ನವದೆಹಲಿ, ಡಿ. 4: ಬಾಂಗ್ಲಾದೇಶದ (Bangladesh) ಚಾಪೈನವಾಬ್‌ಗಂಜ್ ಜೈಲಿನಿಂದ ಸೋಮವಾರ ಬಿಡುಗಡೆಯಾದ ಒಂಭತ್ತು ತಿಂಗಳ ಗರ್ಭಿಣಿ ಸೋನಾಲಿ ಖಾತುನ್ ತನ್ನ ಎಂಟು ವರ್ಷದ ಮಗುವಿನೊಂದಿಗೆ ಭಾರತಕ್ಕೆ ಮರಳಲು ಕಾತುರದಿಂದ ಕಾಯುತ್ತಿದ್ದಾರೆ. ಅವರ ಪತಿ ಡ್ಯಾನಿಶ್ ಮಾತ್ರ ಬಾಂಗ್ಲಾದೇಶದಲ್ಲೇ ಇರಬೇಕಾಗಿದೆ. ಏಕೆಂದರೆ ಕೇಂದ್ರ ಸರ್ಕಾರ ಅವರ ಪೌರತ್ವವನ್ನು ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಪ್ರಕರಣ ಬಾಕಿ ಇರುವವರೆಗೆ ಮಾನವೀಯ ಆಧಾರದ ಮೇಲೆ ಗರ್ಭಿಣಿಯನ್ನು ಮರಳಿ ಕರೆತರಲು ಒಪ್ಪಿಕೊಂಡಿದೆ.
26 ವರ್ಷದ ಸೋನಾಲಿ ಖಾತುನ್ ಅವರನ್ನು ಆಕೆಯ ಮಗ ಮತ್ತು ಪತಿಯೊಂದಿಗೆ ದೆಹಲಿಯಿಂದ ಬಂಧಿಸಿ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಯಿತು. ಅಲ್ಲಿ ಬಾಂಗ್ಲಾದೇಶದ ಅಧಿಕಾರಿಗಳು ಅಕ್ರಮ ಪ್ರವೇಶ ಎಂದು ಪರಿಗಣಿಸಿ ಜೈಲಿಗೆ ಹಾಕಿದರು. ಸುಮಾರು 100 ದಿನಗಳ ಕಸ್ಟಡಿಯಲ್ಲಿದ್ದ ನಂತರ, ಡಿಸೆಂಬರ್ 1ರಂದು ಸ್ಥಳೀಯ ನ್ಯಾಯಾಲಯವು ಸೋನಾಲಿ ಮತ್ತು ಇತರ ಆರು ಜನರಿಗೆ ಜಾಮೀನು ನೀಡಿತು.
ಬಲಗೊಳ್ಳುತ್ತಿದೆ ಜೈಶ್ ಮಹಿಳಾ ಘಟಕ: 5,000ಕ್ಕೂ ಹೆಚ್ಚು ಮಹಿಳೆಯರಿಗೆ 500 ರೂ. ಶುಲ್ಕ
ಸೋನಾಲಿ ಮತ್ತು ಅವರ ಕುಟುಂಬವನ್ನು ಮರಳಿ ಕರೆತರಲು ಕಾನೂನು ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿರುವ ತೃಣಮೂಲ ಕಾಂಗ್ರೆಸ್ ಸಂಸದ ಸಮಿರುಲ್ ಇಸ್ಲಾಂ, ಕೇಂದ್ರವು ಅವರನ್ನು ಮರಳಿ ಕರೆತರಲು ಏನು ಮಾಡುತ್ತಿದೆ ಎಂಬುದರ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಬಂದಿಲ್ಲ ಎಂದು ಹೇಳಿದರು. ಬಂಗಾಳಿ ಮಾತನಾಡಿದ ಕಾರಣಕ್ಕಾಗಿ ಅವರನ್ನು ದೆಹಲಿಯಿಂದ ಬಾಂಗ್ಲಾದೇಶಕ್ಕೆ ಬಲವಂತವಾಗಿ ಗಡೀಪಾರು ಮಾಡಿದ್ದಕ್ಕೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಬೇಕು ಎಂದು ಅವರು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಆದೇಶ:
ಅವಳು ಭಾರತೀಯಳು. ಯಾರಾದರೂ ಬಂಗಾಳಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಅವರನ್ನು ಬಾಂಗ್ಲಾದೇಶಕ್ಕೆ ಬಲವಂತವಾಗಿ ಕಳುಹಿಸಲು ಸಾಧ್ಯವಿಲ್ಲ. ಆಕೆಯ ಪೋಷಕರ ಹೆಸರು SIR ಪಟ್ಟಿಯಲ್ಲಿದೆ. ಆಕೆಯ ಅಜ್ಜನ ಆಸ್ತಿ ನೋಂದಣಿ 1952ರ ಹಿಂದಿನದು. ಹೈಕೋರ್ಟ್ ಕೂಡ ಆಕೆಯ ಪರವಾಗಿ ಆದೇಶ ನೀಡಿದೆ. ಈಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿದೆ. ಕೇಂದ್ರ ಸರ್ಕಾರ ಈಗ ತ್ವರಿತವಾಗಿ ಕಾರ್ಯನಿರ್ವಹಿಸಬೇಕು. ಏಕೆಂದರೆ ಆಕೆ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಯಾವುದೇ ಸಮಯದಲ್ಲಿ ಹೆರಿಗೆ ನೋವು ಅನುಭವಿಸಬಹುದು ಎಂದು ಅವರು ತಿಳಿಸಿದರು.
ಜೂನ್ 18ರಂದು ದೆಹಲಿ ಪೊಲೀಸರು ಬಂಧಿಸಿದ ನಂತರ ಜೂನ್ 27ರಂದು ಗಡಿಯಾಚೆಗೆ ತಳ್ಳಲ್ಪಟ್ಟ ಸೋನಾಲಿ ಮಾತ್ರವಲ್ಲದೆ, ಅವರ ಪತಿ ಮತ್ತು ಇನ್ನೊಂದು ಕುಟುಂಬ, ಸ್ವೀಟಿ ಬೀಬಿ, ಪತಿ ಮತ್ತು ಅವರ ಇಬ್ಬರು ಮಕ್ಕಳು ಕೂಡ ಭಾರತೀಯ ಪ್ರಜೆಗಳು ಎಂದು ಇಸ್ಲಾಂ ಹೇಳಿದರು. ಸೋನಾಲಿಯ ಕುಟುಂಬದ ಸ್ನೇಹಿತನೂ ಆಗಿರುವ ಮೊಫಿಜುಲ್ ಇಸ್ಲಾಂ, ಬಂಧನದ ನಂತರ ಚಾಪೈನವಾಬ್‌ಗಂಜ್‌ನಲ್ಲಿ ವಾಸಿಸುತ್ತಿದ್ದರು.
ಮೊಫಿಜುಲ್ ಅವರ ವೀಸಾ ಗುರುವಾರ (ಡಿಸೆಂಬರ್ 4) ಮುಕ್ತಾಯಗೊಳ್ಳುತ್ತಿರುವುದರಿಂದ ಅವರು ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ತೃಣಮೂಲ ಸಂಸದರು ಹೇಳಿದರು. ಕೇಂದ್ರದಿಂದ ತ್ವರಿತ ಕ್ರಮಕ್ಕಾಗಿ ನಾವು ಆಶಿಸುತ್ತಿದ್ದೇವೆ. ಆದರೆ ಅವರಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಅವರು ಹೇಳಿದರು. ಸೋನಾಲಿಯ ತಂದೆ ಭೋದು ಶೇಖ್, ತೃಣಮೂಲ ಸಂಸದರ ಸಹಾಯದಿಂದ ಅರ್ಜಿ ಸಲ್ಲಿಸಿದ್ದರು.
ಬಾಂಗ್ಲಾದೇಶದ ಜೈಲಿನಲ್ಲಿರುವ ಇತರ ಆರು ಜನರೊಂದಿಗೆ ಸೋನಾಲಿ ಅವರ ಪೌರತ್ವವನ್ನು ದೃಢಪಡಿಸಿದೆ. ಮತ್ತು ಅವರನ್ನು ಗಡೀಪಾರು ಮಾಡುವುದನ್ನು ಕಾನೂನುಬಾಹಿರ ಎಂದು ಕರೆದ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಕೇಂದ್ರ ಸರ್ಕಾರ ಪ್ರಶ್ನಿಸಿದ ನಂತರ ಶೇಖ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.
ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರದ ಮೇಲ್ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಮೊದಲು ಸೋನಾಲಿ ಮತ್ತು ಅವರ ಮಗನನ್ನು ಹಿಂತಿರುಗಲು ಬಿಡುವುದನ್ನು ಪರಿಗಣಿಸುವಂತೆ ಸೂಚಿಸಿತು. ಸುಪ್ರೀ ಕೋರ್ಟ್ ಆದೇಶಕ್ಕೆ, ಮಾನವೀಯ ಆಧಾರದ ಮೇಲೆ ಸೋನಾಲಿಯನ್ನು ಹಿಂದಿರುಗಿಸಲು ಪ್ರಾರಂಭಿಸುವುದಾಗಿ ಕೇಂದ್ರವು ಭರವಸೆ ನೀಡಿತು.
ದೇಶಾದ್ಯಂತ 200ಕ್ಕೂ ಹೆಚ್ಚು ವಿಮಾನ ರದ್ದು: ಪರದಾಡಿದ ಇಂಡಿಗೋ ಪ್ರಯಾಣಿಕರು
ಬಾಂಗ್ಲಾದೇಶದ ಚಾಪೈನವಾಬ್‌ಗಂಜ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯವು ಸೋನಾಲಿ, ಅವರ ಮಗ, ಅವರ ಪತಿ, 32 ವರ್ಷದ ಸ್ವೀಟಿ ಬೀಬಿ ಮತ್ತು ಅವರ ಇಬ್ಬರು ಗಂಡು ಮಕ್ಕಳಿಗೆ (6 ಮತ್ತು 16 ವರ್ಷ ವಯಸ್ಸಿನವರು) ಮಾನವೀಯ ಆಧಾರದ ಮೇಲೆ ಜಾಮೀನು ನೀಡಿದೆ. ಬಾಂಗ್ಲಾದೇಶ ನ್ಯಾಯಾಲಯದ ಆದೇಶದಲ್ಲಿ, ಅವರು ಭಾರತೀಯ ನಾಗರಿಕರು, ಅವರನ್ನು ಬಿರ್ಭೂಮ್ ಗಡಿಯ ಮೂಲಕ ಬಲವಂತವಾಗಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಯಿತು ಎಂದು ಉಲ್ಲೇಖಿಸಲಾಗಿದೆ.