ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೆರಿಕ ವಿದೇಶಿ ನೆರವು ರದ್ದು; ಹೆಚ್ಐವಿ, ಕ್ಷಯ ವಿರುದ್ಧ ಬಡ ರಾಷ್ಟ್ರಗಳ ಹೋರಾಟಕ್ಕೆ ಎದುರಾಯ್ತು ಬಹುದೊಡ್ಡ ಸವಾಲು

ಹೆಚ್ಐವಿ, ಟಿಬಿ ವಿರುದ್ಧದ ಹೋರಾಟದಲ್ಲಿ ಅಮೆರಿಕ ವಿದೇಶಿ ನೆರವನ್ನು ಕಡಿತಗೊಳಿಸಿ ಒಂದು ವರ್ಷ ಪೂರ್ಣಗೊಂಡಿದೆ. ಪ್ರಾರಂಭದಲ್ಲಿ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿಯ ಶೇ. 83ರಷ್ಟು ಕಾರ್ಯಕ್ರಮಗಳನ್ನು ತೆಗೆದು ಹಾಕಲಾಗಿತ್ತು. ಬಳಿಕ ಸಂಪೂರ್ಣವಾಗಿ ಕೈ ಬಿಡಲಾಯಿತು. ಇದು ಈಗಾಗಲೇ ಬಡ ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರಲು ಪ್ರಾರಂಭಿಸಿವೆ. ಹೀಗೆ ಮುಂದುವರಿದರೆ ಮುಂದೇನಾಗಬಹುದು ಎನ್ನುವ ಕುರಿತು ಕಿರು ನೋಟ ಇಲ್ಲಿದೆ.

ಸಂಗ್ರಹ ಚಿತ್ರ

ಫ್ರಾನ್ಸ್: ವರ್ಷದ ಹಿಂದೆ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ (Donald Trump) ಅವರು ತಕ್ಷಣ ವಿದೇಶಿ ನೆರವನ್ನು (Foreign Aid) ಕಡಿತ ಮಾಡಿರುವುದರ ಪರಿಣಾಮ ಈಗಾಗಲೇ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. 2025ರ ಜನವರಿ 20ರಂದು ಉದ್ಯಮಿ ಎಲಾನ್ ಮಸ್ಕ್ (Businessman Elon Musk) ಅವರ ಸಲಹೆಯ ಮೇರೆಗೆ ಟ್ರಂಪ್ ಅವರು ಲಕ್ಷಾಂತರ ಮಂದಿಗೆ ನೆರವು ನೀಡುತ್ತಿದ್ದ ಯುಎಸ್ ವಿದೇಶಿ ನೆರವನ್ನು (US foreign aid) ರದ್ದು ಪಡಿಸಿದ್ದರು. ಇದು ವಿಶ್ವದ ಹಲವು ಬಡ ರಾಷ್ಟ್ರಗಳ (poor countries) ಮೇಲೆ ಪರಿಣಾಮ ಬೀರಿದೆ.

ಯುಎಸ್ ವಿದೇಶಿ ನೆರವು ಬಡ ರಾಷ್ಟ್ರಗಳಿಗೆ ಹೆಚ್ಐವಿ, ಮಲೇರಿಯಾ ಮತ್ತು ಕ್ಷಯ ರೋಗದಂತಹ ರೋಗಗಳ ವಿರುದ್ಧ ಹೋರಾಡಲು ಮಾನವೀಯ ನರವಾಗಿತ್ತು. ಆದರೆ ಯುಎಸ್ ಇದನ್ನು ಸ್ಥಗಿತಗೊಳಿಸಿರುವುದರಿಂದ ಬಡ ರಾಷ್ಟ್ರಗಳ ಕಾರ್ಯಯೋಜನೆಯ ಮೇಲೆ ಪರಿಣಾಮ ಬೀರಿದೆ.

ಪ್ರಧಾನಿ ಮೋದಿ- ಮೆಲೋನಿ ; ಗಾಜಾ ಶಾಂತಿ ಮಂಡಳಿಗೆ ಟ್ರಂಪ್‌ ಯಾರನ್ನೆಲ್ಲಾ ಆಹ್ವಾನಿಸಿದ್ದಾರೆ?

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ವೆಚ್ಚ ಕಡಿತಕ್ಕೆ ಸಲಹೆ ನೀಡಿದ ಬಳಿಕ ಟ್ರಂಪ್ ಅವರು ಮೊದಲ ಹಂತದಲ್ಲಿ ಯುಎಸ್ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿಯ (USAID) ಶೇ. 83ರಷ್ಟು ಕಾರ್ಯಕ್ರಮಗಳನ್ನು ತೆಗೆದುಹಾಕಿದರು. ಬಳಿಕ ಅದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು.

ಇದರ ಪರಿಣಾಮವಾಗಿ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ಪ್ರಮುಖ ಪಾಶ್ಚಿಮಾತ್ಯ ದಾನಿ ರಾಷ್ಟ್ರಗಳು ತಮ್ಮದೇ ಆದ ನೆರವು ಬಜೆಟ್‌ಗಳಲ್ಲಿ ಭಾರಿ ಕಡಿತಗಳನ್ನು ಘೋಷಿಸಿದವು. ಇದರಿಂದ ಈಗಾಗಲೇ ಕಡಿಮೆಯಾಗಿರುವ ಮಾನವೀಯ ಕಾರ್ಯಗಳಿಗೆ ಹಣಕಾಸಿನ ಕೊರತೆ ಮತ್ತಷ್ಟು ಹೆಚ್ಚಾಯಿತು.



