ಪುಣೆ: ಪ್ರೇಮಿಗಳ ಅಂತರ್ಜಾತಿ ವಿವಾಹಕ್ಕೆ ಒಪ್ಪದ ಪೋಷಕರು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು (Crime News). ಇದೀಗ, ಈ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಪ್ರಿಯಕರನಿಗೆ ಹಲ್ಲೆ ಮಾಡಿದವರಲ್ಲಿ (Murder case) ಇಬ್ಬರು ಪೊಲೀಸರ (Police) ಕೈವಾಡವೂ ಇದೆ ಎಂದು ಪ್ರಿಯತಮೆ ಅಂಚಲ್ ಮಾಮಿದ್ವಾರ್ (21) ಆರೋಪಿಸಿದ್ದಾಳೆ. ಮಹಾರಾಷ್ಟ್ರದ (Maharashtra) ನಾಂದೇಡ್‌ನಲ್ಲಿ ಸಕ್ಷಾಮ್ ಟೇಟ್ (20) ಎಂಬಾತನನ್ನು ಪ್ರಿಯತಮೆಯ ಸಹೋದರರು ಥಳಿಸಿ ಹತ್ಯೆ ಮಾಡಿದ್ದರು. ಈಗ ಈ ಪ್ರಕರಣದಲ್ಲಿ ಪೊಲೀಸರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರಿಯಕರನ ಸಾವಿನಿಂದ ಆಘಾತಕ್ಕೊಳಗಾದ ಪ್ರಿಯತಮೆ ಅಂಚಲ್, ಸಕ್ಷಾಮ್‍ನ ಮೃತದೇಹವನ್ನೇ ಮದುವೆಯಾಗುತ್ತಿರುವ ಹೃದಯವಿದ್ರಾವಕ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ತನ್ನ ಕುಟುಂಬ ಸದಸ್ಯರು ತನಗೆ ಮತ್ತು ಸಕ್ಷಾಮ್‌ಗೆ ಮದುವೆಯಾಗುವ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಭರವಸೆ ನೀಡಿದ್ದರು. ನಾವು ಮೂರು ವರ್ಷಗಳ ಕಾಲ ಪರಸ್ಪರ ಸಂಬಂಧದಲ್ಲಿದ್ದೆವು. ನಾವು ಬಹಳಷ್ಟು ಕನಸುಗಳನ್ನು ಕಂಡೆವು. ನನ್ನ ಸಹೋದರರು ನಮ್ಮ ಮದುವೆಯನ್ನು ಆಯೋಜಿಸುವುದಾಗಿ ನನಗೆ ಭರವಸೆ ನೀಡಿದ್ದರು. ಆದರೆ ಅವರು ಕೊನೆಯ ಕ್ಷಣದಲ್ಲಿ ನಮಗೆ ದ್ರೋಹ ಬಗೆದರು ಎಂದು ಅಂಚಲ್ ತಿಳಿಸಿದ್ದಾಳೆ.
ಪ್ರೀತಿಗೆ ಸಾವಿಲ್ಲ; ಜಾತಿಯ ಕಾರಣಕ್ಕೆ ಕೊಲೆಗೀಡಾದ ಪ್ರಿಯಕರನನ್ನೇ ವರಿಸಿದ ಯುವತಿ: ಮನ ಕಲುಕುವ ಲವ್ ಸ್ಟೋರಿ ಇಲ್ಲಿದೆ
ತನಗೆ ಸಕ್ಷಮ್ ಪರಿಚಯವಾಗಿದ್ದು, ತನ್ನ ಸಹೋದರರ ಮೂಲಕ ಅಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಆತನ ಪರಿಚಯವಾಯಿತು ಎಂದು ಅಂಚಲ್ ಹೇಳಿದ್ದಾಳೆ. ತನ್ನ ಕುಟುಂಬ ಸದಸ್ಯರು ಸಕ್ಷಮ್ ಜೊತೆ ಸಮಯ ಕಳೆಯುತ್ತಿದ್ದರು. ಅವರು ಅವನೊಂದಿಗೆ ಚೆನ್ನಾಗಿಯೇ ಇದ್ದರು. ಒಟ್ಟಿಗೆ ಊಟ ಮಾಡುತ್ತಿದ್ದರು. ಎಲ್ಲವೂ ಚೆನ್ನಾಗಿದೆ ಎಂದು ಅವರು ಅವನಿಗೆ ಮನವರಿಕೆ ಮಾಡಿಕೊಟ್ಟರು. ಈ ರೀತಿಯಾಗುತ್ತೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾಳೆ.
