ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದಾಗಿದ್ದಕ್ಕೆ ಯೋಗೇಶ್ ಗೌಡ ಸಹೋದರ ಸಂತಸ; ಸುಪ್ರೀಂ ಆದೇಶದ ಬಗ್ಗೆ ಹೇಳಿದ್ದೇನು?
Yogesh Gowda Murder Case: ಹತ್ತು ವರ್ಷಗಳ ನಿರಂತರ ಹೋರಾಟದ ನಂತರ ನ್ಯಾಯ ದೊರಕಿದೆ. ಹೈಕೋರ್ಟ್ನ ಆದೇಶದಿಂದ ನಮಗೆ ದುಃಖವಾಗಿತ್ತು, ಆದರೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಇಂದು ಆ ಭರವಸೆ ನಿಜವಾಗಿದೆ ಎಂದು ಅವರು ಜಿಪಂ ಸದಸ್ಯ ಯೋಗೇಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಹೇಳಿದ್ದಾರೆ.
-
ಧಾರವಾಡ: ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ (Yogesh Gowda Murder Case) ಸಂಬಂಧಿಸಿ ಪ್ರಮುಖ ಆರೋಪಿ ಶಾಸಕ ವಿನಯ್ ಕುಲಕರ್ಣಿ (MLA Vinay Kulkarni) ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದಕ್ಕೆ ಯೋಗೇಶ್ ಗೌಡ ಅವರ ಸಹೋದರ ಗುರುನಾಥ್ ಗೌಡ (Gurunath Gowda) ಸಂತಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಹತ್ತು ವರ್ಷಗಳ ನಿರಂತರ ಹೋರಾಟದ ನಂತರ ನ್ಯಾಯ ದೊರಕಿದೆ. ಹೈಕೋರ್ಟ್ನ ಆದೇಶದಿಂದ ನಮಗೆ ದುಃಖವಾಗಿತ್ತು, ಆದರೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಇಂದು ಆ ಭರವಸೆ ನಿಜವಾಗಿದೆ ಎಂದು ಅವರು ಹೇಳಿದ್ದಾರೆ.
10 ವರ್ಷದಿಂದ ನಮ್ಮ ಮೇಲೆ ಹಲವು ಕೇಸ್ಗಳನ್ನು ಹಾಕಿದರು. ಪ್ರಕರಣದಲ್ಲಿ ರಾಜಿ ಮಾಡಲು ಹಲವು ಪ್ರಯತ್ನಗಳು ನಡೆಸಿದರು. ಆದರೆ, ಇಂತಹ ಘಟನೆಗಳು ಎಲ್ಲೂ ಆಗಬಾರದು ಎಂದು ನಾವು ಹೋರಾಟ ಮುಂದುವರಿಸಿದ್ದೆವು. ವಿನಯ್ ಕುಲಕರ್ಣಿ ಉಸ್ತುವಾರಿ ಸಚಿವರಾಗಿದ್ದಾಗ ನನ್ನನ್ನು ಎನ್ಕೌಂಟರ್ ಮಾಡಿಸಲು ಪ್ರಯತ್ನಿಸಿದ್ದರು. ನನ್ನನ್ನು ಕೊಂದರೆ ಈ ಕೇಸ್ ಮುಕ್ತಾಯವಾಗುತ್ತದೆ ಎಂದು ಅವರು ಭಾವಿಸಿದ್ದರು. ಸಾಕಷ್ಟು ಕೇಸ್ಗಳನ್ನು ಹಾಕಿದರು. ಆದರೂ ದೇವರ ದಯೆ ನಮ್ಮ ಮೇಲಿದೆ, ಇದೀಗ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಧಾರವಾಡ ನಿವಾಸ ಬಿಟ್ಟು ಬೆಂಗಳೂರಿನತ್ತ ಹೊರಟ ವಿನಯ್ ಕುಲಕರ್ಣಿ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ಅರ್ಜಿ ರದ್ದಾದ ಬೆನ್ನಲ್ಲೇ ಧಾರವಾಡದ ಶಿವಗಿರಿಯಲ್ಲಿರುವ ತಮ್ಮ ನಿವಾಸದಿಂದ ಶಾಸಕ ವಿನಯ್ ಕುಲಕರ್ಣಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮನೆಯಿಂದ ಹೊರಬರುತ್ತಿದ್ದಂತೆಯೇ ನೆರೆದಿದ್ದ ಕಾರ್ಯಕರ್ತರನ್ನು ತಬ್ಬಿಕೊಂಡು ಭಾವುಕರಾದ ಅವರು, ಕಣ್ಣೀರು ಹಾಕುತ್ತಲೇ ಕೈಮುಗಿದು ನಿರ್ಗಮಿಸಿದರು.
ಜಾಮೀನು ರದ್ದಾದ ಸುದ್ದಿ ಹೊರಬೀಳುತ್ತಿದ್ದಂತೆ ನಿವಾಸದ ಹೊರಗೆ ನೂರಾರು ಬೆಂಬಲಿಗರು ಜಮಾಯಿಸಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಿಂದ ದುಃಖಿತರಾಗಿ ಹೊರಬಂದ ವಿನಯ್ ಕುಲಕರ್ಣಿ ಅವರನ್ನು ಅಪ್ಪಿಕೊಂಡು ಬೆಂಬಲಿಗರು ಕಣ್ಣೀರು ಹಾಕಿ, ಬೆಂಗಳೂರಿಗೆ ಹೊರಟ ವೇಳೆ ಭಾವುಕರಾಗಿ ಬೀಳ್ಕೊಟ್ಟರು.