ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶೇಖ್ ಹಸೀನಾ ಮರಳುವ ಮುನ್ಸೂಚನೆ ಬೆನ್ನಲ್ಲೇ ಬಾಂಗ್ಲಾದೇಶ ಅಧ್ಯಕ್ಷ ಶಹಾಬುದ್ದೀನ್ ರಾಜೀನಾಮೆ ಸಾಧ್ಯತೆ

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಈ ವರ್ಷಾಂತ್ಯಕ್ಕೆ ಢಾಕಾಕ್ಕೆ ಮರಳುವ ಯೋಜನೆಯನ್ನು ವ್ಯಕ್ತಪಡಿಸಿದ ಬೆನ್ನಲ್ಲೇ ಬಾಂಗ್ಲಾದೇಶದ ರಾಜಕೀಯದಲ್ಲಿ ತಲ್ಲಣ ಉಂಟಾಗಿದೆ. ಬಾಂಗ್ಲಾದೇಶ ಅಧ್ಯಕ್ಷ ಶಹಾಬುದ್ದೀನ್ ಅವರು ತಮ್ಮ ಅಧಿಕಾರಾವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಗ್ರಹ ಚಿತ್ರ

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಅವಾಮಿ ಲೀಗ್ (Awami League) ನಾಯಕಿ ಶೇಖ್‌ ಹಸೀನಾ (Sheikh Hasina row) ಅವರು ಸ್ವದೇಶಕ್ಕೆ ಮರಳುವ ಮುನ್ಸೂಚನೆ ಬೆನ್ನಲ್ಲೇ ಬಾಂಗ್ಲಾದೇಶ ಅಧ್ಯಕ್ಷ ಶಹಾಬುದ್ದೀನ್ (President Shahabuddin) ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಶೇಖ್ ಹಸೀನಾ ಅವರ ವಿರುದ್ಧ ಅಸಮಾಧಾನಗಳು ಹೆಚ್ಚಾಗಿರುವಾಗಲೇ ಅವರು ಈ ವರ್ಷಾಂತ್ಯಕ್ಕೆ ಸ್ವದೇಶಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಈ ಮಧ್ಯೆ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ತಮ್ಮ ಅಧಿಕಾರಾವಧಿ ಮುಗಿಯಲು ಸುಮಾರು ಎರಡು ವರ್ಷಗಳ ಇರುವಾಗಲೇ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಹೀಗಾಗಿ ದೇಶದಲ್ಲಿ ಮಧ್ಯಂತರ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ.

ಶೇಖ್ ಹಸೀನಾ ಅವರು ದೇಶದ ಪ್ರಧಾನಿಯಾಗಿದ್ದಾಗ ಆಯ್ಕೆಯಾಗಿದ್ದ ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ಅಧಿಕಾರಾವಧಿ ಇನ್ನು ಎರಡು ವರ್ಷಗಳಿವೆ. 2024ರ ಜುಲೈ-ಆಗಸ್ಟ್ ನಲ್ಲಿ ದೇಶಾದ್ಯಂತ ನಡೆದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯಿಂದಾಗಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ದೇಶ ಬಿಡಬೇಕಾಯಿತು. ಅವರ ನೇತೃತ್ವದ ಅವಾಮಿ ಲೀಗ್ ಸರ್ಕಾರ ಉರುಳಿದ ಬಳಿಕ ಅವರ ಪಕ್ಷ ಆಯ್ಕೆ ಮಾಡಿರುವ ಸಾಂವಿಧಾನಿಕ ಹುದ್ದೆಯಲ್ಲಿರುವ ಏಕೈಕ ವ್ಯಕ್ತಿಯಾಗಿದ್ದಾರೆ ಮೊಹಮ್ಮದ್ ಶಹಾಬುದ್ದೀನ್.

