ಇಸ್ಲಾಮಾಬಾದ್, ಸೆ. 29: ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (BLF) ಸಂಘಟನೆಯು ಹೊಸದಾಗಿ ರಚಿಸಿರುವ ಮಹಿಳಾ ಘಟಕ ಕರಿಮಾ ಆರ್ಮ್ಡ್ ಅಸಾಲ್ಟ್ ಡಿವಿಷನ್ (Karima Armed Assault Division-KAAD) ನಡೆಸಿದ ಮೊದಲ ಸಶಸ್ತ್ರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಸೈನಿಕರು ಮೃತಪಟ್ಟಿದ್ದಾರೆ. ಕಾರ್ಯಾಚರಣೆಯ ದೃಶ್ಯಗಳನ್ನು ಸಂಘಟನೆ ಬಿಡುಗಡೆ ಮಾಡಿದೆ. ವಿಡಿಯೊದಲ್ಲಿ ಶಸ್ತ್ರಸಜ್ಜಿತ ಯೋಧರು ಪಾಕಿಸ್ತಾನದ ಸೇನಾ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಸಿರುವುದು ಕಂಡು ಬಂದಿದೆ. ಈ ದಾಳಿಗಳಲ್ಲಿ ಪಾಕಿಸ್ತಾನದ (Pakistan) 9 ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪ್ರತ್ಯೇಕತಾವಾದಿ ಉಗ್ರ ಸಂಘಟನೆ ಬಿಎಲ್‌ಎಫ್ ಹೇಳಿದೆ.
ಸೆಪ್ಟೆಂಬರ್ 22ರಂದು ಬಲೂಚಿಸ್ತಾನ್ ಪ್ರಾಂತ್ಯದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಹೆದ್ದಾರಿಯಲ್ಲಿ ನಡೆದ ಕಾರ್ಯಾಚರಣೆಯ ದೃಶ್ಯಗಳನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಇದು ಟರ್ಬತ್‌ನಲ್ಲಿ ನಡೆದ ಕಾರ್ಯಾಚರಣೆಯಾಗಿದ್ದು, KAAD ಯೋಧರು ರೈಫಲ್‌ಗಳನ್ನು ಹಿಡಿದುಕೊಂಡು ಕ್ವಿಕ್ ರೆಸ್ಪಾನ್ಸ್ ಫೋರ್ಸ್ ಬೆಂಗಾವಲು ಪಡೆಯ ಮೂರು ವಾಹನಗಳ ಗುಂಡಿನ ದಾಳಿ ನಡೆಸಿದ್ದಾರೆ.
ಇಲ್ಲಿದೆ ಪೋಸ್ಟ್:
ಓರ್ವ ಮಹಿಳಾ ಕಮಾಂಡರ್ ವಿಡಿಯೊದಲ್ಲಿ ಕಾರ್ಯಾಚರಣೆಯ ಬಗ್ಗೆ ವಿವರಿಸಿದ್ದಾರೆ. ನಂತರ ಹೋರಾಟಗಾರರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಹಲವು ಪಾಕಿಸ್ತಾನಿ ಮಿಲಿಟರಿ ವಾಹನಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಗುಂಪಿನ ವಕ್ತಾರ ಮೇಜರ್ ಗ್ವಾಹ್ರಾಮ್ ಬಲೋಚ್ ತಿಳಿಸಿದ್ದಾರೆ. ಗುಂಪಿನ ಕುರ್ಬನ್ ಘಟಕವು ಮಹಿಳಾ ಘಟಕದ ಕಾರ್ಯಾಚರಣೆಯನ್ನು ಬೆಂಬಲಿಸಿದೆ ಮತ್ತು ಅವರನ್ನು ಸುತ್ತುವರಿಯಲು ಪ್ರಯತ್ನಿಸಿದ ಪಾಕಿಸ್ತಾನಿ ಪಡೆಗಳ ವಿರುದ್ಧ ಹೋರಾಡುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾಷಣ; ಭಾರತೀಯ ರಾಜತಾಂತ್ರಿಕರ ‘ಸ್ಮೈಲ್’ ವೈರಲ್!
