NEET UG Result 2026: ನೀಟ್ ಮರುಪರೀಕ್ಷೆ ಫಲಿತಾಂಶ ಪ್ರಕಟ; ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅರ್ಹತೆ ಪಡೆದ 11.21 ಲಕ್ಷ ಅಭ್ಯರ್ಥಿಗಳು
21 ಜೂನ್ ರಂದು ಭಾರತದ 551 ನಗರಗಳು ಮತ್ತು ವಿದೇಶದ 14 ನಗರಗಳಲ್ಲಿ ಒಟ್ಟು 5,440 ಕೇಂದ್ರಗಳಲ್ಲಿ ನೀಟ್ ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 11.21 ಲಕ್ಷ ಅಭ್ಯರ್ಥಿಗಳು ಪದವಿಪೂರ್ವ ವೈದ್ಯಕೀಯ, ದಂತವೈದ್ಯಕೀಯ, ಆಯುಷ್ (AYUSH) ಮತ್ತು ಇತರೆ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಹತೆ ಪಡೆದಿದ್ದಾರೆ.
-
ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಗುರುವಾರ ಪ್ರಕಟಿಸಿದ್ದು, 11.21 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಈ ಬಾರಿ ನೀಟ್ ಫಲಿತಾಂಶದಲ್ಲಿ ಪಂಜಾಬ್‌ನ ಆರ್ಯನ್ ಗುಪ್ತಾ, ಹರಿಯಾಣದ ಪಾನ್ಶುಲ್ ಬನ್ಸಾಲ್ ಅವರು 720ಕ್ಕೆ 715 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದು, ಒಟ್ಟಾರೆ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಲ್ಲಿ ಶೇ.58 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ), ನೀಟ್ (NEET-UG) 2026ರ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳ ವೈದ್ಯಕೀಯ ಪ್ರವೇಶಾತಿ ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆಯು ಯಾವುದೇ ಅಡೆತಡೆಯಿಲ್ಲದೆ ನಿಗದಿತ ಸಮಯಕ್ಕೆ ನಡೆಯುವಂತೆ ಫಲಿತಾಂಶವನ್ನು ಪ್ರಕಟಿಸಲಾಗಿದೆ.
21 ಜೂನ್ ರಂದು ಭಾರತದ 551 ನಗರಗಳು ಮತ್ತು ವಿದೇಶದ 14 ನಗರಗಳಲ್ಲಿ ಒಟ್ಟು 5,440 ಕೇಂದ್ರಗಳಲ್ಲಿ, 13 ಭಾಷೆಗಳಲ್ಲಿ ನಡೆದ ನೀಟ್ (UG) 2026ರ ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 11.21 ಲಕ್ಷ ಅಭ್ಯರ್ಥಿಗಳು ಪದವಿಪೂರ್ವ ವೈದ್ಯಕೀಯ, ದಂತವೈದ್ಯಕೀಯ, ಆಯುಷ್ (AYUSH) ಮತ್ತು ಇತರೆ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಹತೆ ಪಡೆದಿದ್ದಾರೆ.
720ಕ್ಕೆ 690ಕ್ಕೂ ಹೆಚ್ಚು ಅಂಕ ಪಡೆದ 138 ಅಭ್ಯರ್ಥಿಗಳು
ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಬಹುತೇಕ ಅಭ್ಯರ್ಥಿಗಳು 17 ರಿಂದ 19 ವರ್ಷದೊಳಗಿನವರಾಗಿದ್ದಾರೆ. ಅಗ್ರ ಶ್ರೇಯಾಂಕ ಪಡೆದವರಲ್ಲಿ 138 ಅಭ್ಯರ್ಥಿಗಳು 720ಕ್ಕೆ 690 ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಇವರಲ್ಲಿ ಶೇ. 93 ಕ್ಕೂ ಹೆಚ್ಚು ಅಭ್ಯರ್ಥಿಗಳು ಮೊದಲ ಬಾರಿಗೆ ನೀಟ್ (UG) ಪರೀಕ್ಷೆಗೆ ಹಾಜರಾಗಿದ್ದರು.
19 ಅಭ್ಯರ್ಥಿಗಳು 720ಕ್ಕೆ 700ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. 1,492 ಅಭ್ಯರ್ಥಿಗಳು 650 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 10,160 ಅಭ್ಯರ್ಥಿಗಳು 600 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 90,780 ಅಭ್ಯರ್ಥಿಗಳು 500 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ನೀಟ್ ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ?
- neet.nta.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ NEET UG 2026 Scorecard / Re-exam Scorecard ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಅಗತ್ಯ ಲಾಗಿನ್ ವಿವರ ನಮೂದಿಸಿ.
- ನಂತರ ನಿಮ್ಮ ಸ್ಕೋರ್‌ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.
- ಅದನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.