ಟೆಲ್ ಅವೀವ್, ಅ.14: ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ದೇಶಗಳ ವಿಮಾನಯಾನ ಸಿಬ್ಬಂದಿಗೆ ಆ ದೇಶವು ನಿರ್ಬಂಧಗಳನ್ನು ಬಿಗಿಗೊಳಿಸಿದ ಬೆನ್ನಲ್ಲೇ, ಇದೀಗ ಏರ್ ಫ್ರಾನ್ಸ್ (Air France) ಪಾಕಿಸ್ತಾನಿ ಪೈಲಟ್ಗಳು ಮತ್ತು ಸಿಬ್ಬಂದಿ ಇಸ್ರೇಲ್ (Israel)ಗೆ ತೆರಳುವ ಹಾಗೂ ಅಲ್ಲಿಂದ ಹೊರಡುವ ವಿಮಾನಗಳನ್ನು ನಿರ್ವಹಿಸುವುದನ್ನು ನಿಷೇಧಿಸಿದೆ. ಸೆಪ್ಟೆಂಬರ್ 30ರಂದು ಫ್ಲೈದುಬೈ (Fly Dubai) ವಿಮಾನದಲ್ಲಿದ್ದ ಓಮನ್ನ ಸಹ-ಪೈಲಟ್ನಿಂದ ನಡೆದ ಭಯೋತ್ಪಾದಕ ದಾಳಿಯ ಯತ್ನದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ದೇಶಗಳಲ್ಲಿ ಓಮನ್ ಕೂಡ ಒಂದಾಗಿದೆ.
ಪಾಕಿಸ್ತಾನ ಸೇರಿದಂತೆ 31 ದೇಶಗಳ ವಿಮಾನಯಾನ ಸಿಬ್ಬಂದಿಗೆ ಏರ್ ಫ್ರಾನ್ಸ್ ನಿರ್ಬಂಧ ವಿಧಿಸಿದೆ. ಈ ಬೆನ್ನಲ್ಲೇ, ಅಮೆರಿಕದ ಚಿಕಾಗೋ ಮೂಲದ ಯುನೈಟೆಡ್ ಏರ್ಲೈನ್ಸ್ ಕೂಡ ಇಸ್ರೇಲ್ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪೈಲಟ್ಗಳು ಮತ್ತು ವಿಮಾನದ ಸಿಬ್ಬಂದಿ ಯಾವ ದೇಶದವರು ಎಂಬುದನ್ನು ಆಧರಿಸಿ, ಇಸ್ರೇಲ್ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳಲ್ಲಿ ಕೆಲಸ ಮಾಡಲು ಕೆಲವು ನಿಯಮಗಳ ಬಗ್ಗೆ ಮಾಹಿತಿ ನೀಡಿರುವುದಾಗಿ ಯುನೈಟೆಡ್ ಏರ್ಲೈನ್ಸ್ ತನ್ನ ಸಿಬ್ಬಂದಿಗೆ ತಿಳಿಸಿದೆ.
ಫ್ರೆಂಚ್ ತನಿಖಾ ಪತ್ರಿಕೆ ಮೀಡಿಯಾಪಾರ್ಟ್ ಮತ್ತು ವಿಮಾನಯಾನ ಕ್ಷೇತ್ರದ ಮಾಹಿತಿ ಒದಗಿಸುವ ಸಂಸ್ಥೆ ಸಿಎಚ್-ಏವಿಯೇಷನ್ ಪ್ರಕಟಿಸಿದ ವರದಿಗಳ ಪ್ರಕಾರ, ಇಸ್ರೇಲ್ ವಿಧಿಸಿರುವ ನಿರ್ಬಂಧಗಳ ಕುರಿತು ಎರಡೂ ವಿಮಾನಯಾನ ಸಂಸ್ಥೆಗಳು ತಮ್ಮ ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಿವೆ. ಇಸ್ರೇಲ್ನ ನಿಯಮಗಳನ್ನು ಪಾಲಿಸುತ್ತಿರುವುದಾಗಿ ಏರ್ ಫ್ರಾನ್ಸ್ ದೃಢಪಡಿಸಿದೆ. ಯುನೈಟೆಡ್ ಏರ್ಲೈನ್ಸ್ ಕೂಡ ಈ ನಿರ್ಬಂಧಗಳನ್ನು ತನ್ನ ಸಿಬ್ಬಂದಿಯ ಕರ್ತವ್ಯ ಮತ್ತು ವಿಮಾನ ನಿಯೋಜನೆಗೆ ಸಂಬಂಧಿಸಿದ ಯೋಜನಾ ಪ್ರಕ್ರಿಯೆಗಳಲ್ಲಿ ಅಳವಡಿಸಿಕೊಂಡಿದೆ ಎಂದು ವರದಿಯಾಗಿದೆ.
ಜೆಕ್ ಗಣರಾಜ್ಯದ ಅತಿದೊಡ್ಡ ವಿಮಾನಯಾನ ಸಂಸ್ಥೆ ಸ್ಮಾರ್ಟ್ವಿಂಗ್ಸ್ ಕೂಡ ಇಸ್ರೇಲ್ನ ನಿರ್ಬಂಧಗಳನ್ನು ಪಾಲಿಸುವುದಾಗಿ ದೃಢಪಡಿಸಿದೆ. ಆದರೆ, ಈವರೆಗೆ ತನ್ನ ಸಿಬ್ಬಂದಿಯ ಕರ್ತವ್ಯ ನಿಯೋಜನೆ ಮತ್ತು ವಿಮಾನ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅದು ತಿಳಿಸಿದೆ. ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ಕೆಲವು ದೇಶಗಳ ಪೌರತ್ವ ಹೊಂದಿರುವ ಅಥವಾ ದ್ವಿಪೌರತ್ವ ಹೊಂದಿರುವ ವಿಮಾನಯಾನ ಸಿಬ್ಬಂದಿ, ನಿರ್ಬಂಧಗಳಿಗೆ ಒಳಪಟ್ಟ ವಿಮಾನಗಳ ಕಾರ್ಯಾಚರಣೆಯಲ್ಲಿ ಕೆಲಸ ಮಾಡುವಂತಿಲ್ಲ.
ಯಾವ ದೇಶಗಳ ಪ್ರಜೆಗಳಿಗೆ ನಿರ್ಬಂಧ?
ವರದಿ ಪ್ರಕಾರ, ಯುನೈಟೆಡ್ ಏರ್ಲೈನ್ಸ್ನ ಆಂತರಿಕ ಸಿಬ್ಬಂದಿ ನಿಯೋಜನೆ ಕುರಿತ ಜ್ಞಾಪನಾ ಪತ್ರದಲ್ಲಿ 29 ದೇಶಗಳ ಪಟ್ಟಿಯಿದೆ. ಈ ದೇಶಗಳ ಪ್ರಜೆಗಳು ಟೆಲ್ ಅವೀವ್ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳಲ್ಲಿ ಕೆಲಸ ಮಾಡುವುದಕ್ಕೆ ನಿರ್ಬಂಧ ಎದುರಿಸಬಹುದು. ಆ ದೇಶಗಳೆಂದರೆ ಅಫ್ಘಾನಿಸ್ತಾನ, ಅಲ್ಜೀರಿಯಾ, ಬಾಂಗ್ಲಾದೇಶ, ಬ್ರೂನೈ, ಕೊಮೊರೊಸ್, ಕ್ಯೂಬಾ, ಜಿಬೌಟಿ, ಇಂಡೋನೇಷ್ಯಾ, ಇರಾನ್, ಇರಾಕ್, ಕುವೈತ್, ಲೆಬನಾನ್, ಲಿಬಿಯಾ, ಮಲೇಷ್ಯಾ, ಮಾಲ್ಡೀವ್ಸ್, ಮಾಲಿ, ಮೌರಿಟಾನಿಯಾ, ನೈಜರ್, ಉತ್ತರ ಕೊರಿಯಾ, ಓಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ, ಟುನೀಶಿಯಾ, ವೆನೆಜುವೆಲಾ ಮತ್ತು ಯೆಮನ್.