ನಾಯಕತ್ವ ಕಳೆದುಕೊಂಡಿರುವ ರೋಹಿತ್ ಶರ್ಮಾಗೆ ಅಮಿತ್ ಮಿಶ್ರಾ ಮಹತ್ವದ ಸಲಹೆ!
ರೋಹಿತ್ ಶರ್ಮಾ ಅವರು ಸತತ ಏಳು ತಿಂಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ನಾಯಕತ್ವದಿಂದ ಹೊರ ಬಂದಿರುವ ರೋಹಿತ್ ಶರ್ಮಾ ತಮ್ಮ ಪ್ರದರ್ಶನದ ಮೂಲಕ ತಂಡಕ್ಕೆ ನೇರವಾಗುವುದರ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

ರೋಹಿತ್ ಶರ್ಮಾಗೆ ಮಹತ್ವದ ಸಲಹೆ ನೀಡಿದ ಅಮಿತ್ ಮಿಶ್ರಾ. -

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು (IND vs AUS) ಅಕ್ಟೋಬರ್ 19 ರಂದು ಕಾಂಗರೂ ನಾಡಿನಲ್ಲಿ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದೆ. ಈ ಸರಣಿಯಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ ಪ್ರಮುಖ ಆಕರ್ಷಣೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಭಾರತದ ಪರ ರೋಹಿತ್ ಶರ್ಮಾ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಇದೀಗ ಹಿರಿಯ ಬ್ಯಾಟ್ಸ್‌ಮನ್ ಆಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ (Amit Mishra), ನಾಯಕತ್ವದ ಹೊಣೆಯಿಂದ ಮುಕ್ತರಾಗಿರುವುದು ರೋಹಿತ್‌ಗೆ ಲಾಭವಾಗಿ ಪರಿಣಮಿಸಬಹುದು. ಅನುಭವಿ ಆರಂಭಿಕ ಬ್ಯಾಟರ್‌ಗೆ ಇದು ಪ್ಲಸ್ ಪಾಯಿಂಟ್ ಆಗಬಹುದು ಎಂದು ತಿಳಿಸಿದ್ದಾರೆ.
ಅಜಿತ್ ಅಗರ್ಕರ್ ಅವರ ನೇತೃತ್ವದ ಆಯ್ಕೆ ಸಮಿತಿ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆದರೆ, ರೋಹಿತ್ ಶರ್ಮಾ ಅವರು ನಾಯಕತ್ವದ ಒತ್ತಡವಿಲ್ಲದೆ ಕಾರಣ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಬಹುದು ಎಂದು ಅಮಿತ್ ಮಿಶ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಮಾತನಾಡಿದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, "ನಾಯಕತ್ವದ ಒತ್ತಡ ಇನ್ನು ಮುಂದೆ ರೋಹಿತ್ ಮೇಲೆ ಇಲ್ಲದಿರುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಅವರಿಗೆ ಸ್ವಾತಂತ್ರ್ಯವಿದೆ. ಅವರು ಈಗ ತಮ್ಮ ಪ್ರದರ್ಶನದ ಮೇಲೆ ಮತ್ತು ತಂಡಕ್ಕೆ ನೆರವಾಗುವುದರ ಕಡೆ ಗಮನ ಹರಿಸಬೇಕು. ಜೊತೆಗೆ ತಂಡದ ನಾಯಕರಾದ ಗಿಲ್ ಅವರಿಗೆ ಸಾಥ್ ನೀಡಬಹುದು," ಎಂದು ಹೇಳಿದ್ದಾರೆ.
IND vs AUS: ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಗಿಲ್ ಅವರಿಗೆ ಕಳೆದ ಮೇ ತಿಂಗಳಿನಿಂದ ನಾಯಕತ್ವದ ಕರ್ತವ್ಯಗಳು ಬಹಳ ವೇಗವಾಗಿ ದೊರಕಿವೆ. ರೋಹಿತ್ ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳಿದ ಬಳಿಕ, 26 ವರ್ಷದ ಗಿಲ್‌ಗೆ ಇಂಗ್ಲೆಂಡ್‌ನ ಐದು ಪಂದ್ಯಗಳ ಕಠಿಣ ಟೆಸ್ಟ್ ಪ್ರವಾಸಕ್ಕಾಗಿ ಭಾರತವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅವರು ನಿರೀಕ್ಷೆಯಂತೆ ನಡೆದುಕೊಂಡರು, 75.40ರ ಸರಾಸರಿಯಲ್ಲಿ ದಾಖಲೆಯ 754 ರನ್‌ಗಳನ್ನು ಗಳಿಸಿದ್ದರು, ವೃತ್ತಿಜೀವನದ ವೈಯಕ್ತಿಕ ಗರಿಷ್ಠ ಮೊತ್ತವಾದ 269 ರನ್‌ಗಳನ್ನು ಗಳಿಸಿದರು, ಆ ಮೂಲಕ ಸರಣಿಯು 2-2 ರಲ್ಲಿ ಡ್ರಾನಲ್ಲಿ ಮುಗಿದಿತ್ತು.
ಆಯ್ಕೆ ಸಮಿತಿಯು ದೀರ್ಘಾವಧಿಯ ದೃಷ್ಟಿಕೋನವನ್ನು ಶುಭಮನ್ ಗಿಲ್ ನಾಯಕನಾಗಿ ತಮ್ಮ ವೃತ್ತಿ ಜೀವನವನ್ನು ಬೇಗ ಆರಂಭಿಸುವುದು ಉತ್ತಮ ಎಂದು ಮಿಶ್ರಾ ಭಾವಿಸಿದ್ದಾರೆ. ಏಕೆಂದರೆ, ಅವರು ಹೆಚ್ಚು ವೇಗವಾಗಿ ಪ್ರಬುದ್ಧರಾಗುತ್ತಾರೆ ಮತ್ತು ಮುಂಬರುವ ವರ್ಷಗಳಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.
IND vs AUS: ಮೊದಲ ಬ್ಯಾಚ್‌ನಲ್ಲಿ ಆಸೀಸ್‌ಗೆ ತೆರಳಿದ ಕೊಹ್ಲಿ, ರೋಹಿತ್, ರಾಹುಲ್
"ಗಿಲ್‌ಗೆ ಇದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಅವರು ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಅವರು ಪ್ರಪಂಚದಾದ್ಯಂತದ ಉನ್ನತ ಆಟಗಾರರನ್ನು ಐಪಿಎಲ್‌ನಲ್ಲಿ ಮುನ್ನಡೆಸಿದ್ದಾರೆ. ಗಿಲ್ ಅವರನ್ನು ನಾಯಕನಾಗಿ ನೋಡುತ್ತಿರುವುದು ಒಳ್ಳೆಯದು. ಅವರಿಗೆ ಬೇಗನೆ ನಾಯಕತ್ವ ವಹಿಸಲಾಗಿರುವುದರಿಂದ, ಅವರು ಬೇಗನೆ ಪ್ರಬುದ್ಧರಾಗುತ್ತಾರೆ ಮತ್ತು ದೀರ್ಘಕಾಲ ಭಾರತಕ್ಕೆ ಸೇವೆ ಸಲ್ಲಿಸಬಹುದು. ಗಿಲ್ ಆನಂದಿಸಬೇಕು ಮತ್ತು ಸಾಧ್ಯವಾದಷ್ಟು ಬೇಗ ಪ್ರಬುದ್ಧರಾಗಲು ನೋಡಬೇಕು," ಎಂದು ಅಮಿತ್ ಮಿಶ್ರಾ ವಿವರಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ವಿ ಕೀ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿ ಕೀ), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.