ತನ್ನ ಕುಟುಂಬ ಸದಸ್ಯರು ಸಕ್ಷಾಮ್ ಒಬ್ಬ ಜೈ ಭೀಮ್‌ವಾಲಾ ಎಂದು ಹೇಳಿದ್ದರು ಎಂದು ಅಂಚಲ್ ತಿಳಿಸಿದಳು. ಒಂದು ದಿನ, ನನ್ನ ತಂದೆ ಸಕ್ಷಾಮ್‌ಗೆ ನನ್ನನ್ನು ಮದುವೆಯಾಗಲು ಬಯಸಿದರೆ, ಅವರು ನಮ್ಮ ಧರ್ಮವಾದ ಹಿಂದೂ ಧರ್ಮಕ್ಕೆ ಬರಬೇಕು ಎಂದು ಹೇಳಿದರು. ಸಕ್ಷಾಮ್ ನನ್ನನ್ನು ಮದುವೆಯಾಗಲು ಏನು ಬೇಕಾದರೂ ಮಾಡಲು ಸಿದ್ಧನಿದ್ದ ಎಂದು ಅಂಚಲ್ ಹೇಳಿದಳು.
ಈ ಪ್ರಕರಣದಲ್ಲಿ ಧೀರಜ್ ಕೋಮಲ್ವರ್ ಮತ್ತು ಮಹೀತ್ ಅಸರ್ವರ್ ಎಂಬ ಇಬ್ಬರು ಪೊಲೀಸರು ತನ್ನ ಸಹೋದರರಿಗೆ ಪ್ರಚೋದನೆ ನೀಡಿದ್ದಾರೆ ಎಂದು ಅಂಚಲ್ ಆರೋಪಿಸಿದಳು. ಅಂಚಲ್ ಅವರ ಕುಟುಂಬ ಸದಸ್ಯರು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆಂದು ವರದಿಯಾಗಿದೆ.
ಮೂಢನಂಬಿಕೆಗೆ ಮತ್ತೊಂದು ಬಲಿ; ಮಾಜಿ ಪ್ರೇಮಿಯನ್ನು ಒಲಿಸಿಕೊಳ್ಳಲು ಮಂತ್ರವಾದಿಯ ಮೊರೆ ಹೋದ ಯುವಕ ಶವವಾಗಿ ಪತ್ತೆ
ಈ ಕೊಲೆ ಜಾತಿ ಕಾರಣಕ್ಕೆ ನಡೆದಿದೆ. ನನ್ನ ತಂದೆ ಮತ್ತು ಸಹೋದರರು ದರೋಡೆಕೋರರು. ಇದು ಸಕ್ಷಮ್‌ಗೂ ತಿಳಿದಿತ್ತು. ಅವನು ನಮ್ಮ ಮಗಳೊಂದಿಗೆ ಮಾತನಾಡಲು ಹೇಗೆ ಧೈರ್ಯ ಮಾಡುತ್ತಾನೆ ಎಂದು ಹೇಳುತ್ತಿದ್ದರು. ತನ್ನ ಪ್ರಿಯಕರನನ್ನು ಕೊಂದ ಪೋಷಕರಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಯುವತಿ ಆಗ್ರಹಿಸಿದ್ದಾಳೆ.
ಇನ್ನು ಪ್ರಿಯಕರ ಸಕ್ಷಮ್‍ನ ಮೃತದೇಹವನ್ನು ವಿವಾಹವಾಗಿರುವ ಅಂಚಲ್, ಎಂದೆಂದಿಗೂ ಅವನೇ ನನ್ನ ಗಂಡ ಎಂದು ಹೇಳಿದ್ದಾಳೆ. ಆತನ ಕುಟುಂಬವೂ ತನ್ನನ್ನು ಒಪ್ಪಿಕೊಂಡಿದೆ. ಶಾಶ್ವತವಾಗಿ ಅವರೊಂದಿಗೆ ಇರುತ್ತೇನೆ ಎಂದು ಅಂಚಲ್ ತಿಳಿಸಿದಳು. ಪ್ರಕರಣದಲ್ಲಿ ನ್ಯಾಯ ಸಿಗುವುದು ಖಚಿತ. ಜನರು ನನಗೆ ಬೆಂಬಲ ನೀಡಿದ್ದಾರೆ. ಜಾತಿಯ ಆಧಾರದ ಮೇಲೆ ಯಾರು ಯಾರನ್ನೂ ಕೊಲ್ಲಬಾರದು ಎಂದು ಹೇಳಿದಳು.