ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ದಾಳಿ; ನೆರೆಹೊರೆಯ ಎರಡು ರಾಷ್ಟ್ರಗಳ ನಡುವಿನ ಯುದ್ಧದ ಬಗ್ಗೆ ಭಾರತದ ನಿಲುವೇನು?

ಭಾರತ ಶಾಂತಿ ಪ್ರಿಯ ರಾಷ್ಟ್ರ ಎಂಬುದು ಜಗತ್ತಿಗೆ ತಿಳಿದ ವಿಚಾರ. ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ನಿರಂತರ ಭಾರತ ಚಾಟಿ ಏಟು ನೀಡುತ್ತಲೇ ಇದೆ. ಈ ನಡುವೆ ಇದೀಗ ಭಾರತದ ನೆರೆಹೊರೆಯ ರಾಷ್ಟ್ರಗಳಾದ ಪಾಕಿಸ್ತಾನ-ಅಫ್ಘಾನಿಸ್ತಾನ ಘರ್ಷಣೆಗೆ ಇಳಿದಿವೆ. ಈ ಕುರಿತು ಭಾರತದ ನಿಲುವು ಏನು ಎಂಬುದರ ಕುರಿತು ನವದೆಹಲಿ ಈ ಹಿಂದೆ ಹೇಳಿದ್ದೇನು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

ಪಾಕಿಸ್ತಾನ-ಅಫ್ಘಾನಿಸ್ತಾನ ಘರ್ಷಣೆ; ಭಾರತ ಹೇಳುವುದೇನು?

ಸಂಗ್ರಹ ಚಿತ್ರ -

ನವದೆಹಲಿ: ಅಫ್ಘಾನಿಸ್ತಾನದ ಗಡಿಯಲ್ಲಿ (Afghan border) ಫೆಬ್ರವರಿ 21ರಂದು ಮಧ್ಯರಾತ್ರಿ ಪಾಕಿಸ್ತಾನ (Pakistan) ಸೇನೆಯು ಹಲವು ವಾಯು ದಾಳಿ ನಡೆಸಿದ ಬಳಿಕ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಅಫ್ಘಾನಿಸ್ತಾನ ( Pak-Afghan clash) ನೀಡಿತ್ತು. ಪಾಕಿಸ್ತಾನವು ಡುರಾಂಡ್ ರೇಖೆಯ ಉದ್ದಕ್ಕೂ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಶಂಕಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಅಡಗುತಾಣಗಳ ಮೇಲೆ ದಾಳಿ ನಡೆಸಿದವು. ಈ ದಾಳಿಯಿಂದ ಈಗಾಗಲೇ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಗಡಿಯಲ್ಲಿ ಘರ್ಷಣೆಗಳು ನಡೆದ ಬಳಿಕ ಪಾಕಿಸ್ತಾನವು ಅಫ್ಘಾನ್ ನ ತಾಲಿಬಾನ್ ಸರ್ಕಾರದ ಮೇಲೆ "ಮುಕ್ತ ಯುದ್ಧ" ಘೋಷಣೆಯನ್ನು ಮಾಡಿದೆ. ಈ ವೇಳೆ ಶಾಂತಿ ಪ್ರಿಯ ರಾಷ್ಟ್ರವಾದ ಭಾರತ ಯಾರ ಬೆಂಬಲಕ್ಕೆ ನಿಲ್ಲಲಿದೆ ಎನ್ನುವ ಕುತೂಹಲ ಉಂಟಾಗಿದೆ.

ಪಾಕಿಸ್ತಾನ ಸೇನೆಯು ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನಿ ಗಡಿ ಪಡೆಗಳ ಮೇಲೆ ದಾಳಿ ನಡೆಸಿತ್ತು. ಈ ನಡುವೆ ಪಾಕಿಸ್ತಾನವು ಅಫ್ಘಾನಿಸ್ತಾನದ ಕಾಬೂಲ್ ಮತ್ತು ಕಂದಹಾರ್ ಮೇಲೆ ಬಾಂಬ್ ದಾಳಿ ಮಾಡಿತ್ತು. ಇದರ ಬಳಿಕ ಪಾಕಿಸ್ತಾನ ಅಫ್ಘಾನಿಸ್ತಾನದ ಮೇಲೆ ಮುಕ್ತ ಯುದ್ಧದ ಘೋಷಣೆಯನ್ನು ಮಾಡಿದೆ. ಇದು ಈಗ ಕತಾರ್ ಮತ್ತು ಟರ್ಕಿ ನಡುವಿನ ಕದನ ವಿರಾಮವನ್ನು ಹಾಳು ಮಾಡಿದೆ.

ಪಾಕಿಸ್ತಾನಕ್ಕೆ ಮತ್ತೆ ಆಘಾತ? ಅಮೆರಿಕ ನಿರ್ಮಿತ F-16 ಯುದ್ಧ ವಿಮಾನ ಹೊಡೆದುರುಳಿಸಿದ ತಾಲಿಬಾನ್‌!