ರಾಮ ಮಂದಿರ ದೇಣಿಗೆ ಕಳ್ಳತನ ವಿವಾದ: ಅಯೋಧ್ಯೆಯಲ್ಲಿ ಮಠಾಧೀಶರೊಂದಿಗೆ ಸಭೆ ನಡೆಸಲಿರುವ ಆರ್‌ಎಸ್‌ಎಸ್, ವಿಎಚ್‌ಪಿ ನಾಯಕರು

ಪ್ರಸ್ತುತ ದೇಶದ ಪ್ರಧಾನಿಯಾಗಿರುವ ತಾರಿಕ್ ರೆಹಮಾನ್ ಅವರ ಸರ್ಕಾರದೊಂದಿಗೆ ಶಹಾಬುದ್ದೀನ್ ಅವರ ಸಂಬಂಧ ಚೆನ್ನಾಗಿಲ್ಲ ಎನ್ನಲಾಗಿದೆ. ಶಹಾಬುದ್ದೀನ್ ಅವರು ಶೀಘ್ರದಲ್ಲೇ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಆಡಳಿತಾರೂಢ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಹಿರಿಯ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇತ್ತೀಚೆಗೆ ಶಹಾಬುದ್ದೀನ್ ಅವರು ಹಸೀನಾ ಅವರೊಂದಿಗೆ ಸಂಪರ್ಕ ಸ್ಥಾಪಿಸಲು ಪ್ರಯತ್ನಿಸಿದ್ದರು. ಇದರಿಂದ ಸರ್ಕಾರ ಅವರ ಬಗ್ಗೆ ನಂಬಿಕೆ ಕಳೆದುಕೊಂಡಿದೆ. ಶಹಾಬುದ್ದೀನ್ ಮತ್ತು ಹಸೀನಾ ನಡುವೆ ಇತ್ತೀಚೆಗೆ ದೂರವಾಣಿ ಸಂಭಾಷಣೆ ನಡೆದಿದೆ. ಇದರ ಬಳಿಕ ಹಸೀನಾ ಅವರು ಸ್ವದೇಶಕ್ಕೆ ಮರಳುವ ನಿರ್ಧಾರವನ್ನು ಪ್ರಕಟಿಸಿದ್ದರು. ಇದರಿಂದ ದೇಶದಲ್ಲಿ ರಾಜಕೀಯ ಉದ್ವಿಗ್ನತೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಭಾರತದಲ್ಲಿರುವ ಶೇಖ್ ಹಸೀನಾ ಅವರು ಈ ತಿಂಗಳ ಆರಂಭದಲ್ಲಿ ವರ್ಷಾಂತ್ಯದೊಳಗೆ ಬಾಂಗ್ಲಾದೇಶಕ್ಕೆ ಮರಳುವುದಾಗಿ ಹೇಳಿದರು. ಇದರ ಬಳಿಕ ಬಾಂಗ್ಲಾದೇಶ ಸರ್ಕಾರವು, ಅವರನ್ನು ದೇಶಕ್ಕೆ ಸ್ವಾಗತಿಸಲಾಗುತ್ತದೆ. ಆದರೆ ಅವರು ನ್ಯಾಯವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಸಂಸತ್ತಿನಲ್ಲಿ 18 ಗಂಟೆಗಳ ಚರ್ಚೆಗೂ ಸಿದ್ಧ ಎಂದ ಕೇಂದ್ರ ಸರ್ಕಾರ

2025ರ ನವೆಂಬರ್ 17ರಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು 2024ರ ದಂಗೆ ಪ್ರಕರಣಕ್ಕೆ ಸಂಬಂಧಿಸಿ ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರಿಗೆ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಿ ಮರಣದಂಡನೆಯನ್ನು ವಿಧಿಸಿತ್ತು. ಹೀಗಾಗಿ ಶೇಖ್ ಹಸೀನಾ ಅವರು ಬಾಂಗ್ಲಾದೇಶಕ್ಕೆ ಮರಳಿದ ತಕ್ಷಣ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ವಿದ್ಯಾ ಇರ್ವತ್ತೂರು

View all posts by this author