ಮಾನವೀಯ ಕಾರ್ಯಗಳಿಗೆ ಈ ಹಿಂದೆ ಜಾಗತಿಕ ನೆರವಿನ ಶೇಕಡಾ 40ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದ್ದ ಯುಎಸ್ ನೆರವು ಕಡಿತದ ಪರಿಣಾಮದಿಂದ 7,50,000 ಕ್ಕೂ ಹೆಚ್ಚು ಸಾವುಗಳು ಉಂಟಾಗಿದೆ. ಇದರಲ್ಲಿ 5,00,000ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ ಎಂದು ಇಂಪ್ಯಾಕ್ಟ್ ಕೌಂಟರ್ ವೆಬ್‌ಸೈಟ್ ಅಂದಾಜಿಸಿದೆ.

ಬೋಸ್ಟನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ಗಣಿತ ಮಾಡೆಲರ್ ಬ್ರೂಕ್ ನಿಕೋಲ್ಸ್ ಅವರ ವಿಶ್ಲೇಷಣೆ ಪ್ರಕಾರ, ಯುಎಸ್ ನೆರವು ಕಡಿತದಿಂದ ವಿಶ್ವದಾದ್ಯಂತ ಪ್ರತಿ ಗಂಟೆಗೆ 88 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ (ISGlobal) ನಡೆಸಿದ ಸಂಶೋಧನೆ ಪ್ರಕಾರ ಯುಎಸ್ ಸೇರಿದಂತೆ ಯುರೋಪಿಯನ್ ನೆರವು ಕಡಿತದಿಂದಾಗಿ 2030 ರ ವೇಳೆಗೆ ವಿಶ್ವದಾದ್ಯಂತ 22 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸಾವನ್ನಪ್ಪಬಹುದು ಎಂದು ಹೇಳಲಾಗಿದೆ.

ಒಂದು ವೇಳೆ ಅಮೆರಿಕದ ನೆರವು ಕಡಿತ ಇನ್ನು ಮುಂದುವರಿದರೆ 2045 ರ ವೇಳೆಗೆ ಐದು ವರ್ಷದೊಳಗಿನ 16 ಮಿಲಿಯನ್ ಮಕ್ಕಳು ಸಾವನ್ನಪ್ಪುತ್ತಾರೆ ಎಂದು ಅಮೆರಿಕ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆಂಡ್ ಇವಾಲ್ಯೂಷನ್‌ನ ಸಂಶೋಧನೆಗಳು ಎಚ್ಚರಿಸಿವೆ.

ಯುಎಸ್ ನೆರವಿನ ಕಡಿತವು ಹೆಚ್ಐವಿ ವಿರುದ್ದದ ಹೋರಾಟದ ಮೇಲೆ ಪರಿಣಾಮ ಬೀರಿದೆ. ಇದಕ್ಕೆ ನೆರವನ್ನು ಪುನರಾರಂಭಿಸುವುದಾಗಿ ಟ್ರಂಪ್ ಆಡಳಿತ ಹೇಳಿದ್ದರೂ ಬಡ ರಾಷ್ಟ್ರಗಳಲ್ಲಿ ಅನೇಕ ಜನರಿಗೆ ಆಂಟಿರೆಟ್ರೋ ವೈರಲ್‌ಗಳಂತಹ ಜೀವ ಉಳಿಸುವ ಹೆಚ್ಐವಿ ಔಷಧಗಳ ಲಭ್ಯವಾಗುತ್ತಿಲ್ಲ ಎಂದು ಯುಎನ್ಎಐಡಿಎಸ್ ಎಚ್ಚರಿಸಿದೆ.

ಬಾಂಗ್ಲಾದಲ್ಲಿ ಹಿಂದೂಗಳ ದೌರ್ಜನ್ಯಕ್ಕಿಲ್ಲ ಕೊನೆ; ಮತ್ತೊಬ್ಬ ವ್ಯಾಪಾರಿಯ ದಾರುಣ ಹತ್ಯೆ

ಒಟ್ಟು 47 ದೇಶಗಳಲ್ಲಿ 79 ಸಮುದಾಯ ಹೆಚ್ಐವಿ ಸಂಸ್ಥೆಗಳ ಸೇವೆಗಳ ಮೇಲೆ ಇದು ಗಂಭೀರ ಪರಿಣಾಮ ಬೀರಿದ್ದು,ಹೆಚ್ಐವಿ ಹರಡುವಿಕೆಯನ್ನು ತಡೆಯುವ ಔಷಧಗಳು ಅರ್ಧದಷ್ಟು ಜನರಿಗೆ ಮಾತ್ರ ತಲುಪುತ್ತಿದೆ ಎಂದು ಅದು ಹೇಳಿದೆ.

ಇದಲ್ಲದೇ ನೆರವು ಕಡಿತದಿಂದ ಈಗಾಗಲೇ 48,000 ಕ್ಕೂ ಹೆಚ್ಚು ಕ್ಷಯರೋಗಿಗಳು ಸಾವನ್ನಪ್ಪಿದ್ದಾರೆ. ಇದು 2030ರ ವೇಳೆಗೆ 2.2 ಮಿಲಿಯನ್‌ಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ. 1,60,000 ಕ್ಕೂ ಹೆಚ್ಚು ಮಕ್ಕಳು ನ್ಯುಮೋನಿಯಾದಿಂದ, 1,50,000 ಮಕ್ಕಳು ಅಪೌಷ್ಟಿಕತೆಯಿಂದ ಮತ್ತು 1,25,000 ಮಕ್ಕಳು ಅತಿಸಾರದಿಂದ ಸಾವನ್ನಪ್ಪಿದ್ದಾರೆ. ಮಕ್ಕಳು ಸೇರಿದಂತೆ 70,000 ಕ್ಕೂ ಹೆಚ್ಚು ಜನರು ಮಲೇರಿಯಾದಿಂದ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author