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ಇದನ್ನು ಆರಂಭದಲ್ಲೇ ಭಾರತ ಖಂಡಿಸಿತ್ತು. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ದಾಳಿಯನ್ನು ಖಂಡಿಸಿ ಪಾಕಿಸ್ತಾನವು ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಡಲು ಅಫ್ಘಾನ್ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದರು.

ಅವರನ್ನು ಹೊರತು ಪಡಿಸಿ ಯಾವುದೇ ಭಾರತೀಯ ಅಧಿಕಾರಿಯು ಅಧಿಕೃತವಾಗಿ ಹೇಳಿಕೆಯನ್ನು ನೀಡಿಲ್ಲ. ಆದರೂ ಈ ಹಿಂದೆ ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ನವದೆಹಲಿಯು ಅಫ್ಘಾನಿಸ್ತಾನದ ಸಾರ್ವಭೌಮತ್ವವನ್ನು ಬೆಂಬಲಿಸಿತ್ತು.

ಭಾರತ ಹೇಳಿದ್ದೇನು?

ಕಳೆದ ಅಕ್ಟೋಬರ್‌ ತಿಂಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಉದ್ವಿಗ್ನತೆ ತೀವ್ರವಾಗಿ ಹೆಚ್ಚಳವಾಗಿತ್ತು. ಇದೇ ಸಂದರ್ಭದಲ್ಲಿ ಅಫ್ಘಾನ್ ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಆಗ ಭಾರತವು ಅಫ್ಘಾನಿಸ್ತಾನವನ್ನು ಬೆಂಬಲಿಸಿದ್ದು, ಭಯೋತ್ಪಾದನೆಯನ್ನು ಪ್ರಾಯೋಜಿಸುವುದಕ್ಕಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿತ್ತು. ಅಲ್ಲದೇ ಭಾರತವು ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯವನ್ನು ಬೆಂಬಲಿಸುವುದಾಗಿ ಹೇಳಿತ್ತು.

ಅನಂತರ ನಡೆದ ಘರ್ಷಣೆಗಳಲ್ಲಿ ಅಫ್ಘಾನ್ ನಾಗರಿಕರ ಸಾವನ್ನು ಭಾರತವು ಖಂಡಿಸಿತ್ತು. ಇತ್ತೀಚೆಗೆ ಇಸ್ಲಾಮಾಬಾದ್ ಪೂರ್ವ ಅಫ್ಘಾನಿಸ್ತಾನದ ನಂಗರ್‌ಹಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿನ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಾಗಲೂ ನವದೆಹಲಿಯು ಇದನ್ನು ಖಂಡಿಸಿ ಅಫ್ಘಾನ್ ಪರ ತನ್ನ ನಿಲುವನ್ನು ಮಂಡಿಸಿತ್ತು.

ಅಲ್ಲದೇ ಮುತ್ತಕಿ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಾಕಿಸ್ತಾನವು ಭಾರತವನ್ನು ಗುರಿಯಾಗಿಸಿಕೊಂಡು "ಭಾರತೀಯ ಪ್ರಾಕ್ಸಿಗಳು" ಅಫ್ಘಾನ್ ಪ್ರದೇಶದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದ್ದು, ಇದನ್ನು ಭಾರತ ಆಧಾರರಹಿತ ಎಂದು ಹೇಳಿ ನಿರಾಕರಿಸಿತ್ತು.

ಪಾಕ್‌- ಅಫ್ಘಾನ್‌ ನೇರ ಕದನ ಶುರು; ಕಾಬೂಲ್ ಮೇಲೆ ವೈಮಾನಿಕ ದಾಳಿ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ನೇರ ಸಂಘರ್ಷ

ಪಾಕಿಸ್ತಾನ ನಡೆಸಿದ ಮಿಲಿಟರಿ ದಾಳಿಗಳ ಬಳಿಕ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ ಅವರು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ನಮ್ಮ ತಾಳ್ಮೆ ಈಗ ಮೀರಿದೆ. ಈಗ ನಮ್ಮ ನಡುವಿನ ಮುಕ್ತ ಯುದ್ಧ ನಡೆಯಲಿದೆ. ಅಫ್ಘಾನಿಸ್ತಾನ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂದು ಹೇಳಿದ್ದರು.

ಪಾಕಿಸ್ತಾನವು ಮಿಲಿಟರಿ ಕಾರ್ಯಾಚರಣೆಯಲ್ಲಿ ಕನಿಷ್ಠ 70 ಉಗ್ರರನ್ನು ಕೊಂದಿದೆ ಎಂದು ಹೇಳಿದ್ದರೆ, ಇಸ್ಲಾಮಾಬಾದ್ ಕಾಬೂಲ್ ಮೇಲೆ ವಾಯುದಾಳಿ ನಡೆಸಿದ್ದರಿಂದ 130 ಕ್ಕೂ ಹೆಚ್ಚು ತಾಲಿಬಾನ್ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಹೇಳಿದೆ.