಎಡವಟ್ಟು ಹೇಗೆ ಸಂಭವಿಸಿತು ಮತ್ತು ಆ ಶವ ಯಾರದ್ದು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಈಗ ಹೊಸದಾಗಿ ತನಿಖೆ ಆರಂಭಿಸಿದ್ದಾರೆ.