ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೂಢನಂಬಿಕೆಗೆ ಮತ್ತೊಂದು ಬಲಿ; ಮಾಜಿ ಪ್ರೇಮಿಯನ್ನು ಒಲಿಸಿಕೊಳ್ಳಲು ಮಂತ್ರವಾದಿಯ ಮೊರೆ ಹೋದ ಯುವಕ ಶವವಾಗಿ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಯುವಕನೊಬ್ಬ ತನ್ನ ಮಾಜಿ ಪ್ರೇಮಿಯನ್ನು ಒಲಿಸಿಕೊಳ್ಳಲು ಮಂತ್ರವಾದಿಯ ಬಳಿಗೆ ಹೋಗಿ ದುರಂತ ಅಂತ್ಯ ಕಂಡಿದ್ದಾನೆ. ತಂತ್ರ ಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ ಯುವಕನನ್ನು ನಕಲಿ ಮಂತ್ರವಾದಿ ಕೊಲೆ ಮಾಡಿದ್ದಾನೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

ಮಾಜಿ ಪ್ರೇಮಿಯ ಮನಗೆಲ್ಲಲು ಮಂತ್ರವಾದಿಯ ಮೊರೆ ಹೋದ ಯುವಕ ಸಾವು

ಸಾಂದರ್ಭಿಕ ಚಿತ್ರ -

Priyanka P
Priyanka P Dec 1, 2025 3:40 PM

ಕಾನ್ಪುರ: ಮಾಜಿ ಗೆಳತಿಯನ್ನು ಒಲಿಸಿಕೊಳ್ಳಲು ಮಂತ್ರವಾದಿಯ ಸಹಾಯ ಪಡೆದಿದ್ದ ಯುವಕನೊಬ್ಬ ಕೊಲೆಯಾದ ಸ್ಥಿತಿಯಲ್ಲಿ (Crime News) ಪತ್ತೆಯಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಶಿವಲಿಯಲ್ಲಿರುವ ಮಜಾರ್ ಬಳಿ ವಶೀಕರಣ ಆಚರಣೆಗಳ ನಂತರ ವಿವಾದ ಏರ್ಪಟ್ಟು, ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. 26 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಸ್ವಯಂ ಘೋಷಿತ ಮಂತ್ರವಾದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅರ್ಷದ್‌ಪುರ ಗ್ರಾಮದ ರಾಜಬಾಬು ಮೃತ ಯುವಕ. ಕಳೆದ ಏಪ್ರಿಲ್‌ನಲ್ಲಿ ಬೇರೊಬ್ಬನನ್ನು ಮದುವೆಯಾಗಿದ್ದ ತನ್ನ ಮಾಜಿ ಗೆಳತಿಯನ್ನು ಒಲಿಸಿಕೊಳ್ಳಲು ಸಹಾಯ ಮಾಡುವಂತೆ ಆತ ಮಂತ್ರವಾದಿ ನೀಲು ಬಳಿ ಹೋಗಿದ್ದ. ಆರಂಭದಲ್ಲಿ ಅವನು ಮಂತ್ರವಾದಿಗೆ 36,000 ರೂ.ಗಳನ್ನು ಪಾವತಿಸಿದ್ದ. ನಂತರ ಮತ್ತಷ್ಟು ಆಚರಣೆಗಳು ಮಾಡುವುದಿದೆ, ಅದಕ್ಕಾಗಿ 1.5 ಲಕ್ಷ ರೂ. ಹಣ ಬೇಕಾಗುತ್ತದೆ ಎಂದು ಡಿಮಾಂಡ್ ಮಾಡಿದ್ದಾನೆ. ಇದಕ್ಕೆ ರಾಜುಬಾಬು ಒಪ್ಪಿ, ಅಷ್ಟೂ ಮೊತ್ತವನ್ನು ನೀಡಿದ್ದಾನೆ.

