Pune Horror: ನಿರ್ಭಯಾ ಘಟನೆ ಮಾದರಿ ಕೃತ್ಯ; ಪೊಲೀಸ್ ಠಾಣೆಯಿಂದ 100 ಮೀ. ದೂರದಲ್ಲಿ ಬಸ್‌ನೊಳಗೆ ಮಹಿಳೆ ಮೇಲೆ ಅತ್ಯಾಚಾರ
ಮಹಾರಾಷ್ಟ್ರದ ಪುಣೆಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಮಂಗಳವಾರ (ಫೆ. 25) ಬಸ್‌ನೊಳಗೆ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ. ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ದತ್ತಾತ್ರೇಯ ರಾಮ್‌ದಾಸ್ ಎಂದು ಗುರುತಿಸಲಾಗಿದೆ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ.

ಸಾಂದರ್ಭಿಕ ಚಿತ್ರ.

ಮುಂಬೈ: ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಈ ಮಧ್ಯೆ ಮಹಾರಾಷ್ಟ್ರದ ಪುಣೆಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಮಂಗಳವಾರ (ಫೆ. 25) ಬಸ್‌ನೊಳಗೆ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ. ಈ ಘಟನೆ ನಡೆದಿದ್ದು ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ಎನ್ನುವುದು ಆತಂಕ ಹೆಚ್ಚಿಸುವ ಸಂಗತಿ (Pune Horror). ಪುಣೆಯ ಅತ್ಯಂತ ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣ (Swargate Bus Stand)ದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ದತ್ತಾತ್ರೇಯ ರಾಮ್‌ದಾಸ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈತನ ಚಲನವಲನ ಸೆರೆಯಾಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. 36 ವರ್ಷದ ರಾಮ್‌ದಾಸ್‌ನನ್ನು ಸೆರೆಹಿಡಿಯಲು ಪೊಲೀಸರು 8 ವಿಶೇಷ ತಂಡವನ್ನು ರಚಿಸಿದ್ದಾರೆ. ರಾಮ್‌ದಾಸ್‌ನ ಹೆಸರಿನಲ್ಲಿ ಈ ಹಿಂದೆಯೂ ಹಲವು ಪ್ರಕರಣ ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಸತಾರಾ ಜಿಲ್ಲೆಯ ಫಲ್ಟಾನ್‌ಗೆ ತೆರಳುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಬಸ್ ಅನ್ನು ಧ್ವಂಸಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಳಗ್ಗೆ 5.45ರಿಂದ 6.30ರ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾದ ಪರಿಶೀಲನೆ ವೇಳೆ ಆರೋಪಿ ಸಂತ್ರಸ್ತೆಯನ್ನು ಸಹೋದರಿ ಎಂದು ಸಂಬೋಧಿಸುತ್ತಿರುವುದು ಕಂಡು ಬಂದಿದೆ. ಯಾವುದೇ ಲೈಟ್ ವ್ಯವಸ್ಥೆ ಇಲ್ಲದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬಸ್‌ನೊಳಗೆ ಆಕೆಯನ್ನು ಕರೆದೊಯ್ದ ರಾಮ್‌ದಾಸ್ ಕೃತ್ಯ ಎಸಗಿದ್ದಾನೆ.
#WATCH | Pune, Maharashtra: Shiv Sena (UBT) leader Vasant More along with other party leaders, holds a protest at the Swargate bus stand over the alleged rape of a 26-year-old woman. pic.twitter.com/du9aQCMJyL
— ANI (@ANI) February 26, 2025
ಸಂತ್ರಸ್ತೆ ಹೇಳಿದ್ದೇನು?
ʼʼಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬಸ್ ಬಳಿಗೆ ಬರುವಂತೆ ಮೊದಲಿಗೆ ಆತ ಕರೆದಿದ್ದ. ಅಲ್ಲಿ ಕತ್ತಲಿರುವ ಕಾರಣ ತೆರಳಲು ನಿರಾಕರಿಸಿದ್ದೆ. ಇದಕ್ಕೆ ಪ್ರಯಾಣಿಕರೆಲ್ಲ ಮಲಗಿರುವ ಕಾರಣ ಲೈಟ್‌ಗಳನ್ನು ಆರಿಸಲಾಗಿದೆ ಎಂದು ಸಮಾಜಾಯಿಷಿ ನೀಡಿದ್ದ. ಬಸ್‌ನೊಳಗೆ ಪ್ರವೇಶಿಸುತ್ತಿದ್ದಂತೆ ಡೋರ್ ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆʼʼ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.
ಅದಾದ ಬಳಿಕ ಸಂತ್ರಸ್ತೆ ಗೆಳತಿಯ ಬಳಿ ಈ ವಿಚಾರ ಬಹಿರಂಗಪಡಿಸಿದ್ದಳು. ಕೊನೆಗೆ ಪೊಲೀಸರಿಗೆ ದೂರು ನೀಡಲಾಯಿತು. ತಕ್ಷಣ ದೂರು ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಸುದ್ದಿಯನ್ನೂ ಓದಿ:
ವಿಪಕ್ಷಗಳಿಂದ ತರಾಟೆ
ಸ್ವರ್ಗೇಟ್ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಅತಿದೊಡ್ಡ ನಿಲ್ದಾಣಗಳಲ್ಲಿ ಒಂದು ಎನಿಸಿಕೊಂಡಿದೆ. ಪುಣೆ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ನಿಯಂತ್ರಿಸಲು ಗೃಹ ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಫಲರಾಗಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ.
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ಅವರು ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ಜತೆಗೆ 2012ರಲ್ಲಿ ದಿಲ್ಲಿಯಲ್ಲಿ ನಡೆದ ಭಯಾನಕ ನಿರ್ಭಯಾ ಘಟನೆಯನ್ನು ಅವರು ಉಲ್ಲೇಖಿಸಿದ್ದಾರೆ. ಮಹಿಳೆಯರ ಸುರಕ್ಷತೆಯನ್ನು ಬಲಿಕೊಟ್ಟು ಅವರಿಗೆ 'ಉಚಿತ' ಯೋಜನೆಗಳನ್ನು ಘೋಷಿಸಿದ್ದಕ್ಕಾಗಿ ಅವರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.