ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏನಾಗ್ತಿದೆ ಬಾಂಗ್ಲಾದೇಶದಲ್ಲಿ? ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; 10 ದಿನಗಳ ಅಂತರದಲ್ಲಿ 3 ಹಿಂದೂಗಳ ಹತ್ಯೆ

Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆ ಮುಂದುವರಿದಿದೆ. ದೀಪು ಚಂದ್ರ ದಾಸ್, ಅಮೃತ್ ಮಂಡಲ್ ಆಲಿಯಾಸ್‌ ಸಾಮ್ರಾಟ್‌ ಬಳಿಕ ಇದೀಗ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಬಾಂಗ್ಲಾದೇಶದ ಮೈಮೆನ್ಸಿಂಗ್‌ನಲ್ಲಿ 40 ವರ್ಷದ ಬಜೇಂದ್ರ ಬಿಸ್ವಾಸ್‌ ಮೃತಪಟ್ಟಿದ್ದು, ಅಲ್ಲಿನ ಹಿಂದೂಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ

ಸಾಂದರ್ಭಿಕ ಚಿತ್ರ. -

Ramesh B
Ramesh B Dec 30, 2025 7:14 PM

ಢಾಕಾ, ಡಿ. 30: ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಮುಂದುವರಿದಿದೆ (Bangladesh Unrest). ದೀಪು ಚಂದ್ರ ದಾಸ್, ಅಮೃತ್ ಮಂಡಲ್ ಆಲಿಯಾಸ್‌ ಸಾಮ್ರಾಟ್‌ ಬಳಿಕ ಇದೀಗ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಬಾಂಗ್ಲಾದೇಶದ ಮೈಮೆನ್ಸಿಂಗ್‌ನಲ್ಲಿ 40 ವರ್ಷದ ಬಜೇಂದ್ರ ಬಿಸ್ವಾಸ್‌ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಸ್ಥಳದಲ್ಲೇ ಅವರು ಅಸುನೀಗಿದ್ದಾರೆ. ಆ ಮೂಲಕ ಬಾಂಗ್ಲಾದೇಶದಲ್ಲಿ 10 ದಿನಗಳ ಅಂತರದಲ್ಲಿ ಮೂವರು ಹಿಂದೂಗಳ ಹತ್ಯೆಯಾದಂತಾಗಿದೆ. ಕೆಲವು ದಿನಗಳಿಂದ ಸಂಘರ್ಷಭರಿತವಾಗಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತರಾಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಭಾರತ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಭಲುಕಾ ಅಪ್‌ಝಿಲ್ಲಾದ ಬಟ್ಟೆಯ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಜೇಂದ್ರ ಬಿಸ್ವಾಸ್‌ ಮೇಲೆ ಸಹೋದ್ಯೋಗಿ ನೋಮನ್ ಮಿಯಾ (22) ಗುಂಡಿನ ದಾಳಿ ನಡೆಸಿದ್ದಾನೆ. ಬಜೇಂದ್ರ ಬಿಸ್ವಾಸ್‌ ಸ್ಥಳದಲ್ಲೇ ಮೃತಪಟ್ಟಿದ್ದು, ನೋಮನ್ ಮಿಯಾನನ್ನು ಇದೀಗ ಬಂಧಿಸಲಾಗಿದೆ.

ಬಾಂಗ್ಲಾದೇಶದಲ್ಲಿನ ಬೆಳವಣಿಗೆ ಬಗ್ಗೆ ಮಾಹಿತಿ:



ಶೂಟೌಟ್‌ಗೆ ಮುನ್ನ 2 ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಅದಾದ ಬಳಿಕ ನೋಮನ್‌ ಮಿಯಾ ಗುಂಡು ಹಾರಿದ್ದಾನೆ ಎನ್ನಲಾಗಿದೆ. ಗುಂಡು ತಗುಲಿದ ಬಜೇಂದ್ರ ಬಿಸ್ವಾಸ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದಾಗ್ಯೂ, ನೋಮನ್‌ ಮಿಯಾ ಗನ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದಿದ್ದು, ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೀಪು ಚಂದ್ರ ದಾಸ್‌ ಹತ್ಯೆ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ

ಬಜೇಂದ್ರ ಬಿಸ್ವಾಸ್ ಅನ್ಸಾರ್ ಗ್ರಾಮ ರಕ್ಷಣಾ ಸಮಿತಿಯ ಸದಸ್ಯರಾಗಿದ್ದರು. ದುಷ್ಕರ್ಮಿಗಳಿಂದ ಗ್ರಾಮಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ಅರೆಸೈನಿಕ ಸಂಘಟನೆ ಈ ಅನ್ಸಾರ್ ಗ್ರಾಮ ರಕ್ಷಣಾ ಸಮಿತಿ. ಅಲ್ಲದೆ ಬಜೇಂದ್ರ ಸ್ಥಳೀಯ ಭದ್ರತಾ ಕರ್ತವ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಅನ್ಸಾರ್ ಸಿಬ್ಬಂದಿಯನ್ನು ಹೆಚ್ಚಾಗಿ ಸರ್ಕಾರಿ ಕಟ್ಟಡಗಳು, ಕಾರ್ಖಾನೆಗಳು, ಬ್ಯಾಂಕ್‌ಗಳು ಮತ್ತು ಚುನಾವಣಾ ಸ್ಥಳಗಳ ಭದ್ರತೆಗಾಗಿ ನಿಯೋಜಿಸಲಾಗುತ್ತದೆ. ಅಪಾಯ ಸಾಧ್ಯತೆಯ ಪ್ರದೇಶಗಳಲ್ಲಿ ಈ ಸಂಘಟನೆಯ ಸದಸ್ಯರು ಶಸ್ತ್ರಸಜ್ಜಿತರಾಗಿರುತ್ತಾರೆ. ಘಟನೆಯ ಸಮಯದಲ್ಲಿ ಕಾರ್ಖಾನೆಯಲ್ಲಿ ಸುಮಾರು 20 ಅನ್ಸಾರ್ ಸಿಬ್ಬಂದಿ ಇದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಆಕಸ್ಮಿಕವೇ?

ಸದ್ಯ ಈ ಘಟನೆ ಆಕಸ್ಮಿಕವಾಗಿ ನಡೆದ ಆಪತ್ತು ಎಂದು ಬಾಂಗ್ಲಾದೇಶದ ಅಧಿಕಾರಿಗಳು ಹೇಳುತ್ತಿದ್ದರೂ ಈ ಬಗ್ಗೆ ಅನುಮಾನ ಮೂಡಿದೆ. ಕೆಲವು ದಿನಗಳಿಂದ ಅಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಘಟನೆಯೊಂದಿಗೆ ಬಾಂಗ್ಲಾದೇಶದಲ್ಲಿ 10 ದಿನಗಳ ಅಂತರದಲ್ಲಿ ಮೂವರು ಹಿಂದೂಗಳ ಹತ್ಯೆಯಾಗಿರುವುದು ಕಳವಳ ಹುಟ್ಟು ಹಾಕಿದೆ. ದೀಪು ಚಂದ್ರ ದಾಸ್ ಅವರನ್ನು ಒಂದು ವಾರದ ಹಿಂದೆ ಇದೇ ಮೈಮೆನ್ಸಿಂಗ್‌ನಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಅದಾದ ಬಳಿಕ ಅಮೃತ್ ಮೊಂಡಲ್ ಅವರನ್ನು ಉದ್ರಿಕ್ತ ಜನರ ಗುಂಪು ಕೊಲೆ ಮಾಡಿತ್ತು. ಅಲ್ಲದೆ ಅಲ್ಲಿನ ಅಧಿಕಾರಿಗಳು ಅಮೃತ್ ಮೊಂಡಲ್‌ನನ್ನು ಡಕಾಯಿತ ಗುಂಪಿನ ಮುಖಂಡ ಎಂದು ಕರೆದಿದ್ದರು. ಆತ ಮನೆಯೊಂದಕ್ಕೆ ದರೋಡೆ ಮಾಡಲು ದಾಳಿ ನಡೆಸಿದಾಗ ಉದ್ರಿಕ್ತ ಗುಂಪು ಪ್ರತಿದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ಹೀಗಾಗಿ ಇದೀಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ ಎನ್ನುವ ಅಧಿಕಾರಿಗಳ ವಾದ ಅನುಮಾನ ಮೂಡಿಸಿದೆ.