ದಾಳಿಯ ಸಮಯದಲ್ಲಿ ಕುರ್ಬನ್ ಘಟಕದ ಹೋರಾಟಗಾರ ಚಕರ್ ಮುರಾದ್ ಅಲಿಯಾಸ್ ದಿಲೀಪ್ ಜಾನ್ ಹತ್ಯೆಯಾದರು ಎಂದು ಅವರು ಹೇಳಿದ್ದಾರೆ. ಅಲ್ಲದೆ, ಕೆಎಎಡಿ ಸದಸ್ಯರು ಕಲಾತ್‌ನ ಮಂಗ್‌ಚಾರ್ ಪ್ರದೇಶದಲ್ಲಿ ವಾಹನಗಳ ಕ್ಷಿಪ್ರ ತಪಾಸಣೆ ನಡೆಸಿದ್ದಾರೆ.
ಮಾರಿ ಎನರ್ಜಿಸ್ ಲಿಮಿಟೆಡ್ ಸೈಟ್ ಮೇಲೆ ದಾಳಿ
ಪ್ರತ್ಯೇಕ ಘಟನೆಯಲ್ಲಿ, ಬಲೂಚಿಸ್ತಾನದ ಡೇರಾ ಬುಗ್ಟಿಯ ಬೆಹ್ ಲೋಟಿ ಪ್ರದೇಶದಲ್ಲಿರುವ ಮಾರಿ ಎನರ್ಜಿಸ್ ಲಿಮಿಟೆಡ್ ಸೈಟ್ ಮೇಲೆ ಬಲೂಚ್ ರಿಪಬ್ಲಿಕನ್ ಆರ್ಮಿ (ಬಿಆರ್‌ಎ) ರಾಕೆಟ್‌ಗಳು ಮತ್ತು ಭಾರಿ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ಮಾಡಿತು. ಈ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಗುಂಪಿನ ವಕ್ತಾರ ಸರ್ಬಾಜ್ ಬಲೂಚ್ ಹೇಳಿದ್ದಾರೆ.
ಸರ್ಬಾಜ್ ಹೇಳಿಕೆ ಪ್ರಕಾರ, ನಂತರ ನಡೆದ ದಾಳಿಯಲ್ಲಿ 9 ಮಂದಿ ಪಾಕಿಸ್ತಾನಿ ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಅದೇ ದಾಳಿಯಲ್ಲಿ ಸರ್ಕಾರದ ಬೆಂಬಲಿತ ಸ್ಥಳೀಯ ಸಶಸ್ತ್ರ ಗುಂಪಿನ 3 ಸದಸ್ಯರು ಕೂಡ ಅಸುನೀಗಿದ್ದಾರೆ ಎಂದು ಹೇಳಲಾಗಿದೆ. ಬಲೂಚಿಸ್ತಾನ್ ಪೋಸ್ಟ್ ಪ್ರಕಾರ, ಗುಂಪಿನ ಆರು ಹೋರಾಟಗಾರರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಿಆರ್‌ಎ ತಿಳಿಸಿದೆ.
ತನ್ನ ಪಡೆಗಳು ಹಾಜಿ ಶೆಹರ್ ವಶಪಡಿಸಿಕೊಂಡು ಸ್ಥಳೀಯ ಪೊಲೀಸ್ ಠಾಣೆಯನ್ನು ನಾಶಮಾಡಲು ಸ್ಫೋಟಕಗಳನ್ನು ಬಳಸಿದವು ಎಂದು ಬಲೂಚ್ ರಿಪಬ್ಲಿಕನ್ ಗಾರ್ಡ್ಸ್ ಹೇಳಿದೆ.