ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇದು ಬಾಂಗ್ಲಾದೇಶ ಫೈಲ್ಸ್‌; ಮುಂದುವರಿದ ಹಿಂದೂಗಳ ಹತ್ಯಾಕಾಂಡ: ಥಳಿಸಿ, ವಿಷವುಣಿಸಿ ಮತ್ತೊಬ್ಬ ಯುವಕನ ಕೊಲೆ

Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆ ಮತ್ತೆ ಮುಂದುವರಿದಿದೆ. ಸುನಂಗಂಜ್‌ ಜಿಲ್ಲೆಯಲ್ಲಿ ಜಾಯ್‌ ಮಹಾಪಾತ್ರೊ (19) ಎನ್ನುವ ಯುವಕನನ್ನು ಥಳಿಸಿ, ವಿಷ ಉಣಿಸಿ ಅಲ್ಲಿನ ಉದ್ರಿಕ್ತರ ಗುಂಪು ಕೊಲೆ ಮಾಡಿದೆ. ಈ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ

ಜಾಯ್‌ ಮಹಾಪಾತ್ರೊ (ಸಂಗ್ರಹ ಚಿತ್ರ). -

Ramesh B
Ramesh B Jan 10, 2026 6:12 PM

ಢಾಕಾ, ಜ. 10: ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆ ಮತ್ತೆ ಮುಂದುವರಿದಿದೆ (Bangladesh Unrest). ಮುಹಮ್ಮದ್‌ ಯೂನುಸ್‌ ನೇತೃತ್ವದ ಮಧ್ಯಂತರ ಸರಕಾರ ಹಿಂದೂಗಳ ಮೇಲಿನ ದೌರ್ಜನ್ಯ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದೀಗ ಮತ್ತೊಬ್ಬ ಹಿಂದೂ ಯುವಕ ಬಲಿಯಾಗಿದ್ದಾನೆ. ಸುನಂಗಂಜ್‌ ಜಿಲ್ಲೆಯಲ್ಲಿ ಜಾಯ್‌ ಮಹಾಪಾತ್ರೊ (19) ಎನ್ನುವ ಯುವಕನನ್ನು ಥಳಿಸಿ, ವಿಷ ಉಣಿಸಿ ಅಲ್ಲಿನ ಉದ್ರಿಕ್ತರ ಗುಂಪು ಕೊಲೆ ಮಾಡಿದೆ. ಆ ಮೂಲಕ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂದೂಗಳ ಹತ್ಯೆಯ ಸರಣಿ ಮುಂದುವರಿದಿದ್ದು, ಭಾರತ ಕಳವಳ ವ್ಯಕ್ತಪಡಿಸಿದೆ.

ʼʼಜಾಯ್‌ಗೆ ಸ್ಥಳೀಯರ ಗುಂಪು ಥಳಿಸಿ ವಿಷ ಪ್ರಾಶನ ಮಾಡಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಸೈಹೆಟ್‌ ಎಂಎಜಿ ಒಸ್ಮಾನಿ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ (Sylhet MAG Osmani Medical College Hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆʼʼ ಎಂದು ಆತನ ಮನೆಯವರು ತಿಳಿಸಿದ್ದಾರೆ.

ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಲೇ ಇದ್ದು, 1 ತಿಂಗಳ ಅಂತರದೊಳಗೆ 7 ಮಂದಿ ಹಿಂದೂಗಳನ್ನು ಸ್ಥಳೀಯರು ಹತ್ಯೆ ಮಾಡಿದ್ದಾರೆ. ಡಿಸೆಂಬರ್‌ 18ರಂದು ಮೈಮೇನ್‌ಸಿಂಗ್‌ ಜಿಲ್ಲೆಯಲ್ಲಿ 27 ವರ್ಷದ ದೀಪು ಚಂದ್ರ ದಾಸ್‌ ಎನ್ನುವ ಯುವಕನನ್ನು ಕೊಲೆ ಮಾಡುವ ಈ ಮೂಲಕ ಈ ಹತ್ಯಾಕಾಂಡ ಆರಂಭವಾಯಿತು. ಅದಾದ ಬಳಿಕ ಒಂದರ ಹಿಂದೊರಂತೆ ಹಿಂದೂಗಳ ಹತ್ಯೆ ನಡೆಯುತ್ತಲೇ ಇದ್ದು, ಅಲ್ಲಿನ ಸರಕಾರ ಕೈಕಟ್ಟಿ ಕುಳಿತಿದೆ. ಅಲ್ಲಿನ ಸರಕಾರ ಹಿಂದೂಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಹಾದಿಯನ್ನು ಕೊಂದಿದ್ದು ಅವರೇ; ಯೂನಸ್‌ ಸರ್ಕಾರದ ವಿರುದ್ಧ ಉಸ್ಮಾನ್ ಸಹೋದರ ಗಂಭೀರ ಆರೋಪ

ಇತ್ತೀಚಿನ ಘಟನೆಯಲ್ಲಿ ಜನವರಿ 5ರಂದು ರಾತ್ರಿ ನರಸಿಂಗಡಿ ಜಿಲ್ಲೆಯ ಚಾರ್ಸಿಂದೂರ್ ಬಜಾರ್‌ನಲ್ಲಿ ದಿನಸಿ ವ್ಯಾಪಾರಿ ಮಣಿ ಚಕ್ರವರ್ತಿ ಅವರನ್ನು ಹತ್ಯೆ ಮಾಡಲಾಗಿತ್ತು. ಸ್ಥಳೀಯ ಮೂಲಗಳ ಪ್ರಕಾರ, ಚಕ್ರವರ್ತಿ ಪಲಾಶ್ ಉಪಜಿಲ್ಲಾದ ಜನನಿಬಿಡ ಮಾರುಕಟ್ಟೆಯ ತಮ್ಮ ಅಂಗಡಿಯಲ್ಲಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದರು. ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ದಾರಿಯಲ್ಲಿ ಅವರು ಸಾವನ್ನಪ್ಪಿದ್ದರು.

ಅದಕ್ಕೂ ಮೊದಲು ಹಿಂದೂ ವಿಧವೆಯೊಬ್ಬರ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿದ್ದರು. ಜತೆಗೆ ಹಿಂದೂ ಪತ್ರಕರ್ತನೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು.

ಭಾರತ ಕಳವಳ

ಬಾಂಗ್ಲಾದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಹಿಂದೂಗಳ ಮೇಲಿನ ದೌರ್ಜನ್ಯ ಕ್ರೌರ್ಯ ಮುಂದುವರಿದಿದೆ. ನೆರೆ ರಾಷ್ಟ್ರದಲ್ಲಿ ನಡೆಯುತ್ತಿರುವ ಘಟನೆಗೆ ಭಾರತೀಯ ವಿದೇಶಾಂಗ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಹಿಂದೂಗಳು ಸೇರಿದಂತೆ ಅಲ್ಪ ಸಂಖ್ಯಾತರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದೆ.

ನೆರೆಯ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ಮೇಲೆ ಪದೇ ಪದೆ ನಡೆಯುತ್ತಿರುವ ದಾಳಿಗಳ ಕುರಿತು ಮಾತನಾಡಿದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಈ ಘಟನೆಗಳನ್ನು ತ್ವರಿತವಾಗಿ ಮತ್ತು ದೃಢವಾಗಿ ಎದುರಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.