ಮಾಸ್ಕೋ, ಸೆ. 20: ರಷ್ಯಾದ (Russia) ಸಂಸತ್ ಚುನಾವಣೆಯ ಅಂತಿಮ ದಿನದಂದು ಮಾಸ್ಕೋ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ನಡೆಸಿದ ನೂರಾರು ಡ್ರೋನ್ ದಾಳಿಗಳಲ್ಲಿ (Moscow Drone Attack) ಇಬ್ಬರು ಮೃತಪಟ್ಟಿದ್ದಾರೆ. ಪ್ರಮುಖ ತೈಲ ಸಂಸ್ಕರಣಾಗಾರವೊಂದು ಹಾನಿಗೊಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿಯುದ್ದಕ್ಕೂ ಬಂದ 1,600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಇವುಗಳಲ್ಲಿ 450ಕ್ಕೂ ಹೆಚ್ಚು ಡ್ರೋನ್‌ಗಳು ನೇರವಾಗಿ ಮಾಸ್ಕೋ ನಗರವನ್ನೇ ಗುರಿಯಾಗಿಸಿಕೊಂಡಿದ್ದವು ಎಂದು ಮಾಸ್ಕೋದ ಮೇಯರ್ ಸೆರ್ಗೆಯ್ ಸೋಬಯಾನಿನ್ ಎಂದು ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 26 ವರ್ಷಗಳ ಅಧಿಕಾರದ ಚುಕ್ಕಾಣಿಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಬಿಗಿ ಭದ್ರತೆಯಲ್ಲಿ ಮೂರು ದಿನಗಳ ಕಾಲ ನಡೆದ ಚುನಾವಣೆಯಲ್ಲಿ ಉಕ್ರೇನ್ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದೆ ಎಂದು ಸೆರ್ಗೆಯ್ ಸೋಬಯಾನಿನ್ ಆರೋಪಿಸಿದರು. ಆದರೆ, ಶತ್ರು ರಾಷ್ಟ್ರ ಇದರಲ್ಲಿ ಯಶಸ್ವಿಯಾಗಲಿಲ್ಲ ಎಂದು ಅವರು ಹೇಳಿದರು.
ನಮ್ಮ ದಾಳಿ ಮಾಸ್ಕೋ ಪ್ರದೇಶದಲ್ಲಿ ಅತ್ಯಂತ ಮಹತ್ವದ ಪ್ರಭಾವವನ್ನು ಬೀರಿವೆ ಎಂದು ಹೇಳಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಈ ಡ್ರೋನ್ ದಾಳಿಗಳನ್ನು ಶ್ಲಾಘಿಸಿದ್ದಾರೆ. “ರಷ್ಯಾದ ಪ್ರಮುಖ ತೈಲ ಉದ್ಯಮದ ಸೌಲಭ್ಯಗಳಲ್ಲಿ ಒಂದಾದ ಮತ್ತು ರಷ್ಯಾದ ಲಾಜಿಸ್ಟಿಕ್ಸ್ ಸೌಲಭ್ಯದ ಮೇಲೆ ದಾಳಿ ನಡೆಸಲಾಗಿದೆʼʼ ಎಂದು ಅವರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇಲ್ಲಿದೆ ಪೋಸ್ಟ್:
ಉಕ್ರೇನ್ ವಿರುದ್ಧದ ಯುದ್ಧಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ ರಷ್ಯಾ
ಉಕ್ರೇನ್ ದಾಳಿಯಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. 44 ವರ್ಷದ ಮಹಿಳೆ ಮತ್ತು ವೃದ್ಧ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಮಾಸ್ಕೋ ಪ್ರಾದೇಶಿಕ ಗವರ್ನರ್ ಆಂಡ್ರೆ ವೊರೊಬಿಯೊವ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. 21 ಅಂತಸ್ತಿನ ಕಟ್ಟಡಕ್ಕೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿಯುಂಟಾಗಿದ್ದು, 400 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವೊರೊಬಿಯೊವ್ ಹೇಳಿದರು.
2022ರ ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸಿ ಸಂಘರ್ಷ ಆರಂಭಿಸಿದ ನಂತರ, ರಷ್ಯಾದಲ್ಲಿ ನಡೆಯುತ್ತಿರುವ ಮೊದಲ ಸಂಸತ್ ಚುನಾವಣೆ ಇದಾಗಿದೆ. ರಷ್ಯಾದ ಪ್ರಜೆಗಳು ತಮ್ಮ ಮತದಾನ ಪ್ರಕ್ರಿಯೆಯನ್ನು ಆರಂಭಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
ವ್ಲಾಡಿಮಿರ್ ಪುಟಿನ್ ಮತ್ತು ಕ್ರೆಮ್ಲಿನ್‌ನ (ರಷ್ಯಾ ಸರ್ಕಾರದ) ಮಿಲಿಟರಿ ಕಾರ್ಯಾಚರಣೆಯನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಿಗೆ ಮಾತ್ರವೇ ಈ ಚುನಾವಣೆಯಲ್ಲಿ ಸ್ಪರ್ಧಿಸಲು ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ರಷ್ಯಾ ಸೇನೆಯು ತನ್ನ ವಶಕ್ಕೆ ಪಡೆದುಕೊಂಡಿರುವ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿಯೂ ಮಾಸ್ಕೋ ಆಡಳಿತವು ಕಡ್ಡಾಯ ಮತದಾನ ಪ್ರಕ್ರಿಯೆಯನ್ನು ಆಯೋಜಿಸಿದೆ.