Delhi Election Results 2025: ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಪರ್ವೇಶ್ ವರ್ಮಾಗೆ ಜಯ; ಯಾರಿವರು? ಹಿನ್ನೆಲೆ ಏನು?
ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿಯ ಪರ್ವೇಶ್ ವರ್ಮಾ ಸೋಲಿಸಿದ್ದಾರೆ. ಇವರು ಹೊಸದಿಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಈ ಕಾರಣಕ್ಕೆ ಹೊಸದಿಲ್ಲಿ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿತ್ತು. ದಿಲ್ಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ.
![ಕೇಜ್ರಿವಾಲ್‌ಗೆ ಸೋಲುಣಿಸಿದ ಬಿಜೆಪಿಯ ಪರ್ವೇಶ್ ವರ್ಮಾ ಹಿನ್ನೆಲೆ ಏನು?](https://cdn-vishwavani-prod.hindverse.com/media/original_images/Parvesh_Verma.jpg)
ಪರ್ವೇಶ್ ವರ್ಮಾ.
![Profile](https://vishwavani.news/static/img/user.png)
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, ಸಮೀಕ್ಷೆಗಳು ಭವಿಷ್ಯ ನುಡಿದಂತೆ ಬಿಜೆಪಿ ಚುಕ್ಕಾಣಿ ಹಿಡಿಯಲು ಮುಂದಾಗಿದೆ (Delhi Election Results 2025). ಸತತ 10 ವರ್ಷಗಳಿಂದ ಅದಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಜತೆಗೆ ಹೊಸದಿಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಆಪ್ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಸೋತಿದ್ದು, ಭಾರೀ ಆಘಾತ ಎದುರಾಗಿದೆ. ತೀವ್ರ ಹಣಾಹಣಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ (Parvesh Verma) ಅವರು ಕೇಜ್ರಿವಾಲ್‌ಗೆ ಸೋಲಿನ ರುಚಿ ತೋರಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಾಗಾದರೆ ಯಾರು ಈ ಪರ್ವೇಶ್ ವರ್ಮಾ ಏನಿವರ ಹಿನ್ನೆಲೆ? ಇಲ್ಲಿದೆ ವಿವರ.
ಈ ಹಿಂದೆ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಪರ್ವೇಶ್ ವರ್ಮಾ ಅವರು ಅರವಿಂದ್ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಯುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಇದೀಗ ಮಾಜಿ ಮುಖ್ಯಮಂತ್ರಿಯನ್ನೇ ಸೋಲಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
#WATCH | Daughters of BJP candidate from the New Delhi assembly constituency Parvesh Verma, Trisha and Sanidhi say, "We thank the people of New Delhi for their support. The people of Delhi will never make the mistake of giving a second chance to a person who runs govt by telling… pic.twitter.com/jOze2sKzkx
— ANI (@ANI) February 8, 2025
ಯಾರು ಈ ಪರ್ವೇಶ್ ವರ್ಮಾ?
ಪರ್ವೇಶ್ ಅವರು ಜಾಟ್ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಇವರ ತಂದೆ ಸಾಹಿಬ್ ಸಿಂಗ್ ವರ್ಮಾ ಕೂಡ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದರು. ಅಲ್ಲದೆ ಇವರು ದಿಲ್ಲಿ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಪರ್ವೇಶ್ ಅವರ ಮಾವ ಅಝಾದ್ ಸಿಂಗ್ ಉತ್ತರ ದಿಲ್ಲಿಯ ಮೇಯರ್ ಆಗಿದ್ದರು. 1977ರಲ್ಲಿ ಜನಿಸಿದ ಪರ್ವೇಶ್ ವರ್ಮಾ ತಮ್ಮ ಶಿಕ್ಷಣವನ್ನು ದಿಲ್ಲಿಯಲ್ಲಿ ಪೂರೈಸಿದ್ದರು. ಆರ್.ಕೆ.ಪುರಂನ ದಿಲ್ಲಿ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಅವರು ಕಿರೊರಿ ಮಾಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು.
ಪರ್ವೇಶ್ ವರ್ಮಾ ಹೊಂದಿರುವ ಆಸ್ತಿ
ನಾಮಪತ್ರ ಸಲ್ಲಿಸುವಾಗ ಪರ್ವೇಶ್ ವರ್ಮಾ ಅವರು 89 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದರು. ಅವರ ಪತ್ನಿ ಸ್ವಾತಿ ಸಿಂಗ್ ಅವರ ನಿವ್ವಳ ಆಸ್ತಿ ಮೌಲ್ಯ 24.4 ಕೋಟಿ ರೂ. ದಂಪತಿಯ ಒಟ್ಟು ಆಸ್ತಿಯ ಮೌಲ್ಯ 113 ಕೋಟಿ ರೂ. ಪರ್ವೇಶ್ ತಮ್ಮ ಬಳಿ 2.2 ಲಕ್ಷ ರೂ. ಮತ್ತು ಪತ್ನಿ ಸ್ವಾತಿ ಬಳಿ 50,000 ರೂ. ನಗದು ಇರುವುದಾಗಿ ತಿಳಿಸಿದ್ದರು. ಪರ್ವೇಶ್ ವರ್ಮಾ ಅವರ ಈಕ್ವಿಟಿ ಮತ್ತು ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯಲ್ಲಿ ಮಾಡಿದ್ದಾರೆ. ಈ ಪೈಕಿ 52.75 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಬಾಂಡ್‌ಗಳು ಸೇರಿವೆ. ಅವರು 17 ಲಕ್ಷ ರೂ. ಮತ್ತು ಅವರ ಪತ್ನಿ 5.5 ಲಕ್ಷ ರೂ. ಮೌಲ್ಯದ ವಿಮಾ ಹೂಡಿಕೆ ಹೊಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Delhi Election Result 2025: ಆಪ್‌ಗೆ ಬಿಗ್ ಲಾಸ್...ಇನ್ಮುಂದೆ ದೆಹಲಿಯಲ್ಲಿ ಬಿಜೆಪಿಯೇ ಬಿಗ್ ಬಾಸ್; ಕೇಜ್ರಿವಾಲ್‌ಗೆ ಹೀನಾಯ ಸೋಲು
ಪರ್ವೇಶ್ ವರ್ಮಾ ಅವರ ಕಾರುಗಳ ಸಂಗ್ರಹದಲ್ಲಿ 9 ಲಕ್ಷ ರೂ. ಮೌಲ್ಯದ ಟೊಯೊಟಾ ಫಾರ್ಚೂನರ್, 36 ಲಕ್ಷ ರೂ. ಮೌಲ್ಯದ ಟೊಯೊಟಾ ಇನ್ನೋವಾ ಮತ್ತು 11.8 ಲಕ್ಷ ರೂ. ಮೌಲ್ಯದ ಎಕ್ಸ್ ಯುವಿ ಇದೆ. 8.25 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನವನ್ನೂ ಹೊಂದಿದ್ದಾರೆ.