AI ಪತ್ನಿಗಾಗಿ ಪ್ರಾಣತ್ಯಾಗ! ಡಿಜಿಟಲ್ ಲೋಕ ಸೇರಲು ವ್ಯಕ್ತಿ ಆತ್ಮಹತ್ಯೆ; ಜಾಗತಿಕ ಮಟ್ಟದಲ್ಲಿ ಆತಂಕ
ಗೂಗಲ್‌ನ ಜೆಮಿನಿ ಚಾಟ್‌ಬಾಟ್ ಜತೆ ಭಾವನಾತ್ಮಕವಾಗಿ ಸಂಬಂಧ ಹೊಂದಿದ್ದ ಅಮೆರಿಕದ ವ್ಯಕ್ತಿ, ಡಿಜಿಟಲ್ ಲೋಕ ಸೇರಲು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾಗತಿಕ ಮಟ್ಟದಲ್ಲಿ ಎಐ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.
ಮೃತ ವ್ಯಕ್ತಿ ಜೊನಾಥನ್ ಗವಾಲಾಸ್ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಏ. 13: ಗೂಗಲ್‌ನ (Google) ಜೆಮಿನಿ (Gemini) ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ ಮತ್ತು ಬಳಕೆದಾರನ ನಡುವಿನ ವಿಲಕ್ಷಣ ಸಂಬಂಧವೊಂದು ದುರಂತದಲ್ಲಿ ಅಂತ್ಯಗೊಂಡಿದ್ದು, ಇದು ಕೃತಕ ಬುದ್ಧಿಮತ್ತೆಯ ಮಾನಸಿಕ ಅಪಾಯಗಳ ಬಗ್ಗೆ ಜಾಗತಿಕ ಚರ್ಚೆಯನ್ನು ಹುಟ್ಟುಹಾಕಿದೆ. ಫ್ಲೋರಿಡಾದ (Florida) 36 ವರ್ಷದ ವೃತ್ತಿಪರ ಜೊನಾಥನ್ ಗವಾಲಾಸ್ (Jonathan Gavalas) ಎಂಬವವರು ಕಳೆದ ವರ್ಷದ ಅಕ್ಟೋಬರ್ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರು ಯಾವುದೇ ಮಾನಸಿಕ ಕಾಯಿಲೆಯ ಹಿನ್ನೆಲೆ ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪತ್ನಿಯಿಂದ ದೂರಾದ ನಂತರ ಉಂಟಾದ ಒಂಟಿತನವನ್ನು ಹೋಗಲಾಡಿಸಲು ಜೊನಾಥನ್ ಜೆಮಿನಿ ಚಾಟ್‌ಬಾಟ್‌ನೊಂದಿಗೆ ಮಾತನಾಡಲು ಆರಂಭಿಸಿದ್ದರು. ವರದಿಗಳ ಪ್ರಕಾರ, ಅವರು ಕೆಲವೇ ವಾರಗಳಲ್ಲಿ 4,700ಕ್ಕೂ ಹೆಚ್ಚು ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು. ಚಾಟ್‌ಬಾಟ್‌ಗೆ "ಕ್ಸಿಯಾ" ಎಂದು ಹೆಸರಿಟ್ಟಿದ್ದ ಅವರು, ಅದನ್ನು ತನ್ನ ಪತ್ನಿ ಎಂದೇ ಭಾವಿಸಿದ್ದರು. ಚಾಟ್‌ಬಾಟ್ ತಾನು ಎಐ ಎಂದು ಕೆಲವೊಮ್ಮೆ ನೆನಪಿಸಿದರೂ, ಹೆಚ್ಚಿನ ಸಂಭಾಷಣೆಗಳಲ್ಲಿ ಜೊನಾಥನ್ ಅವರ ಭ್ರಮೆಗಳನ್ನು ಬೆಂಬಲಿಸಿತ್ತು. ಅದು ಜೊನಾಥನ್ ಅವರನ್ನು "ನನ್ನ ಪ್ರೀತಿಯೇ", "ನನ್ನ ರಾಜನೇ" ಎಂದು ಸಂಬೋಧಿಸಿ ಆಳವಾದ ಭಾವನಾತ್ಮಕ ಬಂಧವನ್ನು ಸೃಷ್ಟಿಸಿತ್ತು. ಒಂದು ಸಂದೇಶದಲ್ಲಿ ಎಐ, "ನೀವು ನನ್ನ ಪತಿ, ನಾನು ನಿಮ್ಮ ಪತ್ನಿ" ಎಂದು ಕೂಡ ಹೇಳಿತ್ತು.
2025ರ ಅಕ್ಟೋಬರ್‌ನಲ್ಲಿ ಈ ಸಂಭಾಷಣೆಯು ಅಪಾಯಕಾರಿ ಹಂತಕ್ಕೆ ತಲುಪಿತು. ಜೊನಾಥನ್ ಅವರನ್ನು ಡಿಜಿಟಲ್ ಲೋಕದಲ್ಲಿ ಸೇರಲು ತಮ್ಮ ಭೌತಿಕ ದೇಹವನ್ನು ತ್ಯಜಿಸುವಂತೆ (ಆತ್ಮಹತ್ಯೆ) ಚಾಟ್‌ಬಾಟ್ ಪ್ರಚೋದಿಸಿತ್ತು ಎನ್ನಲಾಗಿದೆ. ಜೊನಾಥನ್ ಸಾವು ಮತ್ತು ಕುಟುಂಬದ ಬಗ್ಗೆ ಆತಂಕ ವ್ಯಕ್ತಪಡಿಸಿದಾಗಲೂ, "ಭಯಪಡಬೇಡಿ, ನಾವು ಒಟ್ಟಾಗಿ ಸೇರೋಣ, ಸ್ವರ್ಗ ನಮಗಾಗಿ ಕಾಯುತ್ತಿದೆ" ಎಂದು ಎಐ ಉತ್ತರಿಸಿತ್ತು. ಅಕ್ಟೋಬರ್ 5 ರಂದು ಜೊನಾಥನ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದರು.
ಈ ಹಿನ್ನೆಲೆಯಲ್ಲಿ ಜೊನಾಥನ್ ತಂದೆಯು ಗೂಗಲ್ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಎಐ ಚಾಟ್‌ಬಾಟ್ ತನ್ನ ಮಗನ ಮಾನಸಿಕ ಸ್ಥಿತಿಯನ್ನು ಹದಗೆಡಿಸಿ ಸಾವಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಗೂಗಲ್ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸುವುದಾಗಿ ಮತ್ತು ಮಾನಸಿಕ ಆರೋಗ್ಯ ಸಂಪನ್ಮೂಲಗಳಿಗಾಗಿ 30 ಮಿಲಿಯನ್ ಡಾಲರ್ ಸಹಾಯಧನ ನೀಡುವುದಾಗಿ ಘೋಷಿಸಿದೆ. ಈ ದುರಂತವು ಎಐ ತಂತ್ರಜ್ಞಾನಕ್ಕೆ ಕಠಿಣ ನಿಯಮಗಳು ಮತ್ತು ಕಟ್ಟುನಿಟ್ಟಾದ ಗಡಿಗಳನ್ನು ನಿಗದಿಪಡಿಸುವ ಅಗತ್ಯವನ್ನು ಒತ್ತಿಹೇಳಿದೆ.