Digital Love Fraud: ಪ್ರೀತಿ-ಪ್ರೇಮದ ಹೆಸರಲ್ಲಿ Online ಮೋಸದಾಟ; ವಂಚಕರಿಗೆ ಇದೀಗ AI ಬಲ
ಆನ್‌ಲೈನ್ ವಂಚನೆ ಇಂದು ಸರ್ವವ್ಯಾಪಿಯಾಗಿದೆ. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಡೇಟಿಂಗ್ ಅಪ್ಲಿಕೇಶಗಳಲ್ಲಿ ತಮಗೊಂದು ಸೂಕ್ತ ಸಂಗಾತಿಯನ್ನು ಅರಸುವ ಆಧುನಿಕ ರೋಮಿಯೋ-ಜ್ಯೂಲಿಯೆಟ್‌ಗಳನ್ನು ಈ ಆನ್‌ಲೈನ್ ವಂಚಕರು ಟಾರ್ಗೆಟ್ ಮಾಡಿಕೊಂಡಿದ್ದಾರೆ! ಇದು ಹೇಗೆಂಬುದರ ಒಂದು ವಿಶ್ಲೇಷಣಾತ್ಮಕ ವರದಿ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ನವದೆಹಲಿ: ಆನ್ ಲೈನ್ ಮೋಸ (Online Fraud) ಎಂಬುದು ಇದೀಗ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿದೆ. ಹಣಕಾಸಿನ ಮೋಸ, ಮ್ಯಾಟ್ರಿಮೊನಿ ಮೋಸ, ಡಿಜಿಟಲ್ ಅರೆಸ್ಟ್ (Digital Arrest), ನಕಲಿ ವಿಡಿಯೊ ತೋರಿಸಿ ಬ್ಲ್ಯಾಕ್‌ಮೇಲ್... ಹೀಗೆ ಹೇಳುತ್ತಾ ಹೋದರೆ ಈ ಅನ್‌ಲೈನ್ ಮೋಸದಾಟದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ವ್ಯಾಲೆಂಟೈನ್ಸ್ ಡೇ (Valentine’s Day) ಇತ್ತೀಚೆಗಷ್ಟೇ ಮುಗಿದಿದೆ. ಆದರೆ ಈ ಬಾರಿ ವ್ಯಾಲೆಂಟೈನ್ ಡೇಗೆ ಆನ್‌ಲೈನ್ ಮೋಸದ ಕಳಂಕ ಅಂಟಿಕೊಂಡಿದೆ. ಮೆಕಫೆ ಇಂಡಿಯಾ (McAfee India) ನಡೆಸಿರುವ ಹೊಸ ಅಧ್ಯಯನವೊಂದರಿಂದ ಬೆಳಕಿಗೆ ಬಂದಿರುವ ಅಂಶದ ಪ್ರಕಾರ ಕೃತಕ ಬುದ್ಧಿಮತ್ತೆ ಅಥವಾ ಎಐ (AI) ಬೆಂಬಲಿತ ರೊಮ್ಯಾನ್ಸ್ ಸ್ಕ್ಯಾಮ್, ಫೇಕ್ ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಡೀಪ್ ಫೇಕ್ (deep fake) ಕರಾಮತ್ತುಗಳು ಈ ಬಾರಿ ಪ್ರೇಮಿಗಳನ್ನು ಬೇರೆಲ್ಲದವುಗಳಿಗಿಂತ ಹೆಚ್ಚಾಗಿ ಕಾಡಿದೆಯಂತೆ!
