ಅಸ್ಸಾಂ ಸಿಆರ್‌ಪಿಎಫ್ ಶಿಬಿರದಲ್ಲಿ ಗುಂಡಿನ ದಾಳಿ: ಇಬ್ಬರು ಯೋಧರನ್ನು ಹತ್ಯೆಗೈದು ಎಎಸ್‌ಐ ಆತ್ಮಹತ್ಯೆ; ಕಾರಣ ನಿಗೂಢ
CRPF Jawan: ಅಸ್ಸಾಂನ ನಾಗಾಂ ಜಿಲ್ಲೆಯ ಸಿಆರ್‌ಪಿಎಫ್ 34ನೇ ಬಟಾಲಿಯನ್ ಶಿಬಿರದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಬಲ್ಲಾನಿ ಪ್ರೇಮಬರಂ ಇಬ್ಬರು ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಎಎಸ್‌ಐ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಿಆರ್‌ಪಿಎಫ್ ಹಾಗೂ ಅಸ್ಸಾಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ದಿಸ್‌ಪುರ, ಆ. 4: ಅಸ್ಸಾಂನ ನಾಗಾಂ ಜಿಲ್ಲೆಯ ಕಟಿಮಾರಿ ಪ್ರದೇಶದಲ್ಲಿರುವ 34ನೇ ಬಟಾಲಿಯನ್ ಸಿಆರ್‌ಪಿಎಫ್ ಶಿಬಿರದಲ್ಲಿ ಮಂಗಳವಾರ (ಆಗಸ್ಟ್ 4) ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಗುಂಡಿನ ದಾಳಿ ನಡೆಸಿದ ಸಹಾಯಕ ಉಪನಿರೀಕ್ಷಕ (ASI) ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಬೆಳಗ್ಗೆ ಸುಮಾರು 7 ಗಂಟೆಗೆ ಮುಖ್ಯ ದ್ವಾರದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ/ಜಿಡಿ ಬಲ್ಲಾನಿ ಪ್ರೇಮಬರಂ (ಆಂಧ್ರ ಪ್ರದೇಶ ಮೂಲದವರು) ತಮ್ಮ ಸಹೋದ್ಯೋಗಿಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು.
ಅಸ್ಸಾಂನಲ್ಲಿ ಗುಂಡಿನ ದಾಳಿ:
Nagaon, Assam: Three soldiers were killed in a shooting at the 34th Battalion CRPF camp in Katimari, Nagaon. ASI Ballani Premavaram shot Ramnawal Singh Yadav and Vishnu Prasad Baghel, and injured Govind Sripul, before shooting himself. The injured soldier is being treated at a… pic.twitter.com/KZWhaMwrMT
— IANS (@ians_india) August 4, 2026
ಈ ದಾಳಿಯಲ್ಲಿ ಹೆಡ್ ಕಾನ್ಸ್‌ಟೇಬಲ್/ಜಿಡಿ ವಿಷ್ಣು ಪ್ರಸಾದ್ ಬಘೇಲ್ ಹಾಗೂ ಎಸ್‌ಐ/ಜಿಡಿ ರಾಮನಾವಲ್ ಸಿಂಗ್ ಯಾದವ್ ಸ್ಥಳದಲ್ಲೇ ಮೃತಪಟ್ಟರು. ಎಎಸ್‌ಐ/ಮನೆ ಗೋವಿಂದ ಶ್ರೀಪುಲ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೊದಲಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ.
ನಿಮ್ಮ ಕರ್ತವ್ಯವನ್ನು ನಿರ್ಭಯವಾಗಿ ನಿರ್ವಹಿಸಿ, ಹೊಣೆಗಾರಿಕೆ ನನ್ನದು: ಸಿಆರ್‌ಪಿಎಫ್ ಮಹಾನಿರ್ದೇಶಕ
ಘಟನೆಯ ವಿವರ
ನಾಗಾಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರತೀಮ್ ದಾಸ್ ಪ್ರಕಾರ, ಕರ್ತವ್ಯದಲ್ಲಿದ್ದ ಪ್ರೇಮಬರಂ ಅವರ ಬಳಿ ಶಸ್ತ್ರಾಸ್ತ್ರ ಇರಲಿಲ್ಲ. ಅವರು ಗಾರ್ಡ್ ರೂಮ್‌ನಿಂದ INSAS ರೈಫಲ್ ಪಡೆದು ಕ್ವಾರ್ಟರ್ ಗಾರ್ಡ್ ಹಿಂಭಾಗಕ್ಕೆ ತೆರಳಿ ಮೊದಲಿಗೆ ವಿಷ್ಣು ಪ್ರಸಾದ್ ಬಘೇಲ್ ಅವರ ಮೇಲೆ ಗುಂಡು ಹಾರಿಸಿದರು. ನಂತರ ದಾಖಲೆ ಪರಿಶೀಲನೆಗಾಗಿ ಲಖನೌನಿಂದ ಬಂದಿದ್ದ ಎಸ್‌ಐ ರಾಮನಾವಲ್ ಸಿಂಗ್ ಯಾದವ್ ಮೇಲೂ ಗುಂಡು ಹಾರಿಸಿ ಹತ್ಯೆಗೈದರು.
ಅದಾದ ಬಳಿಕ ಗೋವಿಂದ ಶ್ರೀಪುಲ್ ಅವರ ಮೇಲೂ ಗುಂಡು ಹಾರಿಸಿ ಗಂಭೀರವಾಗಿ ಗಾಯಗೊಳಿಸಿದ ಪ್ರೇಮಬರಂ, ನಂತರ ಬ್ಯಾರಕ್‌ಗೆ ತೆರಳಿ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು.
ತನಿಖೆ ಆರಂಭ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಸಿಆರ್‌ಪಿಎಫ್ ಅಧಿಕಾರಿಗಳು ಹಾಗೂ ಅಸ್ಸಾಂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಗುಂಡಿನ ದಾಳಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸಿಆರ್‌ಪಿಎಫ್ ಹಾಗೂ ಪೊಲೀಸರು ಜಂಟಿಯಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.