ಇಂದೋರ್: ಮಧ್ಯಪ್ರದೇಶ (Madhya Pradesh)ದ ಇಂದೋರ್ (Indore)ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ವಸತಿ ಸಮುಚ್ಚಯದಲ್ಲಿ ಪೆಂಟ್‌ಹೌಸ್ (penthouse) ಅನ್ನು ಹೋಂಸ್ಟೇ ಅಥವಾ ಏರ್‌ಬೀಎನ್‌ಬಿ (Airbnb) ಆಗಿ ಬಳಸುವುದನ್ನು ವಿರೋಧಿಸಿದ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಕಾರು ಹರಿಸಿ ಕೊಲೆ ಮಾಡಲಾಗಿದೆ. ಮೃತ ಮಹಿಳೆಯನ್ನು ಶಂಪಾ ಪಾಂಡೆ (Shampa Pandey) ಎಂದು ಗುರುತಿಸಲಾಗಿದ್ದು, ಇವರು ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಬುಧವಾರ ರಾತ್ರಿ ಇಂದೋರ್‌ನ 'ಶಿವ ವಾಟಿಕಾ ಸ್ಮೃತಿ ಎನ್‌ಕ್ಲೇವ್ (Shiv Vatika Smriti Enclave)'ನಲ್ಲಿ ಈ ಭೀಕರ ಕೃತ್ಯ ನಡೆದಿದೆ.
ಏನಿದು ಪ್ರಕರಣ?
ಈ ವಸತಿ ಸಮುಚ್ಚಯದ ಏಳನೇ ಮಹಡಿಯಲ್ಲಿರುವ ಪೆಂಟ್‌ಹೌಸ್ ಅನ್ನು ಅದರ ಮಾಲೀಕ ಕುಲದೀಪ್ ಚೌಧರಿ ಎಂಬುವವರು ಏರ್‌ಬೀಎನ್‌ಬಿ ಬಾಡಿಗೆಗೆ ನೀಡುತ್ತಿದ್ದರು. ಅಪರಿಚಿತ ವ್ಯಕ್ತಿಗಳು ತಡರಾತ್ರಿ ಬಂದು ಹೋಗುವುದರಿಂದ ಸುರಕ್ಷತೆಯ ದೃಷ್ಟಿಯಿಂದ ನಿವಾಸಿಗಳು ಇದನ್ನು ವಿರೋಧಿಸುತ್ತಿದ್ದರು. ಭಾನುವಾರವಷ್ಟೇ ಮಾಲೀಕನೊಂದಿಗೆ ಸಭೆ ನಡೆಸಿ ಈ ವ್ಯವಹಾರ ನಿಲ್ಲಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಬುಧವಾರ ಮತ್ತೆ ಆಸ್ತಿಯನ್ನು ಬಾಡಿಗೆಗೆ ನೀಡಿದಾಗ, ಆಕ್ರೋಶಗೊಂಡ ನಿವಾಸಿಗಳು ಪೆಂಟ್‌ಹೌಸ್‌ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.
ಇದಕ್ಕೆ ಪ್ರತಿಯಾಗಿ ಕುಲದೀಪ್ ಇಡೀ ಕಟ್ಟಡದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ವೇಳೆ ಕುಲದೀಪ್ ತನ್ನ ಮಗ ಮೋನಿಷ್‌ಗೆ ಕರೆ ಮಾಡಿ, "ಇವತ್ತು ಇವರ ವಿಷಯವನ್ನು ಬಗೆಹರಿಸೋಣ, ಬಾ" ಎಂದು ಕರೆಸಿಕೊಂಡಿದ್ದ ಎನ್ನಲಾಗಿದೆ. ಸ್ಥಳಕ್ಕೆ ಬಂದ ಮೋನಿಷ್ ತನ್ನ ಸ್ವಿಫ್ಟ್ ಕಾರಿನಿಂದ ಜನರಿಗೆ ಗುದ್ದಲು ಆರಂಭಿಸಿದ್ದಾನೆ.
ತೃತೀಯ ಲಿಂಗಿಯೊಡನೆ ಮಹಾರಾಷ್ಟ್ರ ಸಚಿವರ ಆಕ್ಷೇಪಾರ್ಹ ವಿಡಿಯೋ ವೈರಲ್; ರಾಜಕೀಯ ಸಂಚಲನ
ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ:
ಸಿಸಿಟಿವಿ ದೃಶ್ಯಾವಳಿಯ ಪ್ರಕಾರ, ಮೋನಿಷ್ ಮೊದಲು ಸೆಕ್ಯೂರಿಟಿ ಗಾರ್ಡ್ ಪತ್ನಿಯ ಮೇಲೆ ಕಾರು ಹರಿಸಿದ್ದಾನೆ. ಆಕೆ ನೆಲಕ್ಕೆ ಬಿದ್ದಾಗ ಜನರು ಆಕೆಯನ್ನು ರಕ್ಷಿಸಲು ಧಾವಿಸಿದ್ದಾರೆ. ಈ ಸಮಯದಲ್ಲಿ ಕಾರನ್ನು ಸುತ್ತು ಹೊಡೆಸಿಕೊಂಡು ಬಂದ ಮೋನಿಷ್, ನೇರವಾಗಿ ಶಂಪಾ ಪಾಂಡೆ ಅವರ ಮೇಲೆ ಕಾರು ಹರಿಸಿ ಅಟ್ಟಹಾಸ ಮೆರೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಶಂಪಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪೋಲಿಸ್ ಕ್ರಮ
ಲಸೂಡಿಯಾ ಠಾಣೆಯ ಪೊಲೀಸರು ಆರೋಪಿಗಳಾದ ಕುಲದೀಪ್ ಚೌಧರಿ ಮತ್ತು ಆತನ ಮಗ ಮೋನಿಷ್‌ನನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಪೆಂಟ್‌ಹೌಸ್‌ನ ಟೆರೇಸ್‌ನಲ್ಲಿ ಖಾಲಿ ಬಿಯರ್ ಬಾಟಲಿಗಳು ಪತ್ತೆಯಾಗಿವೆ. ಚೌಧರಿ ಈ ಕಟ್ಟಡದಲ್ಲಿ 3-4 ಪೆಂಟ್‌ಹೌಸ್‌ಗಳನ್ನು ಹೊಂದಿದ್ದು, ಅವುಗಳನ್ನು ಎಲ್ಲಾ ಆನ್‌ಲೈನ್ ಮಾರುಕಟ್ಟೆಗಳಿಂದ ತೆಗೆದುಹಾಕಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.