ಈ ಸ್ಕ್ಯಾಮ್‌ಗಳನ್ನು ನೈಜ ವಿಷಯಗಳಿಗಿಂತ ಬೇರ್ಪಡಿಸಿ ನೋಡಲು ಕಷ್ಟಕರವಾಗಿರುವ ಕಾರಣ, ಇಲ್ಲಿ ನಿಜ ಯಾವುದು ಫೇಕ್ ಯಾವುದು ಎಂಬುದನ್ನು ತಿಳಿದುಕೊಳ್ಳಲು ಸಹ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರಲ್ಲಿ 61% ಜನರು ತಾವು ಎಐ ಚಾಟ್ ಬೋಟ್ (AI Chat Boat) ಜಾಲಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಿಲುಕುವ ಸಾಧ್ಯತೆಗಳನ್ನು ಒಪ್ಪಿಕೊಂಡಿದ್ದು, 51% ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಡೇಟಿಂಗ್ ಪ್ಲ್ಯಾಟ್ ಫಾರಂಗಳಲ್ಲಿ ತಾವು ನಿಜವಾದ ಸಂಗಾತಿ ಎಂದು ಹೇಳಿಕೊಳ್ಳುವ ಚಾಟ್ ಬೋಟ್‌ಗಳು ನೇರವಾಗಿ ತಮಗೆ ಅಥವಾ ತಮಗೆ ಗೊತ್ತಿರುವವರನ್ನು ಸಂಪರ್ಕಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಇನ್ನು ಸುಮಾರು 38% ಜನ ಭಾವನಾತ್ಮಕವಾಗಿ ಎಐ ಚಾಟ್ ಬೋಟ್‌ಗಳನ್ನು ಹಚ್ಚಿಕೊಂಡವರು ಸುಲಭವಾಗಿ ಈ ಮೋಸದಾಟಗಳ ಜಾಲಕ್ಕೆ ತುತ್ತಾಗುವ ಸಾಧ್ಯತೆಗಳನ್ನು ಒಪ್ಪಿಕೊಂಡಿದ್ದಾರೆ.
ಫರ್ಸ್ಟ್ ಪೋಸ್ಟ್ (First Post) ವರದಿ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್‌ಗಳ ಜತೆಗೆ ಹಲವು ಭಾರತೀಯರು ಸೋಶಿಯಲ್ ಮೀಡಿಯಾ (Social Media) ಮೂಲಕ ತಮ್ಮ ಪ್ರೀತಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಇನ್‌ಸ್ಟಾಗ್ರಾಂನದ್ದು ಸಿಂಹಪಾಲಾಗಿದ್ದು, ಸುಮಾರು 85% ಬಳಕೆದಾರರು ಇದರಲ್ಲಿ ತಮ್ಮ ಪ್ರೀತಿಯ ಸಂಗಾತಿಯನ್ನು ಹುಡುಕಿಕೊಂಡಿದ್ದಾರೆ. ಇದರ ನಂತರದ ಸ್ಥಾನದಲ್ಲಿ ವಾಟ್ಸ್‌ಆ್ಯಪ್ ಇದ್ದು ತಮ್ಮ ಪ್ರೀತಿಯ ಹುಡುಕಾಟಕ್ಕಾಗಿ 55% ಜನರು ಇದನ್ನು ಬಳಸಿಕೊಂಡಿದ್ದಾರೆ. ನಂತರದ ಸ್ಥಾನಗಳಲ್ಲಿ, ಟೆಲಿಗ್ರಾಂ (50%) ಮತ್ತು ಸ್ನ್ಯಾಪ್ ಚಾಟ್ (46%)ಗಳಿವೆ. ಇನ್ನು ಡೇಟಿಂಗ್ ಅಪ್ಲಿಕೇಶನ್‌ಗಳ ಪೈಕಿ ಟಿಂಡರ್ ಜನಪ್ರಿಯವಾಗಿದ್ದು, 61% ಬಳಕೆದಾರರು ತಮ್ಮ ಪ್ರೀತಿಯನ್ನು ಮತ್ತು ಸಂಗಾತಿಯನ್ನು ಇಲ್ಲಿ ಅರಸಿದ್ದಾರೆ. ಇದರ ನಂತರದ ಸ್ಥಾನದಲ್ಲಿ ಫೇಸ್‌ಬುಕ್ ಡೇಟಿಂಗ್, ಬಂಬ್ಲ್ ಮತ್ತು ಮ್ಯಾಚ್‌ಗಳಿವೆ.
