Sikander Poster Out: ಸಲ್ಮಾನ್-ರಶ್ಮಿಕಾ ನಟನೆಯ ʼಸಿಕಂದರ್ʼ ಚಿತ್ರದ ಪೋಸ್ಟರ್ ಔಟ್; ರಿಲೀಸ್ ದಿನಾಂಕ ಫಿಕ್ಸ್
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಸಲ್ಮಾನ್ ಖಾನ್-ರಶ್ಮಿಕಾ ಮಂದಣ್ಣ ನಟನೆಯ ʼಸಿಕಂದರ್ʼ ಕೂಡ ಒಂದು. ಜನಪ್ರಿಯ ನಿರ್ದೇಶಕ ಎ.ಆರ್.ಮುರುಗದಾಸ್ ನಿರ್ದೇಶಕ ಎ.ಆರ್.ಮುರುಗದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಈಗಾಗಲೇ ಟೀಸರ್ ಮೂಲಕ ಗಮನ ಸೆಳೆದಿದೆ. ಇದೀಗ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ ಚಿತ್ರದ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ.

ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್.

ಮುಂಬೈ: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಬಾಲಿವುಡ್‌ನ ʼಸಿಕಂದರ್ʼ (Sikander) ಕೂಡ ಒಂದು. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಮತ್ತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿಗೆ ಒಂದಾಗುತ್ತಿರುವ ಈ ಚಿತ್ರಕ್ಕೆ ಜನಪ್ರಿಯ ನಿರ್ದೇಶಕ ಎ.ಆರ್.ಮುರುಗದಾಸ್ (AR Murugadas) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಲ್ಮಾನ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಟೀಸರ್ ಮೂಲಕ ಭರ್ಜರಿ ಗಿಫ್ಟ್ ನೀಡಿದ ಚಿತ್ರತಂಡ ಇದೀಗ ಪೋಸ್ಟರ್ ರಿಲೀಸ್ ಮಾಡಿ ಬಿಡುಗಡೆ ದಿನಾಂಕವನ್ನು ಅಧಿಕೃತಗೊಳಿಸಿದೆ (Sikander Poster). ಕೈಯಲ್ಲಿ ಚೂರಿ ಹಿಡಿದು ಸಲ್ಮಾನ್ ಖಾನ್ ರೋಷದಿಂದ ದಿಟ್ಟಿಸುತ್ತಿರುವುದು ಪೋಸ್ಟರ್‌ನಲ್ಲಿ ಕಂಡು ಬಂದಿದೆ. 2025ರ ಈದ್ ದಿನದಂದು ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಪೋಸ್ಟರ್‌ನಲ್ಲಿ ಬಹಿರಂಗಪಡಿಸಲಾಗಿದೆ.
ಮಾ. 28ರಂದು ಸಿಕಂದರ್ ರಿಲೀಸ್
ಈ ಮೂಲಕ ಚಿತ್ರ ಮಾ. 28ರಂದು ರಿಲೀಸ್ ಆಗಲಿದೆ ಎನ್ನುವುದನ್ನು ಸಿನಿತಂಡ ಮತ್ತೊಮ್ಮೆ ಸ್ಪಷ್ಪಡಿಸಿದೆ. ಜತೆಗೆ ಫೆ. 27ರಂದು ಸರ್‌ಪ್ರೈಸ್ ನೀಡುವುದಾಗಿ ತಿಳಿಸಿದೆ. ಬಹುಶಃ ಅಂದು ಟ್ರೈಲರ್ ಅಥವಾ ಹಾಡು ಬಿಡುಗಡೆಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದ ʼಸಿಕಂದರ್ʼ ರಿಲೀಸ್ ಮುಂದೂಡಲಾಗುತ್ತದೆ ಎನ್ನುವ ವದಂತಿ ಹಬ್ಬಿತ್ತು. ಇದೀಗ ಚಿತ್ರತಂಡ ವದಂತಿಗೆಲ್ಲ ಬ್ರೇಕ್ ಹಾಕಿದೆ.
