ಲಖನೌ, ಆ. 5: ಸ್ವಯಂ ಘೋಷಿತ ದೇವಮಾನವನೊಬ್ಬ ಮಾನಸಿಕ ಅಸ್ವಸ್ಥತೆಗೆ ಅವೈಜ್ಞಾನಿಕವಾಗಿ ಚಿಕಿತ್ಸೆ ನೀಡಿದ ಪರಿಣಾಮ 33 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 10 ದಿನಗಳ ಕಾಲ ಕಂಬಕ್ಕೆ ಕಟ್ಟಿಹಾಕಿದ ನಂತರ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಯಂ ಘೋಷಿತ ದೇವಮಾನವ ಮತ್ತು ಇತರರು ನಂಬಿಕೆ ಆಧಾರಿತ ಚಿಕಿತ್ಸೆ ಹೆಸರಿನಲ್ಲಿ ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ (crime news).
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಅಂಕಿತ್ ಯಾದವ್, ಸ್ವಯಂ ಘೋಷಿತ ದೇವಮಾನವ ಮುನ್ನಾ (71) ಮತ್ತು ಆತನ ಸಹಚರ 55 ವರ್ಷದ ಕದಿರ್ ಅಹ್ಮದ್‌ನನ್ನು(55) ಪೊಲೀಸರು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮತ್ತು ತನಿಖಾ ವರದಿಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಲಖನೌದ ಗೋಮ್ತಿನಗರ ನಿವಾಸಿ ರೂಬಿ ಯಾದವ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಸೋಮವಾರ (ಆಗಸ್ಟ್ 3) ಸಂಜೆ ದೇವಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಆ ರಾತ್ರಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಅಸ್ಸಾಂ ಸಿಆರ್‌ಪಿಎಫ್ ಶಿಬಿರದಲ್ಲಿ ಗುಂಡಿನ ದಾಳಿ: ಇಬ್ಬರು ಯೋಧರನ್ನು ಹತ್ಯೆಗೈದು ಎಎಸ್‌ಐ ಆತ್ಮಹತ್ಯೆ
ಪ್ರಾಥಮಿಕ ವಿಚಾರಣೆಯಲ್ಲಿ ರೂಬಿಯನ್ನು ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ದೇವಾ ಪ್ರದೇಶದ ಒಂದು ಸ್ಥಳದಲ್ಲಿ ಸುಮಾರು 10 ದಿನಗಳ ಕಾಲ ಕಂಬಕ್ಕೆ ಕಟ್ಟಿ ಹಾಕಲಾಗಿತ್ತು ಎಂದು ತಿಳಿದುಬಂದಿದೆ. ಆಕೆಯ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡುವ ಹೆಸರಿನಲ್ಲಿ ಅಲ್ಲಿ ಆಚರಣೆಗಳನ್ನು ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೀತಾಪುರ ಜಿಲ್ಲೆಯ ನಿವಾಸಿಯಾಗಿರುವ ರೂಬಿಯ ತಂದೆ ಪ್ರಮೋದ್ ಯಾದವ್ ತಮ್ಮ ದೂರಿನಲ್ಲಿ, ತಮ್ಮ ಅಳಿಯ, ಸ್ವಯಂ ಘೋಷಿತ ದೇವಮಾನವ ಮತ್ತು ಅವರ ಸಹಚರರೊಂದಿಗೆ ಭೂತೋಚ್ಚಾಟನೆ ಮತ್ತು ಇತರ ಆಚರಣೆಗಳನ್ನು ನಡೆಸುವಾಗ ತಮ್ಮ ಮಗಳನ್ನು ಹಲವಾರು ದಿನಗಳವರೆಗೆ ಕಂಬಕ್ಕೆ ಕಟ್ಟಿಹಾಕಿದ್ದರು ಎಂದು ಆರೋಪಿಸಿದ್ದಾರೆ. ಈ ಅವಧಿಯಲ್ಲಿ ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆ ಮೃತಪಟ್ಟಳು ಎಂದು ಅವರು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದೇವಾದ ಸ್ಟೇಷನ್ ಹೌಸ್ ಅಧಿಕಾರಿ ಅಲೋಕ್ ಮಣಿ ತ್ರಿಪಾಠಿ ತಿಳಿಸಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದರು.
ನಂಬಿಕೆ ಆಧಾರಿತ ಚಿಕಿತ್ಸೆ ಆಚರಣೆಗಳ ಸಮಯದಲ್ಲಿ ರೂಬಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಹಲವಾರು ದಿನಗಳವರೆಗೆ ಕಟ್ಟಿಹಾಕಲಾಗಿತ್ತು. ಹೀಗಾಗಿ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.