"ಗಾಜಾ ಮೇಲಿನ ದಾಳಿಗೆ ಪ್ರತೀಕಾರ”: ಫ್ಲೈದುಬೈ ವಿಮಾನ ಹೈಜಾಕ್ ಪ್ರಯತ್ನ ಸಮರ್ಥಿಸಿಕೊಂಡ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ
Hamam Al-Hammami: ಗಾಜಾ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಫ್ಲೈದುಬೈ ವಿಮಾನದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಮುಂದಾಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಅಲ್-ಹಮ್ಮಾಮಿ ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್‌ಗೆ ವಿರೋಧಿಯಾಗಿರುವ ಕೆಲವು ದೇಶಗಳಿಗೆ ಅಲ್ಪಾವಧಿಗೆ ಭೇಟಿ ನೀಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ -
ದುಬೈ, ಅ. 6: ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ (FlyDubai) ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಮತ್ತು ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ ಒಮನ್‌ನ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ (Hamam Al-Hammami) ಗಾಜಾ ಮೇಲಿನ ಇಸ್ರೇಲ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಕೃತ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ. 29 ವರ್ಷದ ಹಮಾಮ್ ಅಲ್-ಹಮ್ಮಾಮಿ ಗಾಜಾ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಹಾಗೂ ಹುತಾತ್ಮನಾಗಲು ಬಯಸಿದ್ದಾಗಿ ವಿಚಾರಣಾ ಅಧಿಕಾರಿಗಳಿಗೆ ಹೇಳಿದ್ದಾನೆ ಎನ್ನಲಾಗಿದೆ.
ಅಲ್-ಹಮ್ಮಾಮಿ ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್‌ಗೆ ವಿರೋಧಿಯಾಗಿರುವ ಕೆಲವು ದೇಶಗಳಿಗೆ ಅಲ್ಪಾವಧಿಗೆ ಭೇಟಿ ನೀಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಆ ಭೇಟಿಗಳ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಅಥವಾ ಯಾವುದೇ ರೀತಿಯ ಸಂಘಟನೆ ಆತನನ್ನು ಪ್ರಚೋದಿಸಿತೇ ಅಥವಾ ತನ್ನ ಸಂಘಟನೆಗೆ ಸೇರಿಸಿಕೊಳ್ಳಲು ಪ್ರಯತ್ನಿಸಿತೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ” ಎಂದು ಮೋಸಾದ್ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇಸ್ರೇಲ್‌ನ ಆಂತರಿಕ ಭದ್ರತಾ ಸಂಸ್ಥೆ ಶಿನ್ ಬೆಟ್‌ನ ಅಧಿಕಾರಿಗಳು ಅಲ್-ಹಮ್ಮಾಮಿಯನ್ನು ವಿಚಾರಣೆ ನಡೆಸುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಶಿನ್ ಬೆಟ್ ಅಧಿಕಾರಿಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) ತೆರಳಿದ್ದಾರೆ ಎಂದು ಇಸ್ರೇಲ್ ಮಾಧ್ಯಮವೊಂದು ವರದಿ ಮಾಡಿದೆ.
ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತಲೆಬುರುಡೆಗೆ ಗಾಯ; ಈಗ ಆರೋಗ್ಯ ಹೇಗಿದೆ?
ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಲ್ಲಿ ಅನುತ್ತೀರ್ಣನಾಗಿದ್ದ
ಅಂದಹಾಗೆ ಒಮಾನ್ ಸಹ-ಪೈಲಟ್ ಲ್-ಹಮ್ಮಾಮಿ ಬಗ್ಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಿಂದ ಹೊಸ ವಿವರಗಳು ಹೊರಹೊಮ್ಮಿವೆ. ಅಲ್-ಹಮ್ಮಾಮಿ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯದಲ್ಲಿ ತನ್ನ ಅಧ್ಯಯನ ಪೂರ್ಣಗೊಳಿಸಿರಲಿಲ್ಲ ಎಂದು ಆತ ವ್ಯಾಸಂಗ ಮಾಡುತ್ತಿದ್ದ ಸಂಸ್ಥೆ ತಿಳಿಸಿದೆ. ಮೆಲ್ಬೋರ್ನ್‌ನ ಆರ್‌ಎಂಐಟಿ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ. ಆದರೆ ಆ ಕೋರ್ಸ್‌ನ್ನು ಪೂರ್ಣಗೊಳಿಸಿಲ್ಲ ಎಂದು ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.
ಆಸ್ಟ್ರೇಲಿಯಾದಲ್ಲಿ ಅಲ್-ಹಮ್ಮಾಮಿ ಕಳೆದ ಅವಧಿಯ ಬಗ್ಗೆ ಇದೀಗ ತನಿಖೆ ನಡೆಸಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿದ್ದಷ್ಟು ಸಮಯ ಅವನು ಹೇಗಿದ್ದ, ಆತನ ನಡತೆ ಹೇಗಿತ್ತು ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇನ್ನು ಅಲ್-ಹಮ್ಮಾಮಿಯು ಫ್ಲೈದುಬೈ ವಿಮಾನ ಹೈಜಾಕ್ ಮಾಡಲು ಮುಂದಾದ ಬಗ್ಗೆ ತಮಗೆ ತಿಳಿದಿದೆ ಎಂದು ಆರ್‌ಎಂಐಟಿ ವಿಶ್ವವಿದ್ಯಾಲಯ ಹೇಳಿದೆ. ತನಿಖೆ ಮುಂದುವರಿದಿರುವುದರಿಂದ ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಇಸ್ರೇಲ್ ಏರ್‌ಪೋರ್ಟ್‌ಗೆ ವಿಮಾನ ಅಪ್ಪಳಿಸಲು ಉಗ್ರ ಸ್ಕೆಚ್: ಫ್ಲೈದುಬೈ ಕೋ-ಪೈಲಟ್ ಕುರಿತು ಆಘಾತಕಾರಿ ಸತ್ಯ ಬಯಲು
ಒಮಾನ್ ಸಹ ಪೈಲಟ್ ಹಮ್ಮಾಮಿಗೆ ಆಸ್ಟ್ರೇಲಿಯಾದೊಂದಿಗೆ ಇರುವ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಲ್-ಹಮ್ಮಾಮಿ ಆಸ್ಟ್ರೇಲಿಯಾದಲ್ಲಿದ್ದಾಗ ತೀವ್ರಗಾಮಿ ಮಸೀದಿಗಳು ಮತ್ತು ಉಗ್ರಗಾಮಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದರ ಬಗ್ಗೆಯೂ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ನ್ಯೂಜಿಲೆಂಡ್‌ನಲ್ಲಿ ವಿಮಾನ ತರಬೇತಿ
ಅಲ್-ಹಮ್ಮಾಮಿ ತನ್ನ ವಿಮಾನ ತರಬೇತಿಯ ಭಾಗವಾಗಿ ನ್ಯೂಜಿಲೆಂಡ್‌ನಲ್ಲಿ ಆರು ತಿಂಗಳು ಕಳೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆತ ಆರು ತಿಂಗಳ ವಿದ್ಯಾರ್ಥಿ ವೀಸಾದಡಿ 2018ರ ನವೆಂಬರ್‌ನಿಂದ 2019ರ ಮೇವರೆಗೆ ನ್ಯೂಜಿಲೆಂಡ್‌ನಲ್ಲಿದ್ದ. “ವಲಸೆ ದಾಖಲೆಗಳ ಪ್ರಕಾರ, ಆತ 2018ರ ನವೆಂಬರ್ 30ರಂದು ನ್ಯೂಜಿಲೆಂಡ್‌ಗೆ ಆಗಮಿಸಿ, 2019ರ ಮೇ 23ರಂದು ಅಲ್ಲಿಂದ ತೆರಳಿದ್ದ” ಎಂದು ನ್ಯೂಜಿಲೆಂಡ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ, ನ್ಯೂಜಿಲೆಂಡ್ ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಹಮ್ಮಾಮಿಯು ದೇಶದಲ್ಲಿ ಕಳೆದ ಸಮಯದ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.