ಮಹಿಳೆಗೆ ವಂಚನೆ, ಲೈಂಗಿಕ ಕಿರುಕುಳ ಆರೋಪ; ಬ್ರಹ್ಮಾನಂದ ಗುರೂಜಿ ವಿರುದ್ಧ ಎಫ್‌ಐಆರ್
Brahmananda Guruji Case: ಸೈಟ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಲ್ಲದೆ, ಅದನ್ನು ವಾಪಸ್ ಕೇಳಿದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬ್ರಹ್ಮಾನಂದ ಗುರೂಜಿ (ಸಂಗ್ರಹ ಚಿತ್ರ) -
ದೊಡ್ಡಬಳ್ಳಾಪುರ, ಡಿ.14: ಮಹಿಳೆ ವಂಚನೆ, ಲೈಂಗಿಕ ಕಿರುಕುಳ ಆರೋಪದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೆಳೆಕೋಟೆಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಬ್ರಹ್ಮಾನಂದ ಗುರೂಜಿ (Brahmananda Guruji) ವಿರುದ್ಧ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಹಿಳೆಗೆ ಸೈಟ್ ಕೊಡಿಸುವುದಾಗಿ ಹೇಳಿ ಹಣ ಪಡೆದು, ವಂಚಿಸಿದ್ದಲ್ಲದೇ ದುಡ್ಡು ವಾಪಸ್ ಕೇಳಿದ್ದಕ್ಕೆ ಮಂಚಕ್ಕೆ ಕರೆದಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬ್ರಹ್ಮಾನಂದ ಗುರೂಜಿ ಹಾಗೂ ಆತನ ಪತ್ನಿ ಶಿಲ್ಪಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ಸೈಟ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಲ್ಲದೆ, ಅದನ್ನು ವಾಪಸ್ ಕೇಳಿದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು.
ಸ್ವಾಮೀಜಿ ನಿವಾಸದ ಬಳಿಯೇ ಮಹಿಳೆ ಮತ್ತು ಆಕೆಯ ಪತಿ ವಾಸವಿದ್ದರು. ಪರಿಚಯದವರು ಆಗಿದ್ದರಿಂದ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಮಹಿಳೆಗೆ ಸ್ವಾಮೀಜಿ ಭರವಸೆ ನೀಡಿದ್ದರು. 13 ಲಕ್ಷ ರೂ. ಮೌಲ್ಯದ ಸೈಟ್ ಅನ್ನು 12 ಲಕ್ಷಕ್ಕೆ ಕೊಡಿಸುವುದಾಗಿ ಮಾತುಕತೆ ನಡೆಸಿದ್ದರು. ಆದರೆ, ತಮ್ಮ ಬಳಿ 8 ಲಕ್ಷ ರೂ. ಮಾತ್ರ ಇದೆ ಎಂದು ಮಹಿಳೆ ಹೇಳಿದ್ದರು. ಹೀಗಾಗಿ ಉಳಿದ ಹಣಕ್ಕೆ ಸಹಾಯ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು ಎಂಬ ಆರೋಪವಿದೆ.
ಮಹಿಳೆ ಬಳಿಯಿದ್ದ 8 ಲಕ್ಷ ರೂ.ಗಳಲ್ಲಿ 5 ಲಕ್ಷ ರೂ.ಗಳನ್ನು ಅಡ್ವಾನ್ಸ್ ಆಗಿ ಮತ್ತೊಬ್ಬರಿಗೆ ಸ್ವಾಮೀಜಿ ಕೊಡಿಸಿದ್ದಾರೆ. ಆದರೆ ಒಂದು ವರ್ಷ ಕಳೆದರೂ ಸೈಟ್ ನೀಡದೆ, ಅಡ್ವಾನ್ಸ್ ಹಣವನ್ನೂ ವಾಪಸ್ ನೀಡಿಲ್ಲ. ಹೀಗಾಗಿ ಹಣವನ್ನು ಮಹಿಳೆ ವಾಪಸ್ ಕೇಳಿದ್ದಾರೆ. ಈ ವೇಳೆ ಸ್ವಾಮೀಜಿ, "ರೂಮ್‌ಗೆ ಬಾ ಹಣ ಕೊಡಿಸುತ್ತೇನೆ, ನಿನಗೆ ಹಣ ಬೇಕು, ನನಗೆ ಮಜಾ ಬೇಕು" ಎಂದು ಹೇಳಿದ್ದಾರೆ ಎನ್ನಲಾಗಿದೆ. ಸ್ವಾಮೀಜಿಯ ಈ ಮಾತುಗಳನ್ನು ಮಹಿಳೆ ಮೊಬೈಲ್‌ನಲ್ಲಿ ಆಡಿಯೋ ಹಾಗೂ ವಿಡಿಯೋ ರೂಪದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಸ್ವಾಮೀಜಿ ನಿರಂತರವಾಗಿ ಫೋನ್ ಕರೆ, ಆಡಿಯೋ ಮೆಸೇಜ್ ಹಾಗೂ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಒಂಟಿಯಾಗಿದ್ದ ವೇಳೆ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ಆಡಿಯೋ-ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಒತ್ತಡ ಹೇರಿದ್ದು, ಅದಕ್ಕಾಗಿ 50 ಸಾವಿರ ರೂ. ನೀಡುವ ಆಮಿಷವನ್ನೂ ಒಡ್ಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಕಳ್ಳತನ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣವೇ ಫಸ್ಟ್ ಪ್ಲೇಸ್!; ಲಿಸ್ಟ್ ಇಲ್ಲಿದೆ ನೋಡಿ
ಈ ಎಲ್ಲ ಘಟನೆಗಳು ಗಂಡನಿಗೆ ಗೊತ್ತಾಗಿ ಆತ ತನ್ನನ್ನು ಬಿಟ್ಟು ಹೋಗಿದ್ದಾನೆ ಎಂದೂ ಮಹಿಳೆ ಅಲವತ್ತುಕೊಂಡಿದ್ದಾರೆ. ಸಂತ್ರಸ್ತೆಯು ಈ ಸಂಬಂಧ ಪೊಲೀಸ್ ಠಾಣೆಗೆ ಆಡಿಯೋ-ವಿಡಿಯೋ ಸಾಕ್ಷ್ಯಗಳೊಂದಿಗೆ ದೂರು ನೀಡಿದ್ದರು. ಇದೀಗ ಗುರೂಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.