ಮನೆಯಲ್ಲಿ ಎಸಿ ಸ್ಫೋಟ: ಮಾಜಿ ಐಎಎಸ್ ಅಧಿಕಾರಿ ಸಾವು, ಮಗನಿಗೆ ಗಂಭೀರ ಗಾಯ
ರಾತ್ರಿ ಮಲಗಿದ್ದ ವೇಳೆ ಮನೆಯಲ್ಲಿ ಎಸಿ ಸ್ಪೋಟಗೊಂಡು ಮಾಜಿ ಐಎಎಸ್ ಅಧಿಕಾರಿ ಸಾವನಪ್ಪಿದ್ದು, ಅವರ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ಗುರುವಾರ ನಡೆದಿದೆ. ಮಾಜಿ ಐಎಎಸ್ ಅಧಿಕಾರಿ ಮತ್ತು ಭಾರತ ಸ್ಪರ್ಧಾ ಆಯೋಗದ (ಸಿಸಿಐ) ಮೊದಲ ಅಧ್ಯಕ್ಷ ಧನೇಂದ್ರ ಕುಮಾರ್ ಮೃತರು.
ಸಂಗ್ರಹ ಚಿತ್ರ -
ನವದೆಹಲಿ: ಮನೆಯಲ್ಲಿ ಎಸಿ ಸ್ಪೋಟಗೊಂಡು (AC blast) ಮಾಜಿ ಐಎಎಸ್ ಅಧಿಕಾರಿ (Ex-IAS Officer ) ಮತ್ತು ಭಾರತ ಸ್ಪರ್ಧಾ ಆಯೋಗದ (CCI) ಮೊದಲ ಅಧ್ಯಕ್ಷ 80 ವರ್ಷದ ಧನೇಂದ್ರ ಕುಮಾರ್ (Dhanendra Kumar) ಅವರು ಸಾವನ್ನಪ್ಪಿದ್ದಾರೆ. ಈ ಘಟನೆ ಗುರುವಾರ ರಾತ್ರಿ 11:18ರ ಸುಮಾರಿಗೆ ನಡೆದಿದೆ. ಅವರ ಮಗ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಧನೇಂದ್ರ ಕುಮಾರ್, ಅವರ ಮಗ ಸೇರಿದಂತೆ ಒಟ್ಟು ಐವರು ಇದ್ದರು. ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಪ್ರಮುಖ ಸ್ಥಳವಾದ ದೆಹಲಿಯ ಹೌಜ್ ಖಾಸ್‌ನಲ್ಲಿರುವ ಧನೇಂದ್ರ ಕುಮಾರ್ ಅವರ ಮನೆಯಲ್ಲಿ ಎಸಿ ಸ್ಫೋಟ ಉಂಟಾಗಿದೆ. ಸ್ಪೋಟದ ಬಳಿಕ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತ್ತು. ಧನೇಂದ್ರ ಕುಮಾರ್ ಅವರು ಹೊಗೆಯಿಂದ ಉಸಿರಾಟದ ತೊಂದರೆ ಅನುಭವಿಸಿ ಸಾವನ್ನಪ್ಪಿದ್ದಾರೆ. ಅವರ ಮಗ ಗಾಯಗೊಂಡಿದ್ದರು.
ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ‘ಟೈಮ್ ಬಾಂಬ್’: ಡಿಕೆಶಿ-ರಾಹುಲ್‌ಗೆ ಜಾತಿ ಗಣತಿ ಸವಾಲು!
ಘಟನೆಯ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಮನೆಕೆಲಸಗಾರರು ಸೇರಿದಂತೆ ಒಟ್ಟು ಐದು ಮಂದಿ ಮನೆಯಲ್ಲಿದ್ದರು. ಮಾಹಿತಿ ತಿಳಿದ ತಕ್ಷಣವೇ ಪೊಲೀಸ್ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಮನೆಯೊಳಗೆ ಇದ್ದ ಸದಸ್ಯರನ್ನು ರಕ್ಷಿಸಲು ಮುಂದಾದರು.
ಧನೇಂದ್ರ ಕುಮಾರ್ ಮತ್ತು ಅವರ ಮಗನನ್ನು ಹತ್ತಿರದ ಆಸ್ಪತ್ರೆಗೆ ತಕ್ಷಣವೇ ದಾಖಲಿಸಲಾಗಿದ್ದು, ಧನೇಂದ್ರ ಕುಮಾರ್ ಅವರು ಮೊದಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಅವರ ಮಗ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಅಳವಡಿಸಲಾದ ಹವಾನಿಯಂತ್ರಣ ವ್ಯವಸ್ಥೆಯ ಒಳಾಂಗಣದಲ್ಲಿ ಸ್ಫೋಟ ಉಂಟಾಗಿ ಹೊಗೆ, ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಧನೇಂದ್ರ ಕುಮಾರ್ ಅವರ ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ಇದರಲ್ಲಿ ಯಾವುದೇ ಅನುಮಾನಸ್ಪದ ಸಂಗತಿ ಕಂಡು ಬಂದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮತ್ತು ಅಪರಾಧ ತಂಡಗಳು ತಿಳಿಸಿವೆ.
1968 ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಧನೇಂದ್ರ ಕುಮಾರ್ ಅವರು ಕೇಂದ್ರ ಮತ್ತು ಹರಿಯಾಣ ಸರ್ಕಾರಗಳಲ್ಲಿ ಹಲವಾರು ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದರು. ದೇಶದ ಸ್ಪರ್ಧಾ ಕಾನೂನು ಮತ್ತು ಆರ್ಥಿಕ ಸುಧಾರಣೆಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ರಕ್ಷಣೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಸಂಸ್ಕೃತಿ ಸಚಿವಾಲಯ ಸೇರಿದಂತೆ ಹಲವಾರು ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅವರು ರಾಷ್ಟ್ರೀಯ ಭದ್ರತೆ, ಆಡಳಿತಾತ್ಮಕ ವಿಷಯಗಳು, ಮೂಲಸೌಕರ್ಯ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು. ಗ್ರಾಮೀಣ ವಿದ್ಯುದೀಕರಣ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿಯೂ ಧನೇಂದ್ರ ಕುಮಾರ್ ಸೇವೆ ಸಲ್ಲಿಸಿದ್ದಾರೆ.
ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭೂತಾನ್ ವಿಶ್ವ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಅವರು ದಕ್ಷಿಣ ಏಷ್ಯಾದ ದೇಶಗಳಿಗೆ ಸಂಬಂಧಿಸಿದ ಆರ್ಥಿಕ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡಿದ್ದರು.
ಭಾರತದ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದ ಅವರು 2009 ರಿಂದ 2011 ರವರೆಗೆ ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಂಡರು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಧನೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸ್ಪರ್ಧಾ ನೀತಿಯನ್ನು ಸಿದ್ಧಪಡಿಸಲು ಒಂದು ಸಮಿತಿಯನ್ನು ಕೂಡ ರಚಿಸಿತ್ತು.
ಲಂಡನ್‌ನಲ್ಲಿರುವ ಭಾರತೀಯ ಹೂಡಿಕೆ ಕೇಂದ್ರದಲ್ಲಿ ನಿವಾಸ ನಿರ್ದೇಶಕರಾಗಿ, ಕೃಷಿ ಸಚಿವಾಲಯ, ಜವಳಿ ಸಚಿವಾಲಯ ಮತ್ತು ಸಂವಹನ ಸಚಿವಾಲಯದಲ್ಲೂ ಕೆಲಸ ಮಾಡಿದ್ದಾರೆ. ನಿವೃತ್ತಿ ಬಳಿಕ ಅವರು ಸಾರ್ವಜನಿಕ ನೀತಿ ಮತ್ತು ಕಾರ್ಪೊರೇಟ್ ವ್ಯವಹಾರಗಳಲ್ಲಿ ಸಕ್ರಿಯರಾಗಿದ್ದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಪೊರೇಟ್ ಅಫೇರ್ಸ್‌ನಲ್ಲಿ ಸ್ಪರ್ಧಾ ಕಾನೂನಿನ ಶಾಲೆಯ ಪ್ರಧಾನ ಸಲಹೆಗಾರ ಮತ್ತು ಮುಖ್ಯ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ವೃತ್ತಿ ಜೀವನದ ಆರಂಭದಲ್ಲಿ ಹರಿಯಾಣದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಅವರು, ಹರಿಯಾಣ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಸಾರ್ವಜನಿಕ ವ್ಯವಹಾರಗಳಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು.
ಪಾಕಿಸ್ತಾನ ಮೂಲದ ಭಯೋತ್ಪಾದರಿಂದ ಹಲವೆಡೆ ದಾಳಿಗೆ ಸಂಚು: ಉತ್ತರ ಪ್ರದೇಶದಲ್ಲಿ ನಾಲ್ವರ ಬಂಧನ
ಹರಿಯಾಣದ ಹಲವಾರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಮತ್ತು ಇತರ ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಕರ್ನಾಲ್ ಮತ್ತು ಜಿಂದ್‌ನ ಉಪ ಆಯುಕ್ತರಾಗಿದ್ದರು. ಕಾರ್ಮಿಕ ಆಯುಕ್ತರು, ಸಹಕಾರಿ ಸಂಘಗಳ ರಿಜಿಸ್ಟ್ರಾರ್, ಕೈಗಾರಿಕೆಗಳ ನಿರ್ದೇಶಕರು ಸೇರಿದಂತೆ ಹಲವಾರು ಇತರ ಹುದ್ದೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದರು.