Delhi Election 2025: ಇಂದು ದಿಲ್ಲಿ ವಿಧಾನಸಭಾ ಚುನಾವಣೆ: ಗದ್ದುಗೆಗೆ ಏರುತ್ತಾ ಬಿಜೆಪಿ? ಅಧಿಕಾರ ಉಳಿಸಿಕೊಳ್ಳುತ್ತಾ ಆಪ್?
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂದು (ಫೆ. 5) ವಿಧಾನಸಭಾ ಚುನಾವಣೆ ನಡೆಯಲಿದ್ದು, ಫೆ. 8ರಂದು ಫಲಿತಾಂಶ ಹೊರ ಬೀಳಲಿದೆ. ಹಲವಾರು ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾದ ದಿಲ್ಲಿಯಲ್ಲಿ ಯಾರು ಗದ್ದುಗೆಗೆ ಏರಲಿದ್ದಾರೆ ಎನ್ನುವ ಕುತೂಹಲ ದೇಶಾದ್ಯಂತ ಮನೆ ಮಾಡಿದೆ. ಸತತ 3ನೇ ಬಾರಿಗೆ ಅಧಿಕಾರಕ್ಕೆ ಬರುವ ಕನಸು ಆಪ್‌ನದ್ದಾದರೆ, 27 ವರ್ಷಗಳ ಬಳಿಕ ಸರ್ಕಾರ ರಚಿಸಬೇಕು ಎನ್ನುವ ಹುಮ್ಮಸಿನಲ್ಲಿ ಬಿಜೆಪಿ ಇದೆ. ಇನ್ನು ಕಾಂಗ್ರೆಸ್ ಮರಳಿ ತನ್ನ ಹೆಜ್ಜೆ ಗುರುತು ಮೂಡಿಸುವ ಉತ್ಸಾಹದಲ್ಲಿದೆ.
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂದು (ಫೆ. 5) ವಿಧಾನಸಭಾ ಚುನಾವಣೆ ನಡೆಯಲಿದ್ದು, ಗದ್ದುಗೆಗೆ ಯಾರು ಏರಲಿದ್ದಾರೆ ಎನ್ನುವ ಕುತೂಹಲ ಮನೆ ಮಾಡಿದೆ (Delhi Election 2025). ದಿಲ್ಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು 1.56 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ. ಬಿಸಿ ಬಿಸಿ ಚರ್ಚೆ, ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾದ ಜನತೆ ಯಾರ ಜತೆ ನಿಲ್ಲಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇಲ್ಲಿ ಬಿಜೆಪಿ (BJP), ಮತ್ತು ಆಮ್ ಆದ್ಮಿ ಪಾರ್ಟಿ (AAP) ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಕಾಂಗ್ರೆಸ್ (Congress) ಕೂಡ ತೀವ್ರ ಸ್ಪರ್ಧೆ ಒಟ್ಟುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಒಂದೇ ಹಂತದಲ್ಲಿ ನಡೆಯುವ ಮತದಾನದ ಫಲಿತಾಂಶ ಫೆ. 8ರಂದು ಹೊರ ಬೀಳಲಿದೆ.
ಕಳೆದ 10 ವರ್ಷಗಳಿಂದ ಆಪ್ ದಿಲ್ಲಿಯಲ್ಲಿ ಅಧಿಕಾರದಲ್ಲಿದ್ದು, ಹ್ಯಾಟ್ರಿಕ್ ಕನಸು ನನಸಾಗುವ ನಿರೀಕ್ಷೆಯಲ್ಲಿದೆ. ಇನ್ನು ಬಿಜೆಪಿ ಸುಮಾರು 27 ವರ್ಷಗಳ ಬಳಿಕ ಗದ್ದುಗೆಗೆ ಏರುವ ನಿರೀಕ್ಷೆಯಲ್ಲಿದೆ. ಸದ್ಯ ದಿಲ್ಲಿ ವಿಧಾನಸಭೆ ಮತ್ತು ಲೋಕಸಭೆಯ ಒಂದೂ ಕ್ಷೇತ್ರವನ್ನು ಗೆದ್ದುಕೊಂಡಿರದಿದ್ದರೂ ಕಾಂಗ್ರೆಸ್ ಮರಳಿ ತನ್ನ ಛಾಪು ಮೂಡಿಸುವ ವಿಶ್ವಾಸದಲ್ಲಿದೆ. ಈ ಎಲ್ಲ ಕಾರಣಗಳಿಂದ ದಿಲ್ಲಿ ಚುನಾವಣೆ ಕುತೂಹಲ ಕೆರಳಿಸಿದೆ.
ರಂಗೇರಿದ್ದ ಕಣ
ಚುನಾವಣೆ ಘೋಷಣೆಯಾದಾಗಿನಿಂದ ದಿಲ್ಲಿ ಹಲವಾರು ರಾಜಕೀಯ ಬೆಳವಣಿಗೆಗೆ, ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ. ಅಲ್ಲದೆ ಇತ್ತೀಚಿನ ಕೆಲವು ವರ್ಷಗಳಿಂದ ಇಲ್ಲಿ ಸಾಕಷ್ಟು ನಾಟಕೀಯ ಪ್ರಸಂಗವೂ ಕಂಡು ಬಂದಿದೆ. ದಿಲ್ಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯ ಮತ್ತು ದಿಲ್ಲಿ ಸಚಿವ ಸಂಪುಟದ ಇತರ ಸದಸ್ಯರ ಬಂಧನವೂ ಆಗಿತ್ತು. ಈ ಎಲ್ಲ ಕಾರಣಗಳನ್ನು ಮುಂದಿಟ್ಟಿಕೊಂಡು ಬಿಜೆಪಿಯು ಆಪ್ ಅತ್ಯಂತ ಭ್ರಷ್ಟ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಆರೋಪ ಹೊರಿಸಿತ್ತು.
ಇತ್ತ ಆಪ್ ತನ್ನ ಸರ್ಕಾರ ಜಾರಿಗೆ ತಂದಿರುವ ಜನಪರ ಕಲ್ಯಾಣ ಕ್ರಮಗಳನ್ನು ಬಿಜೆಪಿ ವಿರೋಧಿಸುತ್ತಿದೆ ಮತ್ತು ರಾಜಕೀಯ ಪಿತೂರಿಯ ಭಾಗವಾಗಿ ಅಧಿಕಾರ ದುರುಪಯೋಗಿಸಿಕೊಂಡು ನಾಯಕರನ್ನು ಉದ್ದೇಶಪೂರ್ವಕವಾಗಿ ಆರೋಪಿಗಳನ್ನಾಗಿಸಿದೆ ಎಂದು ತಿರುಗೇಟು ನೀಡಿತ್ತು.
ಪ್ರಮುಖರಿಂದ ಪ್ರಚಾರ
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂತಾದ ಘಟಾನುಘಟಿ ನಾಯಕರು ಬಿರುಸಿನ ಪ್ರಚಾರ ಕೈಗೊಂಡು ಮತದಾರರನ್ನು ಓಲೈಸುವ ಪ್ರಯತ್ನ ನಡೆಸಿದ್ದರು. ದಿಲ್ಲಿ ಚುನಾವಣೆಯ ಪ್ರಚಾರವು ಫೆ. 3ರ ಸಂಜೆ 5 ಗಂಟೆಗೆ ಮುಕ್ತಾಯವಾಗಿದ್ದು, ಇನ್ನೇನಿದ್ದರೂ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವುದೊಂದೇ ಬಾಕಿ.
ಈ ಸುದ್ದಿಯನ್ನೂ ಓದಿ: Delhi Election 2025: ಚುನಾವಣೆಗೆ ಸಜ್ಜಾದ ದೆಹಲಿ; ಮೂರನೇ ಬಾರಿಗೆ ಹ್ಯಾಟ್ರಿಕ್ ಬಾರಿಸುತ್ತಾ ಆಪ್?
70 ಸದಸ್ಯರ ವಿಧಾನಸಭೆಯಲ್ಲಿ ತಮ್ಮ ಪಕ್ಷವು ಕನಿಷ್ಠ 55 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಆಪ್ ವಿಶ್ವಾಸ ವ್ಯಕ್ತಪಡಿಸಿದೆ. 2020ರಲ್ಲಿ ಇದು 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2015ರ ಚುನಾವಣೆಯಲ್ಲಿ67 ಸ್ಥಾನಗಳಲ್ಲಿ ಆಪ್ ಸದಸ್ಯರು ಜಯ ಗಳಿಸಿದ್ದರು.
ಚುನಾವಣಾ ಆಯೋಗದ ಪ್ರಕಾರ ದಿಲ್ಲಿಯಲ್ಲಿ 1.56 ಕೋಟಿ ಮತದಾರರಿದ್ದಾರೆ. ಅವರಲ್ಲಿ 83.76 ಲಕ್ಷ ಪುರುಷರು, 72.36 ಲಕ್ಷ ಮಹಿಳೆಯರು ಮತ್ತು 1,267 ತೃತೀಯ ಲಿಂಗದ ಮತದಾರರು. 150 ಪ್ಯಾರಾ ಮಿಲಿಟರಿ ಪಡೆಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಅಲ್ಲದೆ ದಿಲ್ಲಿಯಾದ್ಯಂತ 30,000 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.