ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪವನ್‌ ಕಲ್ಯಾಣ್‌ ಮಗ ಸೇರಿ ಹಲವರನ್ನು ಬೆಂಕಿ ಅವಘಡದಿಂದ ಕಾಪಾಡಿದ ಭಾರತೀಯ ಕಾರ್ಮಿಕರು; 18 ಮಂದಿಗೆ ಸಿಂಗಾಪುರದಿಂದ ಜೀವರಕ್ಷಕ ಪ್ರಶಸ್ತಿ

Singapore fire accident: ನಟ, ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಏಳು ವರ್ಷದ ಮಗ ಮಾರ್ಕ್ ಶಂಕರ್ ಪವನೋವಿಚ್ ಸೇರಿದಂತೆ ಸಿಂಗಾಪುರದ ಶಾಲೆಯಲ್ಲಿ ಬೆಂಕಿ ಅವಘಡಕ್ಕೆ ತುತ್ತಾಗಿದ್ದವರನ್ನು ರಕ್ಷಿಸಿದ 18 ಜನರಿಗೆ ಸಿಂಗಾಪುರ ನಾಗರಿಕ ರಕ್ಷಣಾ ಪಡೆ (ಎಸ್‌ಸಿಡಿಎಫ್) ಸಮುದಾಯ ಜೀವರಕ್ಷಕ ಪ್ರಶಸ್ತಿಯನ್ನು ನೀಡಿದೆ.

ಸಿಂಗಾಪುರ ಬೆಂಕಿ ಅಪಘಾತ: ಭಾರತೀಯ ಕಾರ್ಮಿಕರು ಸೇರಿ ರಕ್ಷಕರಿಗೆ ಪ್ರಶಸ್ತಿ

ಸಿಂಗಾಪುರ: ನಟ, ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ (Andhra Pradesh deputy chief minister) ಪವನ್ ಕಲ್ಯಾಣ್ (Pawan Kalyan) ಅವರ ಏಳು ವರ್ಷದ ಮಗ ಮಾರ್ಕ್ ಶಂಕರ್ ಪವನೋವಿಚ್ (Mark Shankar Pavanovich) ಸೇರಿದಂತೆ ಸಿಂಗಾಪುರದ ಶಾಲೆಯಲ್ಲಿ ಬೆಂಕಿ ಅವಘಡಕ್ಕೆ (Singapore fire accident) ತುತ್ತಾಗಿದ್ದವರನ್ನು ರಕ್ಷಿಸಿದ 18 ಜನರಿಗೆ ಸಿಂಗಾಪುರ ನಾಗರಿಕ ರಕ್ಷಣಾ ಪಡೆ (SCDF) ಸಮುದಾಯ ಜೀವರಕ್ಷಕ ಪ್ರಶಸ್ತಿಯನ್ನು ನೀಡಿದೆ. ಏಪ್ರಿಲ್ 8ರಂದು ಸಿಂಗಾಪುರದ ಮೂರು ಮಹಡಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆಯಲ್ಲಿ ಒಬ್ಬಳು ಬಾಲಕಿ ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಸಿಂಗಾಪುರದ ರಕ್ಷಣಾ ಅಧಿಕಾರಿಗಳೊಂದಿಗೆ ಭಾರತದ ನಿರ್ಮಾಣ ಕಾರ್ಮಿಕರು ಸೇರಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ಬೆಂಕಿಯಿಂದ 16 ಮಕ್ಕಳು ಮತ್ತು ಆರು ವಯಸ್ಕರನ್ನು ರಕ್ಷಿಸಿದ್ದಕ್ಕಾಗಿ ಒಟ್ಟು 18 ಜನರಿಗೆ ಸಿಂಗಾಪುರ ನಾಗರಿಕ ರಕ್ಷಣಾ ಪಡೆಯ ಸಮುದಾಯ ಜೀವರಕ್ಷಕ ಪ್ರಶಸ್ತಿ ನೀಡಲಾಗಿದೆ. ಎಸ್‌ಸಿಡಿಎಫ್ ಗುರುತಿಸಿದ 18 ವ್ಯಕ್ತಿಗಳಲ್ಲಿ ಚಿನ್ನಪ್ಪ ಕಣ್ಣದಾಸನ್, ಹಸನ್ ಎಮಾಮುಲ್, ಶಕಿಲ್ ಮೊಹಮ್ಮದ್, ದಾಸ್ ತಪೋಶ್, ಹಸನ್ ರಾಜೀಬ್, ರವಿ ಕುಮಾರ್, ವರುವೆಲ್ ಕ್ರಿಸ್ಟೋಫರ್, ಗೋವಿಂದರಾಜ್ ಎಳಂಗೇಶ್ವರನ್, ಮುತ್ತು ಕುಮಾರ್ ಮುಗೇಶ್, ಇಂದರ್ಜಿತ್ ಸಿಂಗ್, ಶಿವಸಾಮಿ ವಿಜಯರಾಜ್, ನಾಗರಾಜನ್ ಅನ್ಬರಸನ್, ಸುಬ್ರಮಣಿಯನ್ ಸರನ್‌ರಾಜ್, ಇಸ್ಲಾಂ ಶಫಿಕುಲ್, ಸುಬ್ರಮಣಿಯನ್ ರಮೇಶ್‌ಕುಮಾರ್, ಬೆನ್ಸನ್ ಲೋ, ಶೇಕ್ ಅಮಿರುದ್ದೀನ್ ಬಿನ್ ಕಮಲುದ್ದೀನ್ ಮತ್ತು ಡಾ. ಲಾರಾ ಬಿಫಿನ್ ಸೇರಿದ್ದಾರೆ.

ಸಿಂಗಾಪುರದ ರಿವರ್ ವ್ಯಾಲಿ ರಸ್ತೆ ಸಮೀಪದ ಶಾಲೆಯ ಎರಡು ಮತ್ತು ಮೂರನೇ ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇಲ್ಲಿಗೆ ಎಸ್‌ಸಿಡಿಎಫ್ ಅಗ್ನಿಶಾಮಕ ತಂಡ ಬರುವ ಮೊದಲು 6ರಿಂದ 10 ವರ್ಷ ವಯಸ್ಸಿನ ಮಕ್ಕಳು, 23ರಿಂದ 55 ವರ್ಷ ವಯಸ್ಸಿನ 6 ವಯಸ್ಕರು ಮತ್ತು ಸುತ್ತಮುತ್ತಲಿನವರನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಈ ಘಟನೆಯಲ್ಲಿ 10 ವರ್ಷದ ಆಸ್ಟ್ರೇಲಿಯಾದ ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು. ಬೆಂಕಿಯಲ್ಲಿ ಗಾಯಗೊಂಡವರಲ್ಲಿ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಮಗ ಕೂಡ ಸೇರಿದ್ದಾನೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ 1ನೇ ಎಸ್‌ಸಿಡಿಎಫ್ ವಿಭಾಗದ ಕಮಾಂಡರ್ ಕರ್ನಲ್ ಟೇ ಝಿ ವಿ, ಎಸ್‌ಸಿಡಿಎಫ್ ಅಗ್ನಿಶಾಮಕ ತಂಡ ಬರುವ ಮುನ್ನವೇ ಹಲವಾರು ಮಂದಿ ಸೇರಿ ರಕ್ಷಣಾ ಕಾರ್ಯ ಮಾಡಿರುವುದನ್ನು ಶ್ಲಾಘಿಸಿದರು.

ಬೆಂಕಿ ಕಾಣಿಸಿಕೊಂಡಾಗ ನಿರ್ದಿಷ್ಟ ಸಮಯವು ನಿರ್ಣಾಯಕವಾಗಿರುತ್ತದೆ. ಆದ್ದರಿಂದ ಎಸ್‌ಸಿಡಿಎಫ್ ಬರುವ ಮೊದಲೇ ಕಾರ್ಯ ಪ್ರವೃತ್ತರಾದ ಸಾರ್ವಜನಿಕರಿಗೆ ನಾವು ಧನ್ಯವಾದ ಹೇಳುತ್ತೇವೆ. ಇಲ್ಲಿಯವರೆಗೆ ಪ್ರಸಾರವಾಗುತ್ತಿರುವ ಅನೇಕ ವಿಡಿಯೊಗಳಲ್ಲಿ ಅವರ ಧೈರ್ಯ, ತ್ವರಿತ ಕ್ರಮ ಆ ದಿನ ಹಲವಾರು ಮಂದಿಯ ಜೀವ ಉಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಎಸ್‌ಸಿಡಿಎಫ್ ಸಮುದಾಯ ಜೀವ ರಕ್ಷಕ ಪ್ರಶಸ್ತಿಯನ್ನು ನಾಗರಿಕರಿಗೆ ನೀಡುತ್ತದೆ. ಜೀವಗಳನ್ನು ಉಳಿಸುವಲ್ಲಿ ಸಾರ್ವಜನಿಕರು ನೀಡುವ ಕೊಡುಗೆಗೆ ಇದು ಸಲ್ಲಿಸುವ ಗೌರವ. ಮಕ್ಕಳು ಮಹಡಿಯಿಂದ ಜಿಗಿಯಲು ಸಿದ್ಧವಾಗಿದ್ದರು. ಇದನ್ನು ಗಮನಿಸಿ ತುರ್ತು ಸ್ಪಂದನೆ ನೀಡಿದ ಖಾಸಗಿ ಬಾಡಿಗೆ ಕಾರಿನ ಚಾಲಕ ಬೆನ್ಸನ್ ಲೋ ಅವರು ಮಕ್ಕಳನ್ನು ನಿಲ್ಲುವಂತೆ ಕೂಗಿ ಹೇಳಿ ಅವರ ರಕ್ಷಣಾ ಕಾರ್ಯದಲ್ಲಿ ನೆರವಾದರು. ಬಳಿಕ ಅವರು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಸಹಾಯ ಮಾಡಿದರು.

ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಾದ ಶಕೀಲ್ ಮೊಹಮ್ಮದ್, ಹಸನ್ ಎಮಾಮುಲ್, ಚಿನ್ನಪ್ಪ ಕಣ್ಣದಾಸನ್ ಅವರು ಮಾನವ ಸರಪಳಿಯನ್ನು ರಚಿಸಿ ಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಸಹಕರಿಸಿದರು.

ʼʼಆರಂಭದಲ್ಲಿ ಕಟ್ಟಡದ ಮೂರನೇ ಮಹಡಿಗೆ ಹೋಗಲು ಪ್ರಯತ್ನಿಸಿದೆ. ಆದರೆ ಎರಡನೇ ಮಹಡಿಯಲ್ಲಿ ಬೆಂಕಿಯನ್ನು ನಂದಿಸಬಲ್ಲೆ ಎಂದುಕೊಂಡು ಅಲ್ಲಿದ್ದವರಿಗೆ ಸಹಾಯ ಮಾಡಲು ಏಣಿ ತರಲು ಹೊರಗೆ ಹೋದೆ. ಆದರೆ ಏಣಿ ಅಷ್ಟು ಎತ್ತರ ತಲುಪುವುದು ಸಾಧ್ಯವಾಗಲಿಲ್ಲ. ಕಟ್ಟಡದಿಂದ ಹೊರಬರಲು ಬೇರೆ ದಾರಿ ಇರಲಿಲ್ಲ. ಮಗುವೊಂದು ಮೇಲಿನಿಂದ ಜಿಗಿಯಲು ಪ್ರಯತ್ನಿಸುತ್ತಿರುವುದನ್ನು ನೋಡಿ ಅವನನ್ನು ತಡೆದು ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದೆ. ಬಳಿಕ ತನ್ನ ಸಹೋದ್ಯೋಗಿಗಳೊಂದಿಗೆ ಬಂದು ಮಕ್ಕಳನ್ನು ರಕ್ಷಿಸಲು ಮುಂದಾದೆʼʼ ಎಂದು ಶಕೀಲ್ ವಿವರಿಸಿದ್ದಾರೆ.

ಇದನ್ನೂ ಓದಿ: Murder Case: ಪಾಕಿಸ್ತಾನಿ ಪ್ರಜೆಯಿಂದ ದಾಳಿ: ದುಬೈನಲ್ಲಿ ತೆಲಂಗಾಣ ಮೂಲದ ಇಬ್ಬರು ವ್ಯಕ್ತಿಗಳ ಹತ್ಯೆ

ಭಾರತದ ಕಟ್ಟಡ ನಿರ್ಮಾಣ ಕಾರ್ಮಿಕ ರವಿ ಕುಮಾರ್ ಮಾತನಾಡಿ, ʼʼಪುಟ್ಟ ಮಕ್ಕಳನ್ನು ನೋಡುವಾಗ ನಾನು ನನ್ನ ತಂಗಿಯನ್ನು ನೆನಪಿಸಿಕೊಂಡೆ. ಯಾಕೆಂದರೆ ಅವಳು ಕೂಡ ಇದೇ ವಯಸ್ಸಿನವಳುʼʼ ಎಂದು ಹೇಳಿದ್ದಾರೆ.

''ನಾವು ಜೀವಗಳನ್ನು ಉಳಿಸಿದ್ದೇವೆ. ಬೆಂಕಿಯಿಂದ ಸಾವನ್ನಪ್ಪಿದ ಹುಡುಗಿ ಇನ್ನೂ ನನ್ನ ಮನಸ್ಸಿನಲ್ಲಿದ್ದಾಳೆ. ನಾನು ಕೆಲಸ ಮಾಡುವಾಗ ಅಥವಾ ತಿನ್ನುವಾಗ ಅವಳ ಬಗ್ಗೆಯೇ ಯೋಚಿಸುತ್ತಿದ್ದೇನೆ ಮತ್ತು ತುಂಬಾ ದುಃಖಿತನಾಗಿದ್ದೇನೆ'' ಎನ್ನುತ್ತಾರೆ ಇನ್ನೊಬ್ಬ ಕಾರ್ಮಿಕ.