ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Baloch Liberation Army: ಪಾಕಿಸ್ತಾನದ 14 ಸೈನಿಕರ ಹತ್ಯೆ ಮಾಡಿದ ಬಲೂಚ್‌ ಲಿಬರೇಷನ್‌ ಆರ್ಮಿ; ವಿಡಿಯೊ ರಿಲೀಸ್‌

ಪಾಕಿಸ್ತಾನದ ಮಗ್ಗುಲ ಮುಳ್ಳಾಗಿರುವ ಬಲೂಚ್‌ ಲಿಬರೇಷನ್‌ ಆರ್ಮಿ ಇದೀಗ ಮೇ 9ರಂದು ನಡೆದ ಪಾಕ್‌ ಸೈನಿಕರ ಮೇಲಿನ ದಾಳಿಯ ವಿಡಿಯೊ ರಿಲೀಸ್‌ ಮಾಡಿದೆ. ಪಂಜ್‌ಗುರ್‌ ಜಿಲ್ಲೆಯ ಮಜ್‌ಬೂರಾಬಾದ್‌ನ ಬೋನಿಸ್ತಾನ್‌ನಲ್ಲಿ ನಡೆದ ಗ್ರೆನೇಡ್‌ ದಾಳಿ 14 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದರು.

ಪಾಕ್‌ ಸೈನಿಕರ ಹತ್ಯೆಯ ವಿಡಿಯೊ ರಿಲೀಸ್‌ ಮಾಡಿದ ಬಲೂಚ್‌ ಲಿಬರೇಷನ್‌ ಆರ್ಮಿ

ಬಲೂಚ್‌ ಲಿಬರೇಷನ್‌ ಆರ್ಮಿ.

Profile Ramesh B May 15, 2025 7:31 PM

ಇಸ್ಲಾಮಾಬಾದ್‌: ಬಲೂಚಿಸ್ತಾನಿಗಳ ಪ್ರತ್ಯೇಕತೆಯ ಕೂಗಿಗೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿ ಹೋಗಿದೆ. ಮೇ 9ರಂದು ದಾಳಿ ನಡೆಸಿ 14 ಪಾಕಿಸ್ತಾನದ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದ ಬಲೂಚ್‌ ಲಿಬರೇಷನ್‌ ಆರ್ಮಿ (Baloch Liberation Army) ಇದೀಗ ಈ ದಾಳಿಯ ವಿಡಿಯೊ ಬಿಡುಗಡೆ ಮಾಡಿದೆ. ʼಆಪರೇಷನ್‌ ಹೆರೋಫ್‌ʼ (Operation Herof) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ್ದ ಬಿಎಲ್‌ಎ (BLA) ಕಾರ್ಯಕರ್ತರು ಮೇ 9ರಂದು ಪಂಜ್‌ಗುರ್‌ ಜಿಲ್ಲೆಯ ಮಜ್‌ಬೂರಾಬಾದ್‌ನ ಬೋನಿಸ್ತಾನ್‌ನಲ್ಲಿ ಗ್ರೆನೇಡ್‌ ದಾಳಿ ನಡೆಸಿ 14 ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದ್ದರು.

ಪಾಕಿಸ್ತಾನದ ಸೈನಿಕರು ಸಾಗುತ್ತಿದ್ದ ವಾಹನದ ಮೇಲೆ ಗ್ರೆನೇಡ್‌ ದಾಳಿ ನಡೆಸಲಾಗಿದ್ದು, ಬುಲೆಟ್‌ಪ್ರೂಫ್‌ ವಾಹನ ಸಂಪೂರ್ಣ ನಾಶವಾಗಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಈ ವಿಡಿಯೊ ಬಿಡುಗಡೆ ಮಾಡುವ ಮೂಲಕ ಬಿಎಲ್‌ಎ ಈ ದಾಳಿಯ ಹಿಂದೆ ತಾನಿರುವುದನ್ನು ದೃಢಪಡಿಸಿದೆ. ಈ ದಾಳಿಯನ್ನು ಮುಚ್ಚಿಡುತ್ತಲೇ ಬಂದ ಪಾಕಿಸ್ತಾನಕ್ಕೆ ಇದರಿಂದ ತೀವ್ರ ಮುಖಭಂಗವಾದಂತಾಗಿದೆ.

ಬಲೂಚ್‌ ಲಿಬರೇಷನ್‌ ಆರ್ಮಿ ರಿಲೀಸ್‌ ಮಅಡಿದ ವಿಡಿಯೊ:



ಈ ಸುದ್ದಿಯನ್ನೂ ಓದಿ: Balochistan Blast: ಪಾಕ್‌ ಸೇನೆಗೇ ಬಾಂಬ್‌ ಇಟ್ಟ ಬಲೂಚಿಸ್ತಾನ ಹೋರಾಟಗಾರರು, 8 ಪಾಕ್‌ ಸೈನಿಕರ ಸಾವು

ಬಲೂಚ್ ಲಿಬರೇಶನ್ ಆರ್ಮಿಯ ವಕ್ತಾರ ಜೀಯಂಡ್ ಬಲೂಚ್ ಈ ಬಗ್ಗೆ ಹೇಳಿಕೆ ನೀಡಿ, ʼʼಬಿಎಲ್‌ಎ ಸ್ವಾತಂತ್ರ್ಯ ಹೋರಾಟಗಾರರು ಕ್ವೆಟ್ಟಾ ಮತ್ತು ಮಸ್ತುಂಗ್‌ನಲ್ಲಿ ಪಾಕಿಸ್ತಾನಿ ಸೈನ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆʼʼ ಎಂದು ತಿಳಿಸಿದ್ದಾರೆ.

"ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಗಾರರು ಕ್ವೆಟ್ಟಾದಲ್ಲಿ ಪಾಕಿಸ್ತಾನಿ ಸೇನೆಯ ಆಶ್ರಯದಲ್ಲಿ ಆಯೋಜಿಸಲಾದ ವಿಕ್ಟರಿ ಸೆಲೆಬ್ರೇಷನ್ಸ್ ರ‍್ಯಾಲಿಯನ್ನು ಗುರಿಯಾಗಿಸಿಕೊಂಡು ಮುನೀರ್ ಮೆಂಗಲ್ ರಸ್ತೆಯಲ್ಲಿ ಗ್ರೆನೇಡ್ ದಾಳಿ ನಡೆಸಿದರು. ಈ ರ‍್ಯಾಲಿಯ ನೇತೃತ್ವವನ್ನು ಎಂಪಿಎ ಅಲಿ ಮದದ್ ಜಟ್ಟಕ್ ವಹಿಸಿದ್ದರುʼʼ ಎಂದು ಹೇಳಿದ್ದಾರೆ. ಇದೀಗ ಬಲೂಚ್ ವಿಮೋಚನಾ ಚಳುವಳಿ ಸಾರ್ವಜನಿಕ ಬೆಂಬಲದೊಂದಿಗೆ ಬಲವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಗ್ರೆನೇಡ್‌ ದಾಳಿ

ಹ್ಯಾಂಡ್ ಗ್ರೆನೇಡ್ ದಾಳಿ ನಡೆದ ಮಸ್ತಂಗ್‌ ಚೆಕ್‌ಪಾಯಿಂಟ್‌ನಲ್ಲಿ ಸಿಬ್ಬಂದಿ ಶೋಧದ ಹೆಸರಿನಲ್ಲಿ ಜನರನ್ನು ಅವಮಾನಿಸುತ್ತಿದ್ದರು ಎಂದು ಬಿಎಲ್‌ಎ ಒತ್ತಿ ಹೇಳಿದೆ. “ಬಲೂಚ್ ಲಿಬರೇಶನ್ ಆರ್ಮಿ ಸ್ವಾತಂತ್ರ್ಯ ಹೋರಾಟಗಾರರು ಮಸ್ತಂಗ್‌ನ ಎಂಸಿಸಿ ಕ್ರಾಸ್‌ನಲ್ಲಿರುವ ಪಾಕಿಸ್ತಾನಿ ಸೇನೆಯ ಚೆಕ್‌ಪಾಯಿಂಟ್‌ನಲ್ಲಿ ನಿಯೋಜಿಸಲಾದ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಹ್ಯಾಂಡ್ ಗ್ರೆನೇಡ್ ದಾಳಿ ನಡೆಸಿದರು. ಈ ಚೆಕ್‌ಪಾಯಿಂಟ್‌ನಲ್ಲಿ ಬಲೂಚ್ ಜನರನ್ನು ಅವಮಾನಿಸಲಾಗುತ್ತಿತ್ತು. ಮಹಿಳೆಯರು ಮತ್ತು ವೃದ್ಧರಿಗೂ ಕಿರಿಕಿರಿ ನೀಡಲಾಗುತ್ತಿತ್ತುʼʼ ಎಂದು ಪ್ರಕಟಣೆ ಹೇಳಿದೆ.

ಪ್ರಕಟಣೆಯ ಕೊನೆಯಲ್ಲಿ ಬಿಎಲ್‌ಎ, ಪಾಕಿಸ್ತಾನ ಸೇನೆಯ ವಿರುದ್ಧದ ತಮ್ಮ ಈ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದೆ. ಆ ಮೂಲಕ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದೆ.

ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ

ಈ ಮಧ್ಯೆ ಮಹತ್ವದ ಬೆಳವಣಿಗೆಯಲ್ಲಿ ಪಾಕ್‌ನಿಂದ ಪ್ರತ್ಯೇಕಗೊಳ್ಳಲು ದಶಕಗಳಿಂದ ಹೋರಾಟ ನಡೆಸುತ್ತಿರುವ ಬಲೂಚಿಗರು, ಸ್ವಾತಂತ್ರ್ಯ ಘೋಷಿಸಿಕೊಂಡಿದ್ದಾರೆ. ಬಲೂಚ್ ಪ್ರತಿನಿಧಿ ಮೀರ್ ಯಾರ್ ಸ್ವಾತಂತ್ರ್ಯ ಘೋಷಿಸಿದ್ದು, ಇನ್ಮುಂದೆ ಬಲೂಚಿಸ್ತಾನ ಪಾಕ್‌ನ ಭಾಗ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದಾರೆ.