ಶಾಲೆಗೆ ಹುಸಿ ಬಾಂಬ್ ಇಮೇಲ್ ಕಳುಹಿಸಿದ 16 ವರ್ಷದ ವಿದ್ಯಾರ್ಥಿನಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ತರಗತಿಗಳಿಗೆ ರಜೆ ಬೇಕೆಂಬ ಕಾರಣಕ್ಕಾಗಿ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನದೇ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.ಅಕ್ಟೋಬರ್ 23, 2026 ರಂದು ನವದೆಹಲಿಯ ಲೋಧಿ ರಸ್ತೆಯಲ್ಲಿರುವ ವಾಯುಪಡೆಯ ಬಾಲ ಭಾರತಿ ಶಾಲೆಗೆ "ನಿಮ್ಮ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ" ಎಂಬ ಇಮೇಲ್ ಸಂದೇಶ ಬಂದಿತ್ತು.
ಇಂಟರ್ ನೆಟ್ ಚಿತ್ರ -
ನವದೆಹಲಿ: ತರಗತಿಗಳಿಗೆ ರಜೆ ಬೇಕೆಂಬ ಕಾರಣಕ್ಕಾಗಿ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನದೇ ಶಾಲೆಗೆ ಹುಸಿ ಬಾಂಬ್ ಬೆದರಿಕೆ (Bomb Threat) ಇಮೇಲ್ ಕಳುಹಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.ಅಕ್ಟೋಬರ್ 23, 2026 ರಂದು ನವದೆಹಲಿಯ ಲೋಧಿ ರಸ್ತೆಯಲ್ಲಿರುವ ವಾಯುಪಡೆಯ ಬಾಲ ಭಾರತಿ ಶಾಲೆಗೆ ನಿಮ್ಮ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂಬ ಇಮೇಲ್ ಸಂದೇಶ ಬಂದಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿದ್ದರು. ಆ ವೇಳೆ ವಿದ್ಯಾರ್ಥಿಯ ಕೃತ್ಯ ಬೆಳಕಿಗೆ ಬಂದಿದೆ.
ಇಮೇಲ್ ನೋಡಿದ ಶಾಲಾ ಆಡಳಿತ ಮಂಡಳಿ ತಕ್ಷಣ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿತು. ಸ್ಥಳಕ್ಕೆ ಧಾವಿಸಿದ ಬಾಂಬ್ ಪತ್ತೆ ದಳ ಶ್ವಾನ ದಳ ಮತ್ತು ಸ್ಥಳೀಯ ಪೊಲೀಸರು ಇಡೀ ಶಾಲಾ ಆವರಣವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು. ಸುದೀರ್ಘ ಕಾರ್ಯಾಚರಣೆಯ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಘೋಷಿಸಲಾಯಿತು.
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ದೆಹಲಿಯ ದಕ್ಷಿಣ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯ ತಂಡವು ತಕ್ಷಣ ತಾಂತ್ರಿಕ ತನಿಖೆಯನ್ನು ಕೈಗೆತ್ತಿಕೊಂಡಿತು. ಆರೋಪಿ ಬಾಲಕಿಯು ತಾನು ಸಿಕ್ಕಿಬೀಳಬಾರದು ಎಂದು ವಿಪಿಎನ್ ತಂತ್ರಜ್ಞಾನವನ್ನು ಬಳಸಿ ಇಮೇಲ್ ಕಳುಹಿಸಿದ್ದಳು. ವಿಪಿಎನ್ ಬಳಸಿದ್ದರೂ ಸೈಬರ್ ಪೊಲೀಸರು ಇಮೇಲ್ನ ಐಪಿ ಅಡ್ರೆಸ್ ಮತ್ತು ಡಿಜಿಟಲ್ ಪುರಾವೆಗಳನ್ನು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದರು.
ಅಂತಿಮವಾಗಿ ಇಮೇಲ್ ಬಂದ ಮೂಲವನ್ನು ಪತ್ತೆಹಚ್ಚಿದಾಗ, ಅದು ಅದೇ ಶಾಲೆಯಲ್ಲಿ 11ನೇ ತರಗತಿ ಓದುತ್ತಿರುವ 16 ವರ್ಷದ ವಿದ್ಯಾರ್ಥಿನಿಯ ಮೊಬೈಲ್ನಿಂದಲೇ ರವಾನೆಯಾಗಿರುವುದು ದೃಢಪಟ್ಟಿತು. ಪೊಲೀಸರು ತಕ್ಷಣ ಆಕೆಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದರು. ಬಾಲಕಿಯು ಅಪ್ರಾಪ್ತ ವಯಸ್ಕಳಾಗಿದ್ದರಿಂದ ಪೊಲೀಸರು ಆಕೆಯನ್ನು ಬಂಧಿಸುವಂತಿಲ್ಲ. ಆದ್ದರಿಂದ ಬಾಲ ನ್ಯಾಯ ಕಾಯ್ದೆಯ ಸೂಕ್ತ ನಿಬಂಧನೆಗಳ ಅಡಿಯಲ್ಲಿ ಆಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಮತ್ತು ಆಕೆಗೆ ಕೌನ್ಸೆಲಿಂಗ್ ಪ್ರಕ್ರಿಯೆಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆ.
ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ; ಗಡಿಯಲ್ಲಿ ಡ್ರೋನ್ ಬಾಂಬ್ ಮೂಲಕ ಅಟ್ಯಾಕ್ ಮಾಡಲು ಯತ್ನ
ಇತ್ತೀಚಿನ ದಿನಗಳಲ್ಲಿ ದೆಹಲಿಯ ವಿವಿಧ ಶಾಲೆಗಳು, ವಿಮಾನ ನಿಲ್ದಾಣಗಳು ಮತ್ತು ಹೋಟೆಲ್ಗಳಿಗೆ ಇಂತಹ ನೂರಾರು ಹುಸಿ ಬಾಂಬ್ ಬೆದರಿಕೆಗಳು ಬರುತ್ತಿದ್ದು, ಇವುಗಳ ವಿರುದ್ಧ ಕಠಿಣ ಕಾನೂನು ತರಲು ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ.