ಕಾಬೂಲ್, ಫೆ. 27: ಪಾಕಿಸ್ತಾನವು ದಶಕಗಳಿಂದ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲ ಮತ್ತು ಅದರ ಅಪಾಯಕಾರಿ ಪರಮಾಣು ಶಸ್ತ್ರಾಗಾರಕ್ಕೆ ಹೊಣೆಗಾರರನ್ನಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕೆಂದು ಅಫ್ಘಾನಿಸ್ತಾನ ಸಂಸತ್ತಿನ ಸದಸ್ಯೆ ಮರಿಯಮ್ ಸೊಲೈಮಾಂಖಿಲ್ (Mariam Solaimankhil) ಭಾರತವನ್ನು ಆಗ್ರಹಿಸಿದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇಸ್ಲಾಮಾಬಾದ್‌ನ ಕ್ರಮಗಳನ್ನು ಬಹಿರಂಗಪಡಿಸಲು ಹಾಗೂ ಜಾಗತಿಕ ನಿರ್ಬಂಧಗಳನ್ನು ಒತ್ತಾಯಿಸಲು ಭಾರತವು ಸಾಕಷ್ಟು ಪ್ರಬಲವಾಗಿದೆ ಎಂದು ಅವರು ಹೇಳಿದರು (Afghanistan–Pakistan conflict).
ಕಾಬೂಲ್‌ನ ತಾಲಿಬಾನ್ ಸರ್ಕಾರದ ವಿರುದ್ಧ ಪಾಕಿಸ್ತಾನ ಮುಕ್ತ ಯುದ್ಧ ಘೋಷಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಹೊಸ ಘರ್ಷಣೆಗಳು ಭುಗಿಲೆದ್ದಿರುವ ಸಮಯದಲ್ಲಿ ಸಂಸದೆ ಮರಿಯಮ್ ಸೊಲೈಮಾಂಖಿಲ್ ಈ ಹೇಳಿಕೆ ನೀಡಿದ್ದಾರೆ.
ವಿಡಿಯೊ ವೀಕ್ಷಿಸಿ:
ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದರಿಂದ ಅದು ಎಷ್ಟು ಅಪಾಯಕಾರಿ ಎಂಬುದರ ಕುರಿತು ಭಾರತವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸಬೇಕು. ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿ ಹಲವು ಭಯೋತ್ಪಾದಕ ಸಂಘಟನೆಗಳನ್ನು ಸೃಷ್ಟಿಸಿದ ಹಾಗೂ ಇದನ್ನು ಅನೇಕ ಬಾರಿ ಒಪ್ಪಿಕೊಂಡ ದೇಶ ಇನ್ನೂ ಅಣ್ವಸ್ತ್ರಗಳನ್ನು ಹೊಂದಿರುವುದು ಹೇಗೆ ಸಾಧ್ಯ? ಆ ದೇಶಕ್ಕೆ ನಿರ್ಬಂಧ ವಿಧಿಸಬೇಕು. ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಬೇಕು. ತಕ್ಷಣವೇ ಅಣ್ವಸ್ತ್ರರಹಿತಗೊಳಿಸಬೇಕು. ಇದನ್ನು ಮಾಡಲು ಭಾರತವು ಸಾಕಷ್ಟು ಬಲಿಷ್ಠವಾಗಿದೆ ಎಂದು ಅವರು ಹೇಳಿದರು.
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ದಾಳಿ; ನೆರೆಹೊರೆಯ ಎರಡು ರಾಷ್ಟ್ರಗಳ ನಡುವಿನ ಯುದ್ಧದ ಬಗ್ಗೆ ಭಾರತದ ನಿಲುವೇನು?
ಭಯೋತ್ಪಾದನೆಗೆ ಬಲಿಯಾಗಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಗಳನ್ನು ಖಂಡಿಸಿದರು. ಇಸ್ಲಾಮಾಬಾದ್‌ನ ಸೈನಿಕ ಆಡಳಿತ ಹಾಗೂ ರಾವಲ್ಪಿಂಡಿಯಲ್ಲಿ ಇರುವ ಜನರಲ್‌ಗಳು ಯುದ್ಧವನ್ನೇ ವ್ಯವಹಾರವಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅಂದಹಾಗೆ ಶುಕ್ರವಾರ (ಫೆ. 27) ಪಾಕಿಸ್ತಾನವು ಕಾಬೂಲ್ ಸೇರಿದಂತೆ ಅಪ್ಘಾನಿಸ್ತಾನದ ಪ್ರಮುಖ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿತು. ತಿಂಗಳುಗಳ ಕಾಲ ನಡೆದ ಪರಸ್ಪರ ಸಂಘರ್ಷಗಳ ನಂತರ ಪಾಕಿಸ್ತಾನದ ರಕ್ಷಣಾ ಸಚಿವರು ಮುಕ್ತ ಯುದ್ಧ ಘೋಷಿಸಿದರು.
ಗಾಜಿಯಾಬಾದ್ ಲಿಲ್-ಹಕ್ ಎಂಬ ಸಂಕೇತನಾಮ ಹೊಂದಿರುವ ಈ ಕಾರ್ಯಾಚರಣೆಯು, ಅಫ್ಘಾನ್ ರಾಜಧಾನಿಯ ಮೇಲೆ ಪಾಕಿಸ್ತಾನ ನಡೆಸಿದ ಅತ್ಯಂತ ವ್ಯಾಪಕವಾದ ಬಾಂಬ್ ದಾಳಿ. 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಅವರ ದಕ್ಷಿಣದ ಶಕ್ತಿ ನೆಲೆಯ ಮೇಲೆ ಅದರ ಮೊದಲ ವೈಮಾನಿಕ ದಾಳಿಯಾಗಿದೆ.
ಪಾಕಿಸ್ತಾನಕ್ಕೆ ಮತ್ತೆ ಆಘಾತ? ಅಮೆರಿಕ ನಿರ್ಮಿತ F-16 ಯುದ್ಧ ವಿಮಾನ ಹೊಡೆದುರುಳಿಸಿದ ತಾಲಿಬಾನ್!
ವರದಿಯ ಪ್ರಕಾರ, ಪಾಕಿಸ್ತಾನದಿಂದ ಹಿಂತಿರುಗುತ್ತಿದ್ದ ಆಫ್ಘನ್ನರಿಗೆ ವಸತಿ ಕಲ್ಪಿಸಲಾಗಿದ್ದ ಶಿಬಿರವು ರಾತ್ರಿಯಿಡೀ ನಡೆದ ದಾಳಿಯಿಂದ ಹಾನಿಗೊಳಗಾಯಿತು ಎಂದು ತಿಳಿದುಬಂದಿದೆ. ಇಸ್ಲಾಮಾಬಾದ್ ನಡೆಸಿದ ಹಿಂದಿನ ವಾಯುದಾಳಿಗಳಿಗೆ ಪ್ರತೀಕಾರವಾಗಿ ಗುರುವಾರ (ಫೆ. 26) ರಾತ್ರಿ ಅಫ್ಘಾನ್ ಪಡೆಗಳು ಪಾಕಿಸ್ತಾನಿ ಗಡಿ ಪಡೆಗಳ ಮೇಲೆ ದಾಳಿ ಮಾಡಿದ ನಂತರ ಪಾಕಿಸ್ತಾನದ ಆ ಕಾರ್ಯಾಚರಣೆ ನಡೆದಿದೆ. ಪಾಕಿಸ್ತಾನದಲ್ಲಿ ದಾಳಿ ನಡೆಸುವ ಉಗ್ರಗಾಮಿ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲು ಅಫ್ಘಾನಿಸ್ತಾನ ವಿಫಲವಾಗಿದೆ ಎಂದು ಪಾಕ್ ಆರೋಪಿಸಿದೆ. ಆದರೆ ತಾಲಿಬಾನ್ ಸರ್ಕಾರ ಅದನ್ನು ನಿರಾಕರಿಸಿದೆ.