ಇದನ್ನೂ ಓದಿ: Sikander Poster Out: ಸಲ್ಮಾನ್-ರಶ್ಮಿಕಾ ನಟನೆಯ ʼಸಿಕಂದರ್ʼ ಚಿತ್ರದ ಪೋಸ್ಟರ್ ಔಟ್; ರಿಲೀಸ್ ದಿನಾಂಕ ಫಿಕ್ಸ್
ಮ್ಯಾಗಿ ಕೆ ಎಂಬ 25 ವರ್ಷದ ಕಂಪ್ಯೂಟರ್ ಪ್ರೋಗ್ರಾಮರ್ ತನ್ನ ಪ್ರೀತಿಯನ್ನು ಆನ್‌ಲೈನ್ ಮೂಲಕ ಸಂಪಾದಿಸಿಕೊಳ್ಳಬಹುದೆಂದು ನಂಬಿದ್ದಾಳೆ. ಈಕೆ ಪ್ರತೀ ದಿನ ತನ್ನ ನಂಬುಗೆಯ ಒಬ್ಬರು ವ್ಯಕ್ತಿಯೊಂದಿಗೆ ಚಾಟ್ ಮಾಡುವ ಮೂಲಕ ಆಕೆಗೆ ಈ ನಂಬುಗೆ ಮೂಡಿದೆ. ಆದರೆ ಯಾವಾಗ ಆಕೆ ಆ ವ್ಯಕ್ತಿಯನ್ನು ಭೇಟಿಯಾಗಬೇಕೆಂದು ಬಯಸಿದಳೋ, ಆತ ಅದನ್ನು ತಪ್ಪಿಸಿಕೊಳ್ಳುತ್ತಲೇ ಬಂದ! ವಿಮಾನ ಮಿಸ್ ಆಯಿತು ಎಂದು ಕಥೆ ಹೇಳುವುದು, ಇನ್ನೊಂದು ವಿಮಾನದಲ್ಲಿ ಟಿಕೆಟ್ ಬುಕ್ ಮಾಡಲು ಹಣ ಕೇಳುವುದು ಮುಂತಾದ ನಾಟಕಗಳನ್ನು ಆತ (ಅದು?) ಮಾಡಲಾರಂಭಿಸಿದ (ತು!) . ಆದರೆ ತನ್ನ ಪ್ರೀತಿಯನ್ನು ನೋಡಲೇಬೇಕೆಂಬ ಹುಕಿಗೆ ಬಿದ್ದ ಮ್ಯಾಗಿ ಆತನಿಗೆ ಹಣವನ್ನು ಕಳುಹಿಸಿದ್ದಳು. ಆದರೆ ಹಣ ಸಿಕ್ಕಿದ ಕೂಡಲೇ ಈಕೆಯ ಅಗೋಚರ ಪ್ರೀತಿಪಾತ್ರ ವ್ಯಕ್ತಿ ಮಂಗಮಾಯವಾಗಿದ್ದ. ಆತನ ಸೋಶಿಯಲ್ ಮೀಡಿಯಾ ಅಕೌಂಟ್ ಸಹ ಡಿಲೀಟ್ ಆಗಿತ್ತು.
ತಾನು ಮೋಸ ಹೋದ ವಿಷಯ ಗೊತ್ತಾದ ಬಳಿಕ ಮ್ಯಾಗಿ ಈ ಬಗ್ಗೆ ಮೆಕಫೆಯಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ‘ನಾನು ನನ್ನ ಮನಸ್ಸಿನ ಭಾವನೆಯನ್ನು ತಿರಸ್ಕರಿಸಿ, ಆತನಿಗೆ 1,200 ಡಾಲರ್ ಹಣ ಕಳುಹಿಸಿದೆ. ಬಳಿಕ ಆತ ಮಾಯವಾದ. ಈ ವಂಚನೆ ಬಗ್ಗೆ ನಾನು ರಿಪೋರ್ಟ್ ಮಾಡಿದ ಸಂದರ್ಭದಲ್ಲಿ, ಆತನ ಫೊಟೋಗಳೆಲ್ಲಾ ಎಐ ಜನರೇಟೆಡ್ ಎಂದು ಪೊಲೀಸರು ನನಗೆ ತಿಳಿಸಿದರು. ಆತ ನೈಜ ವ್ಯಕ್ತಿಯಾಗಿರಲಿಲ್ಲ. ಇಲ್ಲಿ ಭಯಾನಕ ವಿಚಾರವೆಂದರೆ, ನಾನು ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿಯೊಬ್ಬನನ್ನು ನಂಬಿ ಮೋಸ ಹೋಗಿದ್ದೆ!’ ಎಂದು ಆಕೆ ತನಗಾದ ಮೋಸದ ವಿಚಾರವನ್ನು ವಿವರವಾಗಿ ಬರೆದುಕೊಂಡಿದ್ದಾಳೆ.
ಡೇಟಿಂಗ್ ಮೋಸಗಳ ಬಗ್ಗೆ ಮಾತನಾಡಿರುವ ಮೆಕಫೆಯ ಚೀಫ್ ಟೆಕ್ನಾಲಜಿ ಆಫಿಸರ್ ಸ್ಟೀವ್ ಗ್ರೋಬ್ ಮ್ಯಾನ್ ಹೇಳುವಂತೆ, ‘ದುರದೃಷ್ಟವಶಾತ್, ಸೈಬರ್ ವಂಚಕರು ತಮ್ಮ ಬೇಟೆಯನ್ನು ಬಲೆಗೆ ಬೀಳಿಸಿಕೊಳ್ಳಲು ಎಐಯನ್ನು ಬಳಸಿಕೊಳ್ಳುತ್ತಿದ್ದಾರೆಂದು ನಮಗೆ ತಿಳಿದಿದೆ. ವ್ಯಾಲೆಂಟೈನ್ ಡೇಯಂತಹ ಸಂದರ್ಭಗಳಲ್ಲಿ ಪ್ರೀತಿಯನ್ನು ಅರಸುವವರು ಹೆಚ್ಚಿನ ಸಮಯ ಆನ್ ಲೈನ್ ನಲ್ಲಿ ಕಳೆಯುತ್ತಾರೆ. ಇದೇ ಸಂದರ್ಭವನ್ನು ಬಳಸಿಕೊಳ್ಳುವ ಸ್ಕ್ಯಾಮರ್ ಗಳು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಅಗೋಚರ ವ್ಯಕ್ತಿಯನ್ನು ಸೃಷ್ಟಿಸಿ, ಅದನ್ನು ನಾವು ನಂಬುವಂತೆ ಮಾಡಿ ನಮ್ಮ ಹಣ ಮತ್ತು ಗೌಪ್ಯ ಮಾಹಿತಿಗಳನ್ನು ಲಪಟಾಯಿಸುತ್ತಾರೆ. ಆರೋಗ್ಯಕರ ರಿತಿಯಲ್ಲಿ ನಿಮ್ಮ ಪ್ರೀತಿಯ ವಿಚಾರಗಳನ್ನು ಕಾಪಾಡಿಕೊಳ್ಳುವಂತೆ ನಾವು ಜನರಿಗೆ ಮಾಹಿತಿ ಕೊಡುತ್ತೇವೆ. ಸೂಕ್ಷ್ಮ ವಿಚಾರಗಳನ್ನು ಆನ್ ಲೈನ್ ನಲ್ಲಿ ಹಂಚಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ, ಮತ್ತು ನಿಮ್ಮ ಖಾಸಗಿತನ, ಗುರುತು ಹಾಗೂ ವೈಯಕ್ತಿಕ ಮಾಹಿತಿಗಳನ್ನು ಕಾಪಾಡಿಕೊಳ್ಳಲು ಸರಿಯಾದ ಟೂಲ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳುತ್ತಿರಬೇಕು’ ಎಂದು ಸ್ಟೀವ್ ಹೇಳುತ್ತಾರೆ.
ವರದಿಗಳ ಪ್ರಕಾರ 70% ಜನ ಉಡುಗೊರೆ ಅಥವಾ ಹಣವನ್ನು ಕಳುಹಿಸುವುದನ್ನು ಇಷ್ಟಪಡುತ್ತಾರೆ. ಇನ್ನು, ವಂಚಕರು ಸೆಲೆಬ್ರಿಟಿಗಳಂತೆಯೂ ನಟಿಸಿ ನಮ್ಮನ್ನು ಮೋಸಗೊಳಿಸುವ ಸಾಧ್ಯತೆಗಳಿವೆ. 42% ಜನರು ಇಂತಹ ಆನ್ ಲೈನ್ ಪ್ರೀತಿಯ ವಂಚನೆಗೆ ಬಲಿಯಾಗಿದ್ದಾರೆ. ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಹಾಗೂ 48% ಜನರು ತಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲಾಗಿದೆ ಎಂದು ಅಲವತ್ತುಕೊಂಡಿದ್ದಾರೆ!