ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾಷಣ; ಭಾರತೀಯ ರಾಜತಾಂತ್ರಿಕರ ‘ಸ್ಮೈಲ್’ ವೈರಲ್!
Shehbaz Sharif: UNGA ವೇದಿಕೆಯಲ್ಲಿ 2025ರ ಭಾರತ–ಪಾಕಿಸ್ತಾನ ಸಂಘರ್ಷವನ್ನು ಪ್ರಸ್ತಾಪಿಸಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಪಾಕಿಸ್ತಾನ ಸೇನೆಯ ಪ್ರತಿಕ್ರಿಯೆಯನ್ನು ಶ್ಲಾಘಿಸಿದರು. ಈ ವೇಳೆ ಭಾರತದ ಪ್ರತಿನಿಧಿ ಮಂಡಳಿಯ ಸದಸ್ಯ ಆರ್. ಶ್ರೀನಿವಾಸ್ ತಲೆ ಅಲ್ಲಾಡಿಸುತ್ತಾ ಸಣ್ಣ ನಗು ಬೀರುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ವೇಳೆ, ಸಂಘರ್ಷದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಸಮಯೋಚಿತ ಮಧ್ಯಪ್ರವೇಶ’ವನ್ನು ಶೆಹಬಾಜ್ ಶ್ಲಾಘಿಸಿದರು.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ -
ನ್ಯೂಯಾರ್ಕ್, ಸೆ. 26: ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA)ಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಭಾರತ–ಪಾಕಿಸ್ತಾನ ಸಂಘರ್ಷವನ್ನು ಪ್ರಸ್ತಾಪಿಸಿ, ಪಾಕಿಸ್ತಾನದ ಸೇನೆಯ ಕಾರ್ಯಾಚರಣೆಯನ್ನು ಶ್ಲಾಘಿಸಿದರು. ಆದರೆ ಅವರ ಹೇಳಿಕೆಯ ವೇಳೆ ಭಾರತದ ಪ್ರತಿನಿಧಿ ಮಂಡಳಿಯ ಸದಸ್ಯ ಆರ್. ಶ್ರೀನಿವಾಸ್ ಅವರ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಉಗ್ರ ದಾಳಿಯಲ್ಲಿ 26 ಮಂದಿ ನಾಗರಿಕರು ಮೃತಪಟ್ಟ ಬಳಿಕ, ಭಾರತವು ಮೇ 7ರಂದು ‘ಆಪರೇಷನ್ ಸಿಂದೂರ್’ ನಡೆಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತ ಈ ಕಾರ್ಯಾಚರಣೆ ನಡೆಸಿತು.
ವಿಶ್ವಸಂಸ್ಥೆಯಲ್ಲಿ ಪಾಕ್ ಹೇಳಿಕೆಗೆ ಭಾರತದ ಪ್ರತಿಕ್ರಿಯೆ:
Indian diplomat R. Srinivas laughs off as Pakistan PM Shehbaz Sharif begins claiming about Pakistani "victory" during May 2025 conflict during UN Speech pic.twitter.com/ijxXHxRebY
— Sidhant Sibal (@sidhant) September 25, 2026
ತಮ್ಮ UNGA ಭಾಷಣದಲ್ಲಿ ಶೆಹಬಾಜ್, ಭಾರತದ ದಾಳಿಗೆ ಪಾಕಿಸ್ತಾನದ ಸೇನೆ “ನಿಖರತೆ ಮತ್ತು ವೃತ್ತಿಪರತೆಯಿಂದ ಪ್ರತಿಕ್ರಿಯಿಸಿತು” ಎಂದು ಹೇಳಿದರು. ಪಾಕಿಸ್ತಾನ ಸೇನೆ ಭಾರತದ ದಾಳಿಯನ್ನು ಹಿಮ್ಮೆಟ್ಟಿಸಿ, ಭಾರತಕ್ಕೆ ʼಪಾಠ ಕಲಿಸಿತುʼ ಎಂಬ ರೀತಿಯಲ್ಲಿ ಅವರು ಹೇಳಿಕೆ ನೀಡಿದರು.
ಭಾರತದ ವಿರುದ್ಧ ಭಯೋತ್ಪಾದನೆ ಆರೋಪಿಸಿದ ಪಾಕಿಸ್ತಾನ ಪತ್ರಕರ್ತ; ಎಸ್. ಜೈಶಂಕರ್ ಖಡಕ್ ಪ್ರತಿಕ್ರಿಯೆ
ಈ ಹೇಳಿಕೆಗಳ ನಡುವೆ ಕ್ಯಾಮೆರಾ ಭಾರತದ ಪ್ರತಿನಿಧಿ ಆರ್. ಶ್ರೀನಿವಾಸ್ ಅವರತ್ತ ತಿರುಗಿತು. ಅವರು ತಲೆ ಅಲ್ಲಾಡಿಸುತ್ತಾ ಸಣ್ಣ ನಗು ಬೀರುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.
ಟ್ರಂಪ್ ಮಧ್ಯ ಪ್ರವೇಶದ ಬಗ್ಗೆ ಶೆಹಬಾಜ್ ಹೇಳಿಕೆ
ಇದೇ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶೆಹಬಾಜ್ ಷರೀಫ್ ಶ್ಲಾಘಿಸಿದರು. 2025ರ ಭಾರತ–ಪಾಕಿಸ್ತಾನ ಸಂಘರ್ಷದ ವೇಳೆ ಟ್ರಂಪ್ ಅವರ ʼಸಮಯೋಚಿತ ಮಧ್ಯ ಪ್ರವೇಶʼದಿಂದ ಮತ್ತಷ್ಟು ಸಂಘರ್ಷ ತಪ್ಪಿತು ಎಂದು ಅವರು ಹೇಳಿದರು.
ಆದರೆ, ಭಾರತವು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿಲ್ಲ ಎಂಬ ನಿಲುವನ್ನು ಪುನರುಚ್ಚರಿಸಿದೆ. ಸಂಘರ್ಷದ ಬಳಿಕದ ಕದನ ವಿರಾಮವು ಭಾರತ ಮತ್ತು ಪಾಕಿಸ್ತಾನದ ನಡುವಿನ ನೇರ ಸಂವಹನದ ಮೂಲಕವೇ ನಡೆದಿತ್ತು ಎಂದು ನವದೆಹಲಿ ಹೇಳಿದೆ.
ಶೆಹಬಾಜ್ ಅವರ ಭಾಷಣದಲ್ಲಿ ಕಾಶ್ಮೀರ ವಿಚಾರವೂ ಪ್ರಸ್ತಾಪವಾಗಿದ್ದು, ಭಾರತ–ಪಾಕಿಸ್ತಾನ ನಡುವಿನ ಹಳೆಯ ರಾಜತಾಂತ್ರಿಕ ಭಿನ್ನಾಭಿಪ್ರಾಯಗಳು ಮತ್ತೊಮ್ಮೆ UNGA ವೇದಿಕೆಯಲ್ಲಿ ಮುನ್ನೆಲೆಗೆ ಬಂದಿವೆ.