ಸಾಜಿದ್ ನಾಡಿಯಾವಾಲ ಅವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಇದು ಕೂಡ ಒಂದು. ಮೊದಲ ಬಾರಿಗೆ ಸಲ್ಮಾನ್ ಖಾನ್ ಚಿತ್ರವನ್ನು ಎ.ಆರ್.ಮುರುಗದಾಸ್ ನಿರ್ದೇಶಿಸುತ್ತಿದ್ದು, ಈ ಕಾರಣಕ್ಕೂ ಕುತೂಹಲ ಕೆರಳಿಸಿದೆ. ಇದೊಂದು ಪಕ್ಕಾ ಆ್ಯಕ್ಷನ್-ಪ್ಯಾಕ್ಡ್ ಚಿತ್ರ ಎನ್ನುವ ಸೂಚನೆ ಟೀಸರ್, ಪೋಸ್ಟರ್‌ನಲ್ಲೇ ಸಿಕ್ಕಿದೆ. ಇದರ ಜತೆಗೆ ಕ್ಯೂಟ್ ಲವ್ ಸ್ಟೋರಿಯೂ ಇದೆ ಎನ್ನಲಾಗಿದೆ. ರಶ್ಮಿಕಾ ಪಾತ್ರವನ್ನು ವಿಶೇಷವಾಗಿ ಕಟ್ಟಿಕೊಡಲಾಗುತ್ತಿದೆ ಎಂದೂ ವರದಿಯೊಂದು ತಿಳಿಸಿದೆ.
ರಶ್ಮಿಕಾ ನಟನೆಯ ʼಪುಷ್ಪ 2ʼ ಪ್ಯಾನ್ ಇಂಡಿಯಾ ಚಿತ್ರ ಕಳೆದ ವರ್ಷಾಂತ್ಯದಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಇದರ ಜತೆಗೆ ಇತ್ತೀಚೆಗೆ ರಿಲೀಸ್ ಆದ ಬಾಲಿವುಡ್ ಸಿನಿಮಾ ʼಛಾವಾʼ ಕೂಡ ಗಲ್ಲಾ ಪೆಟ್ಟಿಗೆ ದೋಚುತ್ತಿದೆ. 4 ದಿನಗಳಲ್ಲಿ 140 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 2023ರಲ್ಲಿ ತೆರೆಕಂಡ, ರಣಬೀರ್ ಕಪೂರ್ ಜತೆಗಿನ ʼಅನಿಮಲ್ʼ ಚಿತ್ರ ಕೂಡ ಬ್ಲಾಕ್ ಬ್ಲಸ್ಟರ್ ಎನಿಸಿಕೊಂಡಿತ್ತು. ಹೀಗೆ ಬ್ಯಾಕ್‌ಟು ಬ್ಯಾಕ್ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಲ್ಮಾನ್‌ಗೆ ಜೋಡಿಯಾಗಿದ್ದಾರೆ. ಸಲ್ಮಾನ್ ಅವರ ಇತ್ತೀಚಿನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ಹೀಗಾಗಿ ʼಸಿಕಂದರ್ʼ ಮೂಲಕ ಅವರು ಭರ್ಜರಿ ಕಂಬ್ಯಾಕ್ ಮಾಡಲಿದ್ದಾರೆ ಎಂದೇ ಊಹಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Sikandar Teaser Out: 'ಸಿಕಂದರ್' ಚಿತ್ರದ ಟೀಸರ್ ಔಟ್; ಸಲ್ಮಾನ್ ಲುಕ್‌ಗೆ ಫ್ಯಾನ್ಸ್ ಫಿದಾ: ರಶ್ಮಿಕಾ ಅಭಿಮಾನಿಗಳಿಗೆ ನಿರಾಸೆ
ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಕಾಜಲ್ ಅಗರ್ವಾಲ್, ಕನ್ನಡದ ಕಿಶೋರ್, ಸುನೀಲ್ ಶೆಟ್ಟಿ, ಪ್ರತೀಕ್ ಬಬ್ಬರ್, ಚೈತನ್ಯ ಚೌಧರಿ, ನವಾಬ್ ಶಾ ಮತ್ತಿತರರು ನಟಿಸುತ್ತಿದ್ದಾರೆ.