6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಸಲ್ಮಾನ್ ಎಸ್ಕೇಪ್: ಆರೋಪಿ ಬಂಧಿಸುವಲ್ಲಿ ಪೊಲೀಸರು ವಿಫಲ

ನವೆಂಬರ್ 24ರ ಸಂಜೆ ವೇಳೆ ಮಂತ್ರವಾದಿ ನೀಲು, ರಾಜಬಾಬುನನ್ನು ಅಂತಿಮ ವಿಧಿವಿಧಾನಗಳಿಗೆ ತನ್ನ ಗ್ರಾಮಕ್ಕೆ ಕರೆದಿದ್ದಾನೆ. ಮದ್ಯ ಖರೀದಿಸಿದ ನಂತರ, ಇಬ್ಬರೂ ಹತ್ತಿರದ ಹೊಲಕ್ಕೆ ಹೋಗಿದ್ದಾರೆ. ಅಲ್ಲಿ ಮಂತ್ರವಾದಿ ನೀಲು ನಕಲಿ ವಿಧಿವಿಧಾನವನ್ನು ನಡೆಸಿ ಯುವಕನಿಂದ ಟಿಪ್ಪಣಿ ಬರೆಯುವಂತೆ ಮಾಡಿದನು ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಪೂಜೆ ಮಾಡುತ್ತಿದ್ದ ವೇಳೆ ಮಂತ್ರವಾದಿ ನೀಲು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಾಗ ಜಗಳ ಭುಗಿಲೆದ್ದಿತು. ಜಗಳದ ಸಮಯದಲ್ಲಿ,ನೀಲು ರಾಜಬಾಬುವಿನ ಎದೆಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಇದರಿಂದ ಯುವಕ ರಾಜಬಾಬು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಆರೋಪಿ ನೀಲು, ಕೊಲೆಗೆ ಬಳಸಲಾದ ಆಯುಧವನ್ನು ರಾಜಬಾಬುವಿನ ಕೈಯಲ್ಲಿ ಇರಿಸಿ, ಅದನ್ನು ಆತ್ಮಹತ್ಯೆ ಎಂದು ತೋರಿಸಲು ಒಂದು ಟಿಪ್ಪಣಿ ಮತ್ತು ಅವನ ಮಾಜಿ ಗೆಳತಿಯ ಛಾಯಾಚಿತ್ರವನ್ನು ದೇಹಕ್ಕೆ ಅಂಟಿಸಿ ಎಸ್ಕೇಪ್ ಆಗಿದ್ದಾನೆ.

ಮರುದಿನ ಬೆಳಗ್ಗೆ (ನವೆಂಬರ್ 25ರಂದು) ಯುವಕನ ಶವ ಪತ್ತೆಯಾಗಿದೆ. ಕೂಡಲೇ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಪತ್ತೆಯಾದ ಮದ್ಯದ ಪ್ಯಾಕೆಟ್ ಅನ್ನು ಗಮನಿಸಿದ ತನಿಖಾಧಿಕಾರಿಗಳು ಹತ್ತಿರದ ಅಂಗಡಿಯಲ್ಲಿ ವಿಚಾರಿಸಿದ್ದಾರೆ. ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಘಟನೆಗೆ ಸ್ವಲ್ಪ ಮೊದಲು ಕೊಲೆಯಾದ ರಾಜುಬಾಬು, ಆರೋಪಿ ನೀಲು ಜತೆ ಇರುವುದು ಕಂಡು ಬಂತು.

ಆರಂಭದಲ್ಲಿ ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ ಆರೋಪಿ ನೀಲುನನ್ನು ಬಂಧಿಸಲಾಯಿತು. ನಂತರ ಪೊಲೀಸ್ ವಿಚಾರಣೆಯ ಸಮಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆ ಮತ್ತು ಸಿಸಿಟಿವಿ ಸಾಕ್ಷ್ಯಗಳನ್ನು ಸಹ ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಪರಾಧವು ಕೇವಲ ಹಣಕ್ಕಾಗಿ ಮಾತ್ರ ನಡೆದಿದೆ. ಮಾಂತ್ರಿಕ ಅಭ್ಯಾಸಗಳ ಸೋಗಿನಲ್ಲಿ ನಡೆದಿದೆ ಎಂದು ಎಸ್‌ಪಿ ಹೇಳಿದ್ದಾರೆ.