ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಸೋಮವಾರ ಬೆಳಿಗ್ಗೆ ಪಾಕ್ ಸರ್ಕಾರಿ ಹೆಲಿಕಾಪ್ಟರ್ (Helicopter Crash) ಅಪಘಾತಕ್ಕೀಡಾಗಿ ಇಬ್ಬರು ಪೈಲಟ್‌ಗಳು ಮತ್ತು ಮೂವರು ಅಧಿಕಾರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ವರದಿಗಳ ಪ್ರಕಾರ, ಗಿಲ್ಗಿಟ್-ಬಾಲ್ಟಿಸ್ತಾನದ ಡೈಮರ್ ಜಿಲ್ಲೆಯ ಚಿಲಾಸ್ ಪ್ರದೇಶದಲ್ಲಿ MI-17 ಹೆಲಿಕಾಪ್ಟರ್ ಪತನಗೊಂಡಿದೆ. ಪ್ರವಾಸಿ ಪ್ರದೇಶದಲ್ಲಿ ಹೊಸದಾಗಿ ಪ್ರಸ್ತಾಪಿಸಲಾದ ಹೆಲಿಪ್ಯಾಡ್‌ನಲ್ಲಿ ವಿಮಾನವು ಪರೀಕ್ಷಾರ್ಥ ಲ್ಯಾಂಡಿಂಗ್ ನಡೆಸುತ್ತಿದ್ದಾಗ ಅದು ಪತನಗೊಂಡಿತು ಎಂದು ಡೈಮರ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ ಹಮೀದ್ ತಿಳಿಸಿದ್ದಾರೆ.
ಗಿಲ್ಗಿಟ್-ಬಾಲ್ಟಿಸ್ತಾನ್ ಸರ್ಕಾರದ ವಕ್ತಾರ ಫೈಜುಲ್ಲಾ ಫರಾಕ್, "ನಮ್ಮ ಹೆಲಿಕಾಪ್ಟರ್‌ಗಳಲ್ಲಿ ಒಂದು ಚಿಲಾಸ್‌ನ ಥಾರ್‌ನಲ್ಲಿ ಅಪಘಾತಕ್ಕೀಡಾಗಿದೆ" ಎಂದು ಹೇಳಿದರು. ಮೃತ ಸಿಬ್ಬಂದಿಯಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಮೂವರು ತಾಂತ್ರಿಕ ಸಿಬ್ಬಂದಿ ಸೇರಿದ್ದಾರೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನಿಂದ ಹೊಗೆ ಹೊರಬರುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸದಾಗಿ ಪ್ರಸ್ತಾಪಿಸಲಾದ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಪರೀಕ್ಷೆ ನಡೆಯುತ್ತಿರುವಾಗಲೇ ಏಕಾಏಕಿ ಅಪಘಾತ ಸಂಭವಿಸಿದೆ.
ಅಪಘಾತಕ್ಕೆ ನಿರ್ದಿಷ್ಟ ಕಾರಣ ಸ್ಪಷ್ಟವಾಗಿಲ್ಲ. ಕಳೆದ ತಿಂಗಳು ಸಂಭವಿಸಿದ ಖೈಬರ್ ಪಖ್ತುನ್ಖ್ವಾ ಸರ್ಕಾರಿ ಹೆಲಿಕಾಪ್ಟರ್ ಅಪಘಾತದ ನಂತರ, ಇತ್ತೀಚಿನ ವಾರಗಳಲ್ಲಿ ಇದು ಎರಡನೇ ಅಪಘಾತವಾಗಿದೆ. ಕಳೆದ ತಿಂಗಳು, ವಾಯುವ್ಯದಲ್ಲಿ ಪ್ರವಾಹ ಪೀಡಿತ ಬಜೌರ್‌ಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ಹವಾಮಾನ ವೈಪರೀತ್ಯದಿಂದ ಈ ದುರಂತ ಸಂಭವಿಸಿತ್ತು. ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ಭಾರೀ ಮಳೆಯ ನಡುವೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದ Mi-17 ಹೆಲಿಕಾಪ್ಟರ್ ಪತನಗೊಂಡು ಐವರು ಸಿಬ್ಬಂದಿ ಸಾವನ್ನಪ್ಪಿದ್ದರು.
ಈ ಸುದ್ದಿಯನ್ನೂ ಓದಿ: F-16 Pilot: ಏರ್‌ಶೋಗೆ ತಯಾರಿ ನಡೆಸುತ್ತಿದ್ದ ವೇಳೆ ಫೈಟರ್ ಜೆಟ್ ಪತನ; ಪೈಲಟ್ ಸಾವು
ಹಠಾತ್ ಮೇಘಸ್ಪೋಟದಿಂದ 157 ಜನರು ಸಾವನ್ನಪ್ಪಿದ್ದರು. 123 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪ್ರವಾಹದಿಂದ ಮನೆಗಳು ಮತ್ತು ಗ್ರಾಮಗಳು ಕೊಚ್ಚಿಹೋಗಿವೆ. ನೂರಾರು ಜನರು ನಾಪತ್ತೆಯಾಗಿದ್ದಾರೆ. ಬುನೇರ್‌ನಲ್ಲಿ ಹೆಚ್ಚಿನ ಸಾವುನೋವುಗಳ ಸಂಖ್ಯೆ ಇರುವುದರಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು.