ಕಾಬೂಲ್, ಜೂ. 27: ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ (Hindu Kush Region) ಶನಿವಾರ (ಜೂ. 27) 6.2 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪವು 215 ಕಿಲೋ ಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ. ಲಾಹೋರ್, ಫೈಸಲಾಬಾದ್ ಮತ್ತು ಇಸ್ಲಾಮಾಬಾದ್ ಸೇರಿ ನೆರೆಯ ಪಾಕಿಸ್ತಾನದಲ್ಲೂ ಕಂಪನದ ಅನುಭವವಾಗಿದೆ. ಜತೆಗೆ ಭಾರತದ ಕೆಲವೆಡೆ ಕ್ಷಣಗಳ ಕಾಲ ಭೂಮಿ ನಡುಗಿದೆ.
ಭಾರತದ ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಜಮ್ಮು-ಕಾಶ್ಮೀರದ ಶ್ರೀನಗರ ಸೇರಿಉತ್ತರ ಭಾರತದ ಹಲವು ಭಾಗಗಳಲ್ಲಿ ಪ್ರಬಲ ಮುನ್ನೆಚ್ಚರಿಕೆ ಕಂಪನಗಳು ಜನರನ್ನು ಆತಂಕಕ್ಕೀಡು ಮಾಡಿವೆ. ಜನರು ತಮ್ಮ ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿಬಂದ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಗಳು ಇನ್ನು ಅಧಿಕೃತವಾಗಿ ಹೊರಬಿದ್ದಿಲ್ಲ. ಆಳದಲ್ಲಿ ಕಂಪನ ಸಂಭವಿಸಿರುವುದರಿಂದ ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿವೆ ಎಂದು ಅಂದಾಜಿಸಲಾಗಿದೆ.
ವೆನೆಜುವೆಲಾದಲ್ಲಿ ಭಾರೀ ಭೂಕಂಪ: ಅವಶೇಷಗಳಡಿಯಲ್ಲಿ ಸಿಲುಕಿದ್ದ ನವಜಾತ ಶಿಶುವಿನ ರಕ್ಷಣೆ
ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಈಶಾನ್ಯ ಅಫ್ಘಾನಿಸ್ತಾನದ ಜುರ್ಮ್‌ನಿಂದ 43 ಕಿಲೋ ಮೀಟರ್ ದಕ್ಷಿಣಕ್ಕೆ ಭೂಕಂಪ ಸಂಭವಿಸಿದೆ. ಉತ್ತರ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಸ್ವಾತ್ ಜಿಲ್ಲೆಯಲ್ಲಿ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಹೋದರು ಎಂದು ಹೇಳಲಾಗಿದೆ.
ಸ್ವಾತ್‌ನಲ್ಲಿ ಭೂಕಂಪ ತುಂಬಾ ದೊಡ್ಡದಾಗಿತ್ತು. ಬಹಳ ಸಮಯದವರೆಗೆ ಭೂಮಿ ಅಲುಗಾಡಿದೆ. ಜನರು ತಮ್ಮ ಮನೆಗಳಿಂದ ಹೊರಬಂದರು. ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿ ಅಳುತ್ತಿರುವುದು ಕಂಡುಬಂದಿತು ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.