ರೋಮ್, ಮಾ. 31: ಇರಾನ್ ವಿರುದ್ಧ ಕಾರ್ಯಾಚರಣೆಗಾಗಿ ಸಿಸಿಲಿಯಲ್ಲಿರುವ ಪ್ರಮುಖ ವಾಯುನೆಲೆಯನ್ನು ಬಳಸಲು ಅಮೆರಿಕದ ವಿಮಾನಗಳಿಗೆ ಇಟಲಿ ಅನುಮತಿ ನಿರಾಕರಿಸಿದೆ. ಇದು ಸ್ಪೇನ್ (Spain) ನಂತರ ಅಮೆರಿಕಕ್ಕೆ ಮಿಲಿಟರಿ ಸೌಲಭ್ಯಗಳ ಪ್ರವೇಶವನ್ನು ನಿರಾಕರಿಸಿದ ನಾಟೊ (NATO) ಮಿತ್ರ ರಾಷ್ಟ್ರ ಎನ್ನುವುದು ವಿಶೇಷ. ಇಲ್ಲಿಯವರೆಗೆ ಯುರೋಪಿಯನ್ ಯೂನಿಯನ್ (EU) ರಾಷ್ಟ್ರಗಳು ಇರಾನ್ ಸಂಘರ್ಷದಲ್ಲಿ ಭಾಗಿಯಾಗುವ ಯಾವುದೇ ಇಚ್ಛೆಯನ್ನು ತೋರಿಸಿಲ್ಲ. ಇದು ಡೊನಾಲ್ಡ್ ಟ್ರಂಪ್ (Donald Trump) ಆಡಳಿತದೊಳಗೆ ಉದ್ವಿಗ್ನತೆಗೆ ಕಾರಣವಾಗಿದೆ.
ಮಧ್ಯಪ್ರಾಚ್ಯಕ್ಕೆ ತೆರಳುವ ಮೊದಲು ಸಿಸಿಲಿಯಲ್ಲಿರುವ ಸಿಗೊನೆಲ್ಲಾ ವಾಯು ನಿಲ್ದಾಣದಲ್ಲಿ ಕೆಲವು ಅಮೆರಿಕದ ಬಾಂಬರ್ ವಿಮಾನಗಳನ್ನು ಇಳಿಸಲು ಟ್ರಂಪ್ ಆಡಳಿತ ಅನುಮತಿ ಕೋರಿತ್ತು ಎಂದು ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ವರದಿ ಮಾಡಿದೆ. ಸಿಗೊನೆಲ್ಲಾ ವಾಯು ನಿಲ್ದಾಣವು ಇಟಲಿಯ ವಾಯುನೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಅಮೆರಿಕ ಅದನ್ನು ನೌಕಾ ನೆಲೆಯಾಗಿ ಬಳಸಲು ಮುಂದಾಗಿದೆ.
ನಿರಾಕರಣೆಗೆ ಯಾವುದೇ ಔಪಚಾರಿಕ ಕಾರಣವನ್ನು ಇಟಲಿ ನೀಡಿಲ್ಲ. ಅದಾಗ್ಯೂ ಅಮೆರಿಕವು ಇಟಲಿಯ ಜಾರ್ಜಿಯಾ ಮೆಲೋನಿ ಸರ್ಕಾರವನ್ನು ಮುಂಚಿತವಾಗಿ ಸಂಪರ್ಕಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಮಾನವು ಸಿಸಿಲಿಗೆ ಹೋಗುವ ಮಾರ್ಗದಲ್ಲಿದ್ದಾಗ ಅಮೆರಿಕವು ವಿಮಾನವನ್ನು ಇಳಿಸಲು ಅನುಮತಿ ಕೋರಿದೆ ಎಂದು ವರದಿ ತಿಳಿಸಿದೆ.
ಮಧ್ಯಪ್ರಾಚ್ಯ ಯುದ್ಧಕ್ಕೆ ಶೀಘ್ರದಲ್ಲೇ ವಿರಾಮ; ಅಮೆರಿಕ-ಇರಾನ್ ನಡುವಿನ ಮಾತುಕತೆ ಫಲಪ್ರದ
1950ರಲ್ಲಿ ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಅಮೆರಿಕ ನೌಕಾಪಡೆಯು ಈ ನೆಲೆಯನ್ನು ಲಾಜಿಸ್ಟಿಕಲ್ ಮತ್ತು ತರಬೇತಿ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು. ಯುದ್ಧ ಅಥವಾ ಸಂಘರ್ಷಕ್ಕಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಈ ನೆಲೆಯನ್ನು ಸಾರಿಗೆ ಕೇಂದ್ರವಾಗಿ ಬಳುವಂತಿಲ್ಲ ಎಂದು ಅದು ನಿರ್ದಿಷ್ಟವಾಗಿ ಹೇಳುತ್ತದೆ. ಸಂಸತ್ತಿನ ಅನುಮೋದನೆಯೊಂದಿಗೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇದನ್ನು ಅನುಮತಿಸಬಹುದು.
ಇಟಲಿಯ ಈ ನಿರ್ಧಾರಕ್ಕೇನು ಕಾರಣ?
ಇಟಲಿಯು ಅಮೆರಿಕದ ಪ್ರಮುಖ ನ್ಯಾಟೋ ಮಿತ್ರ ರಾಷ್ಟ್ರವಾಗಿದ್ದರೂ, ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದಲ್ಲಿ ನೇರ ಅಥವಾ ಪರೋಕ್ಷವಾಗಿ ಭಾಗಿಯಾಗಲು ತಯಾರಿಲ್ಲ. ಇರಾನ್ ಯುದ್ಧದಲ್ಲಿ ಭಾಗಿಯಾಗಿರುವ ಅಮೆರಿಕದ ಮಿಲಿಟರಿ ವಿಮಾನಗಳು ತನ್ನ ವಾಯುಪ್ರದೇಶ ಮತ್ತು ಮಿಲಿಟರಿ ನೆಲೆಗಳನ್ನು ಬಳಸುವುದನ್ನು ಸ್ಪೇನ್ ನಿಷೇಧಿಸಿದ ಒಂದು ದಿನದ ನಂತರ ಇಟಲಿಯ ಈ ನಿರ್ಧಾರ ಹೊರ ಬಿದ್ದಿದೆ. ಇರಾನ್‌ನಲ್ಲಿನ ಯುದ್ಧಕ್ಕೆ ಸಂಬಂಧಿಸಿದ ಕ್ರಮಗಳಿಗೆ ಮಿಲಿಟರಿ ನೆಲೆಗಳ ಬಳಕೆಯನ್ನು ಅಥವಾ ವಾಯುಪ್ರದೇಶದ ಬಳಕೆಯನ್ನು ನಾವು ಅಧಿಕೃತಗೊಳಿಸುವುದಿಲ್ಲ ಎಂದು ಸ್ಪೇನ್ ತಿಳಿಸಿತ್ತು.
ಈ ನಿರ್ಧಾರವು ಏಕಪಕ್ಷೀಯವಾಗಿ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿ ಪ್ರಾರಂಭವಾದ ಯುದ್ಧದಲ್ಲಿ ಭಾಗವಹಿಸುವುದಿಲ್ಲ ಅಥವಾ ಕೊಡುಗೆ ನೀಡುವುದಿಲ್ಲ ಎಂದು ಸ್ಪ್ಯಾನಿಷ್ ಸರ್ಕಾರ ಈಗಾಗಲೇ ತೆಗೆದುಕೊಂಡ ನಿರ್ಧಾರದ ಭಾಗವಾಗಿದೆ ಸ್ಪೇನ್‌ನ ಆರ್ಥಿಕ ಸಚಿವ ಕಾರ್ಲೋಸ್ ಕ್ಯುರ್ಪೊ ಹೇಳಿದ್ದರು.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ನಡೆಸಿದ ದಾಳಿಗಳನ್ನು ತೀವ್ರವಾಗಿ ಟೀಕಿಸಿದವರಲ್ಲಿ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಒಬ್ಬರಾಗಿದ್ದು, ಅವುಗಳನ್ನು ಅಜಾಗರೂಕ ಮತ್ತು ಕಾನೂನುಬಾಹಿರ ಎಂದು ಬಣ್ಣಿಸಿದ್ದರು.