ಧರ್ಮಶಾಲಾ: ರ್ಯಾಗಿಂಗ್‍ಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು (ragging in college) ಬಲಿಯಾಗಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ (Dharamshala) ನಡೆದಿದೆ. ಸರ್ಕಾರಿ ಪದವಿ ಕಾಲೇಜಿನ 19 ವರ್ಷದ ವಿದ್ಯಾರ್ಥಿನಿ ಲುಧಿಯಾನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾಳೆ. ಕಾಲೇಜಿನಲ್ಲಿ ರ‍್ಯಾಗಿಂಗ್, ದೈಹಿಕ ಹಲ್ಲೆ ಮತ್ತು ಲೈಂಗಿಕ ಕಿರುಕುಳದಿಂದ ಉಂಟಾದ ತೀವ್ರ ಆಘಾತದ ನಂತರ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ದೂರಿನ ಪ್ರಕಾರ, ಆಪಾದಿತ ಘಟನೆ ಸೆಪ್ಟೆಂಬರ್ 18, 2025 ರಂದು ನಡೆದಿದ್ದು, ಮೂವರು ಹಿರಿಯ ವಿದ್ಯಾರ್ಥಿನಿಯರಾದ ಹರ್ಷಿತಾ, ಆಕೃತಿ ಮತ್ತು ಕೊಮೊಲಿಕಾ ಅವರು ಸಂತ್ರಸ್ತೆಯ ಮೇಲೆ ಹಲ್ಲೆ, ಥಳಿತ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕಾಲೇಜು ಪ್ರಾಧ್ಯಾಪಕ ಅಶೋಕ್ ಕುಮಾರ್ ಅವರು ಆಕೆಯ ಮೇಲೆ ಅಶ್ಲೀಲ ವರ್ತನೆಗಳನ್ನು ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿನಿ ತೀವ್ರ ಭಯ ಮತ್ತು ಮಾನಸಿಕ ಯಾತನೆಗೆ ಒಳಗಾಗಿದ್ದಳು.
ಆಕೆಯ ಸಾವಿಗೂ ಮುನ್ನ ಮಾಡಿದ್ದ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದ್ದು, ಅದರದಲ್ಲಿ ವಿದ್ಯಾರ್ಥಿನಿ ತನಗಾಗುತ್ತಿರುವ ಲೈಂಗಿಕ ಕಿರುಕುಳ ಕುರಿತು ಮಾಹಿತಿ ನೀಡಿದ್ದಳು. ಉಪನ್ಯಾಸಕನ ಕುರಿತು ಆಕೆ ದೂರನ್ನು ಹೇಳಿದ್ದಳು.
ಹಲ್ಲೆ ಮತ್ತು ಕಿರುಕುಳದ ಪರಿಣಾಮವಾಗಿ, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಾಗಲೇ ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ವರದಿಯಾಗಿದೆ. ಆಕೆಗೆ ಹಿಮಾಚಲ ಪ್ರದೇಶದ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಲುಧಿಯಾನದ ದಯಾನಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಡಿಎಂಸಿ) ದಾಖಲಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಅವರು ಡಿಸೆಂಬರ್ 26, 2025 ರಂದು ನಿಧನರಾದರು.
ವಾಮಾಚಾರದ ವೇಳೆ ದುರಂತ; ಭೂತ ಬಿಡಿಸಲು ಹೋಗಿ ಮಗಳನ್ನೇ ಕೊಂದ ತಾಯಿ
ಆಕೆಯ ದೀರ್ಘಕಾಲದ ಅನಾರೋಗ್ಯ ಮತ್ತು ಸಾವಿನಿಂದ ಆಘಾತಕ್ಕೊಳಗಾದ ಕುಟುಂಬವು ಕೆಲವು ದಿನಗಳ ನಂತರ ಪೊಲೀಸರಲ್ಲಿ ದೂರು ನೀಡಿದರು ಎಂದು ವರದಿಯಾಗಿದೆ. ಜನವರಿ 1, 2026 ರಂದು, ಧರ್ಮಶಾಲಾ ಬಳಿಯ ಸಿಧ್ಬರಿ ನಿವಾಸಿಯಾದ ಮೃತ ವಿದ್ಯಾರ್ಥಿನಿಯ ತಂದೆ ಧರ್ಮಶಾಲಾ ಪೊಲೀಸರಿಗೆ ಔಪಚಾರಿಕ ದೂರು ದಾಖಲಿಸಿದರು.
ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 75 (ಲೈಂಗಿಕ ಕಿರುಕುಳ), 115(2) (ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು), ಮತ್ತು 3(5) (ಸಾಮಾನ್ಯ ಉದ್ದೇಶದಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ಸಂಖ್ಯೆ 03/2026 ಅನ್ನು ದಾಖಲಿಸಿದ್ದಾರೆ. ಜೊತೆಗೆ ಹಿಮಾಚಲ ಪ್ರದೇಶ ಶಿಕ್ಷಣ ಸಂಸ್ಥೆಗಳು (ರ್ಯಾಗಿಂಗ್ ನಿಷೇಧ) ಕಾಯ್ದೆ, 2009ರ ಸೆಕ್ಷನ್ 3 ಅನ್ನು ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಮೂವರು ಹಿರಿಯ ವಿದ್ಯಾರ್ಥಿಗಳಾದ ಹರ್ಷಿತಾ, ಆಕೃತಿ ಮತ್ತು ಕೊಮೊಲಿಕಾ ಮತ್ತು ಪ್ರೊಫೆಸರ್ ಅಶೋಕ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಧರ್ಮಶಾಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ರತನ್ ಮಾತನಾಡಿ, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣ ಪ್ರಾಥಮಿಕ ತನಿಖೆಯಲ್ಲಿದೆ. ಹಿಂದಿನ ದೂರುಗಳು ವಿದ್ಯಾರ್ಥಿಗಳ ವಿರುದ್ಧ ಮಾತ್ರ ಇದ್ದವು. ಹೊಸ ಸಂಗತಿಗಳು ಬೆಳಕಿಗೆ ಬಂದ ನಂತರ ಲೈಂಗಿಕ ಕಿರುಕುಳದ ಆರೋಪದ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅನಾರೋಗ್ಯದ ಸಮಯದಲ್ಲಿ ಸಂತ್ರಸ್ತೆಯನ್ನು ಕನಿಷ್ಠ ಏಳು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಸಾವಿನ ಕಾರಣವನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ.